ಮನೆ ಕಟ್ಟುವುದು ಅಥವಾ ಕೊಳ್ಳುವುದು ಅತಿ ದೊಡ್ಡ ಕನಸು. ಏಕೆಂದರೆ ಇದು ದೀರ್ಘಾವಧಿಯ ಕಮಿಟ್ಮೆಂಟ್. ಸ್ಥಿರವಾದ ಆದಾಯ ಇರುವ ವೇತನದಾರರಿಗೆ ಹೋಮ್ ಲೋನ್ ಪಡೆಯುವುದು ಬಲು ಸಲೀಸು. ಆದರೆ ಸ್ವ ಉದ್ಯೋಗಿಗಳಿಗೆ ಈ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಇರುವುದು ಹೌದು. ಕೆಲವು ಬ್ಯಾಂಕ್ಗಳು ಸ್ವ ಉದ್ಯೋಗಿಗಳಿಗೆ ಹೆಚ್ಚಿನ ಬಡ್ಡಿಯನ್ನು ವಿಧಿಸುತ್ತವೆ. ಹಬ್ಬದ ಋತುವಿನ ಪ್ರಯುಕ್ತ ಬ್ಯಾಂಕ್ಗಳಿಂದ ರಿಯಾಯಿತಿ ಘೋಷಣೆ ಮಾಡಲಾಗಿದೆ. ವೇತನದಾರರನ್ನು ಹೊರತುಪಡಿಸಿ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಹೋಮ್ ಲೋನ್ ನೀಡುವ ಬ್ಯಾಂಕ್ಗಳು ಹಾಗೂ ಹೌಸಿಂಗ್ ಫೈನಾನ್ಸ್ ಕಂಪೆನಿಗಳ ಬಗ್ಗೆ ವಿವರ ಇಲ್ಲಿದೆ.
ಅತ್ಯುತ್ತಮ ಬ್ಯಾಂಕ್ಗಳು
ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಅತ್ಯಂತ ಅಗ್ಗದ ಬಡ್ಡಿ ದರದಲ್ಲಿ ವೇತನದಾರರನ್ನು ಹೊರತುಪಡಿಸಿದವರಿಗೆ ಗೃಹಸಾಲ ಒದಗಿಸುತ್ತದೆ. 20 ವರ್ಷಗಳ ಅವಧಿಗೆ ಬಡ್ಡಿ ದರ ಶೇ 6.55ರಿಂದ ಆರಂಭವಾಗುತ್ತದೆ.
ಕೊಟಕ್ ಮಹೀಂದ್ರಾ ಬ್ಯಾಂಕ್ ಇದರಲ್ಲಿ ಎರಡನೇ ಸ್ಥಾನದಲ್ಲಿದೆ. ವೇತನದಾರರನ್ನು ಹೊರತುಪಡಿಸಿದವರಿಗೆ ಶೇ 6.6ರ ಬಡ್ಡಿ ದರ ಇದೆ. ಬಾಕಿ ವರ್ಗಾವಣೆಗೆ ಕೂಡ ಇದೇ ಬಡ್ಡಿ ದರ ಅನ್ವಯ ಆಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ದೇಶದ ಅತಿ ದೊಡ್ಡ ಬ್ಯಾಂಕ್ ಆಗಿದ್ದು, ವೇತನದಾರರಲ್ಲದವರಿಗೆ ಶೇ 6.7ರ ಬಡ್ಡಿ ದರದಲ್ಲಿ ಗೃಹ ಸಾಲ ಒದಗಿಸುತ್ತದೆ. ಇನ್ನು ಎಚ್ಡಿಎಫ್ಸಿ ಬ್ಯಾಂಕ್ ಕೂಡ ಇದೇ ಬಡ್ಡಿ ದರದಲ್ಲಿ ಗೃಹಸಾಲ ಒದಗಿಸುತ್ತದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಶೇ 6.75ರಷ್ಟು ಬಡ್ಡಿ ವಿಧಿಸುತ್ತದೆ. ಇದೇ ದರವು ವೇತನದಾರರು ಹಾಗೂ ವೇತನದಾರರಲ್ಲದವರಿಗೂ ಅನ್ವಯ ಆಗುತ್ತದೆ. ಐಡಿಬಿಐ ಬ್ಯಾಂಕ್ ಸಹ ಇದೇ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ.
ಖಾಸಗಿ ವಲಯದ ಎರಡನೇ ಅತಿ ದೊಡ್ಡ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ವೇತನದಾರರು, ವೇತನದಾರರಲ್ಲದವರು ಇಬ್ಬರಿಗೂ ಶೇ 6.75ರಿಂದ ಬಡ್ಡಿ ದರ ಶುರುವಾಗುತ್ತದೆ.
ಉತ್ತಮ ಹೌಸಿಂಗ್ ಫೈನಾನ್ಸ್ ಕಂಪೆನಿಗಳು (ಎಚ್ಎಫ್ಸಿ)
ಬ್ಯಾಂಕ್ಗಳಂತೆಯೇ ಹೌಸಿಂಗ್ ಫೈನಾನ್ಸ್ ಕಂಪೆನಿಗಳು ಸಹ ಹೋಮ್ ಲೋನ್ ಒದಗಿಸುತ್ತವೆ. ಇದರಲ್ಲಿ ಎಲ್ಐಸಿ ಹೌಸಿಂಗ್ ಫೈನಾನ್ಸ್ನಿಂದ ಶೇ 6.66ರ ಬಡ್ಡಿ ದರದಲ್ಲಿ ಹೌಸಿಂಗ್ ಲೋನ್ ಒದಗಿಸುತ್ತಿದೆ. ಎಚ್ಡಿಎಫ್ಸಿ ಮತ್ತು ಟಾಟಾ ಕ್ಯಾಪಿಟಲ್ ಇವೆರಡೂ ವೇತನದಾರರನ್ನು ಹೊರತುಪಡಿಸಿದವರಿಗೆ ಶೇ 6.7ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ.
ಇದನ್ನೂ ಓದಿ: Home Loan EMI: ಅಬ್ಬಾ! ಹೋಮ್ ಲೋನ್ ಮರುಪಾವತಿಯಲ್ಲೂ ಎಷ್ಟೊಂದು ಬಗೆ?