
ನವದೆಹಲಿ, ಮೇ 29: ಹಿಂಡನ್ಬರ್ಗ್ ವರದಿಯೊಂದರಲ್ಲಿ ಮಾಡಲಾಗಿರುವ ಆರೋಪಗಳ ಆಧಾರದ ಮೇಲೆ ದಾಖಲಾದ ದೂರುಗಳ ಸಂಬಂಧ ಲೋಕಪಾಲ್ ಸಂಸ್ಥೆಯು (Lokpal) ಮಾಜಿ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ (Madhabi Puri Buch) ಅವರಿಗೆ ಕ್ಲೀನ್ ಚಿಟ್ ನೀಡಿದೆ. ಅದಾನಿ ಗ್ರೂಪ್ ಜೊತೆ ಮಾಧವಿ ಪುರಿ ಅವರಿಗೆ ನಂಟಿದೆ ಎಂದು ಹಿಂಡನ್ಬರ್ಗ್ ವರದಿಯಲ್ಲಿ (Hindenburg report) ಹೇಳಲಾಗಿತ್ತು. ಆ ಅಂಶ ಇಟ್ಟುಕೊಂಡು ಭ್ರಷ್ಟಾಚಾರ ವಿರೋಧಿ ತನಿಖಾ ಸಂಸ್ಥೆಯಾದ ಲೋಕಪಾಲ್ನಲ್ಲಿ ಮೂರು ದೂರುಗಳು ದಾಖಲಾಗಿದ್ದವು. ಈ ಸಂಬಂಧ ವಿಚಾರಣೆ ನಡೆಸಿದ ಲೋಕಪಾಲ್ ನ್ಯಾಯಪೀಠವು, ಮಾಧವಿ ಪುರಿ ಬುಚ್ ವಿರುದ್ಧ ತನಿಖೆಯ ಅಗತ್ಯ ಇಲ್ಲವೆಂದು ಅಭಿಪ್ರಾಯಪಟ್ಟಿದೆ.
ಮಾಧಬಿ ಪುರಿ ಪುಚ್ ಮತ್ತವರ ಪತಿ ಧವಳ್ ಬುಚ್ ವಿರುದ್ಧ ದೂರುಗಳಿದ್ದುವು. ಹಿಂಡನ್ಬರ್ಗ್ನ ಮೊದಲ ವರದಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಗಂಭೀರ ಆರೋಪಗಳು ಬಂದಿದ್ದುವು. ಆ ಸಂಬಂಧ ಕೋರ್ಟ್ ಆದೇಶದ ಮೇರೆಗೆ ಸೆಬಿ ತನಿಖೆ ನಡೆಸಿತ್ತು. ಅಂದಿನ ಸೆಬಿ ಮುಖ್ಯಸ್ಥೆಯಾಗಿದ್ದು ಮಾಧಬಿ ಅವರೆಯೇ. ತನಿಖೆ ನಡೆಸಿದ ಸೆಬಿ, ಅದಾನಿ ಗ್ರೂಪ್ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂದು ವರದಿ ಸಲ್ಲಿಸಿತು.
ಇದನ್ನೂ ಓದಿ: ವಯಸ್ಸಾದವರು ನಿರುಪಯುಕ್ತರಲ್ಲ; ದೇಶದ ಸಂಪತ್ತಿಗೆ ಕೊಡುಗೆ ನೀಡಬಲ್ಲರು: ರೋಹಿಣಿ ನಿಲೇಕಣಿ ಫಿಲಾಂಟ್ರೋಪೀಸ್
ಈ ವೇಳೆ ಮತ್ತೊಂದು ವರದಿ ಬಿಡುಗಡೆ ಮಾಡಿದ ಹಿಂಡನ್ಬರ್ಗ್ ಸಂಸ್ಥೆ, ಮಾಧಬಿ ಪುರಿ ಬುಚ್ ಅವರು ಹೇಗೆ ಅದಾನಿ ಗ್ರೂಪ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಹೊಸ ಆರೋಪಗಳನ್ನು ಮಾಡಿತು. ಮಾಧವಿ ಮತ್ತವರ ಪತಿಯು ಹೂಡಿಕೆ ಮಾಡಿರುವ ಫಂಡ್ಗಳು ಅದಾನಿ ಕಂಪನಿಗಳೊಂದಿಗೆ ಲಿಂಕ್ ಆಗಿವೆ ಎಂಬುದು ಒಂದು ಗಂಭೀರ ಆರೋಪ. ಇದೂ ಸೇರಿದಂತೆ ಇನ್ನೂ ಬೇರೆ ಬೇರೆ ಆರೋಪಗಳನ್ನು ಮಾಧವಿ ವಿರುದ್ಧ ಮಾಡಲಾಗಿತ್ತು.
ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೋಯಿತ್ರ ಸೇರಿದಂತೆ ಮೂವರು ವ್ಯಕ್ತಿಗಳು ಹಿಂಡನ್ಬರ್ಗ್ ವರದಿಯನ್ನಾಧರಿಸಿ ಮಾಧಬಿ ಪುರಿ ಬುಚ್ ವಿರುದ್ಧ ದೂರು ದಾಖಲಿಸಿದರು.
ಇದನ್ನೂ ಓದಿ: ತೀವ್ರ ನಷ್ಟಕ್ಕೊಳಗಾಗಿದ್ದ ಸಾರ್ವಜನಿಕ ವಲಯ ಲಾಭದ ಉತ್ತುಂಗದಲ್ಲಿದೆ; ಸಚಿವ ಕಿಶನ್ ರೆಡ್ಡಿ
ಲೋಕಪಾಲ್ ಅಧ್ಯಕ್ಷರಾದ ನ್ಯಾ| ಎ.ಎಂ. ಖನ್ವಿಲ್ಕರ್ ನೇತೃತ್ವದ ಆರು ಸದಸ್ಯರಿರುವ ಪೀಠವು ಈ ದೂರುಗಳಲ್ಲಿನ ಪ್ರಮುಖ ಐದು ಅಂಶಗಳನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿ 116 ಪುಟಗಳ ತೀರ್ಪನ್ನು ನಿನ್ನೆ (ಮೇ 28) ನೀಡಿತು. ಆರೋಪಗಳನ್ನು ನಿರೂಪಿಸಬಲ್ಲ ನಂಬಲರ್ಹ ದಾಖಲೆಗಳು ಇಲ್ಲ. ಇದು ಕೆಲ ಪೂರ್ವಗ್ರಹ ಪೀಡಿತ ಆರೋಪದಂತೆ ಕಾಣುತ್ತಿದೆ. ಈ ಪ್ರಕರಣವನ್ನು ತನಿಖೆ ನಡೆಸುವ ಅವಶ್ಯಕತೆ ಇಲ್ಲ ಎಂದು ಲೋಕಪಾಲ್ ಪೀಠ ತೀರ್ಮಾನಿಸಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ