ಹಿಂದೂಜಾ ಗ್ಲೋಬಲ್ ಸಲ್ಯೂಷನ್ಸ್​ನಿಂದ 150 ರೂ. ಡಿವಿಡೆಂಡ್, 1:1 ಬೋನಸ್ ಷೇರು ಘೋಷಣೆ

ಹಿಂದೂಜಾ ಗ್ಲೋಬಲ್ ಸಲ್ಯೂಷನ್ಸ್​ನಿಂದ 150 ರೂ. ಡಿವಿಡೆಂಡ್, 1:1 ಬೋನಸ್ ಷೇರು ಘೋಷಣೆ
ಸಾಂದರ್ಭಿಕ ಚಿತ್ರ

ಹಿಂದೂಜಾ ಗ್ಲೋಬಲ್ ಸಲ್ಯೂಷನ್ಸ್ ಲಿಮಿಟೆಡ್​ನಿಂದ ಪ್ರತಿ ಷೇರಿಗೆ 150 ರೂಪಾಯಿ ಮಧ್ಯಂತರ ಲಾಭಾಂಶ ಹಾಗೂ 1:1 ಬೋನಸ್ ಷೇರು ಘೋಷಣೆ ಮಾಡಲಾಗಿದೆ.

TV9kannada Web Team

| Edited By: Srinivas Mata

Jan 06, 2022 | 11:27 PM

ಹಿಂದೂಜಾ ಗ್ರೂಪ್‌ನ ಬಿಜಿನೆಸ್ ಪ್ರೊಸೆಸ್ ಮ್ಯಾನೇಜ್​ಮೆಂಟ್​ ಸಂಸ್ಥೆಯ ಮ್ಯಾನೇಜ್​ಮೆಂಟ್​ ಸಂಸ್ಥೆ ಹಿಂದೂಜಾ ಗ್ಲೋಬಲ್ ಸಲ್ಯೂಷನ್ಸ್ (HGS) ಜನವರಿ 6ನೇ ತಾರೀಕಿನ ಗುರುವಾರದಂದು ಪ್ರಸಕ್ತ ಹಣಕಾಸು ವರ್ಷ FY22ಕ್ಕಾಗಿ ಪ್ರತಿ ಷೇರಿಗೆ ರೂ. 150ರ ಮೂರನೇ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಕಂಪೆನಿಯು ಈ ಲಾಭಾಂಶವನ್ನು ಪಾವತಿಸಲು ಜನವರಿ 18 ಅನ್ನು ದಾಖಲೆ ದಿನಾಂಕವಾಗಿ (Record date) ನಿಗದಿಪಡಿಸಿದೆ. ಲಾಭಾಂಶವನ್ನು ಅರ್ಹ ಷೇರುದಾರರು ಮತ್ತು ಸದಸ್ಯರಿಗೆ ಜನವರಿ 27ರಂದು ಅಥವಾ ಮೊದಲು ಪಾವತಿಸಲಾಗುತ್ತದೆ. ಅಲ್ಲದೆ, ಕಂಪೆನಿಯ ಮಂಡಳಿಯು 1:1ರ ಅನುಪಾತದಲ್ಲಿ ಹೊಸ ಬೋನಸ್ ಷೇರುಗಳ ವಿತರಣೆಯ ಶಿಫಾರಸನ್ನು ಅನುಮೋದಿಸಿದೆ. ಅಂದರೆ ಕಂಪೆನಿಯಲ್ಲಿ ಷೇರುದಾರರು ಹೊಂದಿರುವ ಪ್ರತಿ ಷೇರಿಗೆ ಹೂಡಿಕೆದಾರರು ಹೆಚ್ಚುವರಿ ಪಾಲನ್ನು ಪಡೆಯುತ್ತಾರೆ.

ಷೇರುಗಳ ಲಿಕ್ವಿಡಿಟಿಯನ್ನು ಹೆಚ್ಚಿಸಲು ಮತ್ತು ಸ್ಟಾಕ್ ಬೆಲೆಯನ್ನು ಕಡಿಮೆ ಮಾಡಿ, ಹೂಡಿಕೆದಾರರಿಗೆ ಕೈಗೆಟುಕುವಂತೆ ಮಾಡಲು ಗುರಿಯೊಂದಿಗೆ ಕಂಪೆನಿಯು ತಮ್ಮ ಷೇರುದಾರರಿಗೆ ಬೋನಸ್ ಷೇರುಗಳನ್ನು ನೀಡುತ್ತದೆ. ಸಂಪೂರ್ಣವಾಗಿ ಪಾವತಿಸಿದ ಬೋನಸ್ ಷೇರುಗಳನ್ನು ಹೆಚ್ಚುವರಿಯಾಗಿ ಕಂಪೆನಿಯು ತನ್ನ ಅಸ್ತಿತ್ವದಲ್ಲಿರುವ ಷೇರುದಾರರಿಗೆ ನೀಡುತ್ತದೆ. ಸಂಸ್ಥೆಯು ಬೋನಸ್ ಷೇರುಗಳನ್ನು ನೀಡಿದಾಗ ಅದರ ಷೇರುದಾರರು ಅವುಗಳನ್ನು ಪಡೆಯಲು ಯಾವುದೇ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗಿಲ್ಲ. ಇನ್ನು ಸ್ವೀಕರಿಸುವ ಬೋನಸ್ ಷೇರುಗಳ ಸಂಖ್ಯೆಯು ನೀವು ಈಗಾಗಲೇ ಹೊಂದಿರುವ ಸಂಸ್ಥೆಯ ಷೇರುಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.

ಸಂಸ್ಥೆಯು ನಿರ್ಧರಿಸುವ ರೆಕಾರ್ಡ್ ದಿನಾಂಕದ ಮೊದಲು ಸಂಸ್ಥೆಯ ಷೇರುಗಳನ್ನು ಹೊಂದಿರುವ ಎಲ್ಲ ಷೇರುದಾರರು ಬೋನಸ್ ಷೇರುಗಳಿಗೆ ಅರ್ಹರಾಗಿರುತ್ತಾರೆ. ಹಿಂದೂಜಾ ಗ್ಲೋಬಲ್ ಸಲ್ಯೂಷನ್ಸ್ ತನ್ನ ಆರೋಗ್ಯ ಸೇವೆಗಳ ವ್ಯವಹಾರವನ್ನು ಏಷ್ಯಾದ ಅತಿದೊಡ್ಡ ಖಾಸಗಿ ಪರ್ಯಾಯ ಹೂಡಿಕೆ ಸಂಸ್ಥೆಗಳಲ್ಲಿ ಒಂದಾದ ಬೇರಿಂಗ್ ಪ್ರೈವೇಟ್ ಇಕ್ವಿಟಿ ಏಷ್ಯಾ (BPEA) ಸಂಪೂರ್ಣ ಒಡೆತನದ ಅಂಗಸಂಸ್ಥೆ ಬೀಟೈನ್ BVಗೆ ಮಾರಾಟವನ್ನು ಪೂರ್ಣಗೊಳಿಸಿದೆ. ಈ ವಹಿವಾಟು ಮುಕ್ತಾಯದ ಹೊಂದಾಣಿಕೆಗಳಿಗೆ ಒಳಪಟ್ಟಿದ್ದು, 1,200 ಮಿಲಿಯನ್‌ ಡಾಲರ್​ನ ಎಂಟರ್‌ಪ್ರೈಸ್ ಮೌಲ್ಯವನ್ನು ಆಧರಿಸಿದೆ. ಮತ್ತು 1,088 ಮಿಲಿಯನ್ ಡಾಲರ್ ಒಳಹರಿವಿಗೆ ಕಾರಣವಾಗಿದೆ.

ಈ ಮಾರಾಟದ ಭಾಗವಾಗಿ HGS ಎಲ್ಲ ಕ್ಲೈಂಟ್ ಒಪ್ಪಂದಗಳು, ಆರೋಗ್ಯ ಸೇವೆಗಳ ವ್ಯವಹಾರಕ್ಕೆ ಸಂಬಂಧಿಸಿದ ಮೂಲಸೌಕರ್ಯ ಸೇರಿ ಸ್ವತ್ತುಗಳನ್ನು ಖರೀದಿದಾರರಿಗೆ ವರ್ಗಾಯಿಸಿದೆ. ಅಮೆರಿಕ, ಭಾರತ, ಜಮೈಕಾ ಮತ್ತು ಫಿಲಿಪೈನ್ಸ್ – ನಾಲ್ಕು ಭೌಗೋಳಿಕಗಳಲ್ಲಿ HGSನಿಂದ 29,000ಕ್ಕೂ ಹೆಚ್ಚು ಉದ್ಯೋಗಿಗಳು ಜನವರಿ 6ರಿಂದ ಹೊಸ ಸಂಸ್ಥೆಯನ್ನು ಸೇರಿಕೊಳ್ಳುತ್ತಾರೆ. ಗುರುವಾರದಂದು ಹಿಂದೂಜಾ ಗ್ಲೋಬಲ್ ಸಲ್ಯೂಷನ್ಸ್ ಷೇರುಗಳು ಎನ್‌ಎಸ್‌ಇಯಲ್ಲಿ ಶೇ 0.20 ಕುಸಿದು, ರೂ. 3,584ಕ್ಕೆ ತಲುಪಿದವು. ಕಳೆದ ಒಂದು ವರ್ಷದಲ್ಲಿ ಈ ಸ್ಟಾಕ್ ಶೇ 209.07 ಏರಿಕೆಯಾಗಿದ್ದು, ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದೆ.

ಇದನ್ನೂ ಓದಿ: Multibagger Stocks: ಏನಿದು ಮಲ್ಟಿಬ್ಯಾಗರ್ ಸ್ಟಾಕ್? ಇದನ್ನು ಗುರುತಿಸುವುದು ಹೇಗೆ ತಿಳಿಯಿರಿ

Follow us on

Related Stories

Most Read Stories

Click on your DTH Provider to Add TV9 Kannada