ಮುಂಬೈ, ನವೆಂಬರ್ 26: ತಡರಾತ್ರಿ ಮೃತಪಟ್ಟ ಎಸ್ಸಾರ್ ಗ್ರೂಪ್ ಸಹ-ಸಂಸ್ಥಾಪಕ ಶಶಿಕಾಂತ್ ರೂಯಾ ಅವರು ಅಸಾಮಾನ್ಯ ಬಿಸಿನೆಸ್ಮ್ಯಾನ್ ಎನಿಸಿದ್ದರು. ಹಣ, ಆಸ್ತಿ ವಿಚಾರಕ್ಕೆ ಎಂತೆಂತಹ ಕುಟುಂಬಗಳು ಪರಸ್ಪರ ಕಚ್ಚಾಡಿಕೊಂಡು ಹಾದಿರಂಪ ಬೀದಿರಂಪ ಮಾಡಿಕೊಂಡ ಘಟನೆಗಳು ಹಲವಿವೆ. ಅಂಥದ್ದರಲ್ಲಿ ಹಲವು ದಶಕಗಳಿಂದ ಯಾವುದೇ ವೈಮಸ್ಸು ಇಲ್ಲದೇ ಬಿಸಿನೆಸ್ ನಡೆಸಿಕೊಂಡು ಹೋಗುತ್ತಿರುವ ಕೆಲವೇ ಬಿಸಿನೆಸ್ ಫ್ಯಾಮಿಲಿಗಳಲ್ಲಿ ರೂಯಾ ಒಂದು. ಇದರ ಮುಂದಾಳತ್ವ ವಹಿಸಿದ್ದು ಇದೇ ಶಶಿಕಾಂತ್ ರೂಯಾ. ಫ್ಯಾಮಿಲಿ ಬಾಂಡಿಂಗ್ ಮಾತ್ರವಲ್ಲ, ದಿವಾಳಿ ಎದ್ದ ಸಂದರ್ಭದಲ್ಲೂ ದೃತಿಗೆಡದೆ ಪುಟಿದೆದ್ದು ಎಲ್ಲಾ ಸಾಲ ತೀರಿಸಿ ಮತ್ತೆ ಬಿಸಿನೆಸ್ ಕಟ್ಟಿದ ರೀತಿ ನಿಜಕ್ಕೂ ಆದರ್ಶಪ್ರಾಯವೇ ಸರಿ.
ಶಶಿಕಾಂತ್ ರೂಯಾ ದೊಡ್ಡ ಬಿಸಿನೆಸ್ ಫ್ಯಾಮಿಲಿ ಹಿನ್ನೆಲೆಯವರಲ್ಲ. ಅವರ ತಂದೆಯದ್ದು ಸಣ್ಣ ಬಿಸಿನೆಸ್ ಇತ್ತು. ಶಶಿಕಾಂತ್ ರೂಯಾ ವಿದೇಶಕ್ಕೆ ಓದಲು ಹೋಗಬೇಕಿತ್ತು. ಆದರೆ, ಬೇಡ ಎಂದು ನಿರ್ಧರಿಸಿ ಸಣ್ಣ ವಯಸ್ಸಿನಲ್ಲೇ ಫ್ಯಾಮಿಲಿ ಬಿಸಿನೆಸ್ನಲ್ಲಿ ತೊಡಗಿ ಅದರಲ್ಲಿ ತಮ್ಮ ಚಾಕಚಕ್ಯತೆ ಸಾಬೀತುಪಡಿಸಿದ್ದರು.
1969ರಲ್ಲಿ ಅವರು ಹಾಗೂ ಸೋದರ ರವಿ ರೂಯಾ ಇಬ್ಬರೂ ಸೇರಿ ಎಸ್ಸಾರ್ ಕಂಪನಿಯನ್ನು ಸ್ಥಾಪಿಸಿದ್ದರು. ಕಟ್ಟಡ ನಿರ್ಮಾಣದಿಂದ ಆರಂಭವಾದ ಅದರ ಬಿಸಿನೆಸ್ ಬೇರೆ ಬೇರೆ ವಲಯಗಳಿಗೆ ವಿಸ್ತರಣೆ ಆಗತೊಡಗಿತು. ಕಟ್ಟಡ, ಸೇತುವೆ, ಅಣೆಕಟ್ಟು, ವಿದ್ಯುತ್ ಸ್ಥಾವರಗಳನ್ನು ಕಟ್ಟುವ ಪ್ರಾಜೆಕ್ಟ್ಗಳು ಸಿಕ್ಕವು. ಬಳಿಕ ಎಂಬತ್ತರ ದಶಕದೊಳಗೆ ಅವರ ಸಂಸ್ಥೆಯು ಇಂಧನ ಉತ್ಪಾದನೆಗೆ ತೊಡಗಿಸಿಕೊಂಡಿತು. ಬಳಿಕ ಉಕ್ಕು ಕಾರ್ಖಾನೆ, ಟೆಲಿಕಮ್ಯೂನಿಕೇಶನ್ ಕಂಪನಿಗಳ ಸ್ಥಾಪನೆಯಾಯಿತು.
ಇದನ್ನೂ ಓದಿ: ಎಸ್ಸಾರ್ ಗ್ರೂಪ್ ಸಹ-ಸಂಸ್ಥಾಪಕ ಶಶಿಕಾಂತ್ ರೂಯಾ ವಿಧಿವಶ; ಪ್ರಧಾನಿ ಮೋದಿ ಸಂತಾಪ
ಶಶಿಕಾಂತ್ ರೂಯಾ ನೇತೃತ್ವದಲ್ಲಿ ಎಸ್ಸಾರ್ ಗ್ರೂಪ್ ಹಚಿನ್ಸನ್ ಸಂಸ್ಥೆ ಜೊತೆ ಸೇರಿ ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯನ್ನು ಸ್ಥಾಪಿಸಿತು. ಆದರೆ, ಲಾಭ ಕಾಣದೆ ಈ ಕಂಪನಿ ದಿವಾಳಿ ಸ್ಥಿತಿಗೆ ಬಂದಿತು. ಆದರೆ, ಶಶಿಕಾಂತ್ ರೂಯಾ ದೃತಿಗೆಡಲಿಲ್ಲ. ತಮ್ಮ ಸಂಸ್ಥೆಯ ಕೆಲ ಆಸ್ತಿಪಾಸ್ತಿಗಳನ್ನು ಮಾರಿ ಸುಮಾರು 2 ಲಕ್ಷ ಕೋಟಿ ರೂ ಮೊತ್ತದ ಸಾಲಗಳನ್ನು ತೀರಿಸಿದರು.
ಇದಾದ ಬಳಿಕ ಹೊಸ ಹೊಸ ಬಿಸಿನೆಸ್ ಅನ್ವೇಷಣೆ ಮಾಡಿದರು. ಇವತ್ತು ಅವರ ಎಸ್ಸಾರ್ ಗ್ರೂಪ್ ಸುಮಾರು 70,000 ಕೋಟಿ ರೂ ಮೌಲ್ಯದ ಸಂಸ್ಥೆಯಾಗಿದೆ. 35 ದೇಶಗಳಲ್ಲಿ ಅದು ಆಪರೇಟ್ ಮಾಡುತ್ತಿದೆ.
ಇವತ್ತು ದೇಶದ ಪ್ರಮುಖ ಬಿಸಿನೆಸ್ ಫ್ಯಾಮಿಲಿಗಳು ಆಸ್ತಿಪಾಸ್ತಿ ವಿಚಾರಕ್ಕೆ ಮತ್ತು ಬಿಸಿನೆಸ್ ವಿಚಾರಕ್ಕೆ ವೈಮಸ್ಸು ಮಾಡಿಕೊಂಡಿರುವ ಹಲವು ನಿದರ್ಶನಗಳಿವೆ. ಆದರೆ, ರೂಯಾ ಫ್ಯಾಮಿಲಿಯಲ್ಲಿ ಇಲ್ಲಿಯವರೆಗೂ ಒಂಚೂರೂ ಬಿರುಕು ಮೂಡಿದ್ದು ಯಾರಿಗೂ ಕಂಡಿದ್ದಿಲ್ಲ.
ಇದನ್ನೂ ಓದಿ: ಈ ಬಾರಿ ಭರ್ಜರಿ ಮುಂಗಾರು ಬೆಳೆ ನಿರೀಕ್ಷೆ; ಆಹಾರ ಹಣದುಬ್ಬರ ತಲೆನೋವು ಕಡಿಮೆಗೊಳ್ಳುವ ಸಾಧ್ಯತೆ
ರೂಯಾ ಕುಟುಂಬದ ಮೂರು ತಲೆಮಾರಿನವರು ಇಂದಿಗೂ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಶಶಿಕಾಂತ್ ರೂಯಾ ಈ ಫ್ಯಾಮಿಲಿ ಬಾಂಡಿಂಗ್ನಲ್ಲಿ ಪ್ರಮುಖ ಪಾತ್ರ ಹೊಂದಿದ್ದಾರೆ. ಶಶಿಕಾಂತ್ ಅವರ ತಾಯಿ ಈ ಬಾಂಡಿಂಗ್ನ ಪ್ರಮುಖ ‘ಅಂಟು’. ಶಶಿಕಾಂತ್ ರೂಯಾ ಅವರಿಗೆ ಪ್ರಶಾಂತ್ ಮತ್ತು ಅಂಶುಮಾನ್ ಎಂಬಿಬ್ಬರು ಮಕ್ಕಳಿದ್ದಾರೆ. ಶಶಿ ಸೋದರ ರವಿ ರೂಯಾ ಅವರಿಗೆ ರೇವಂತ್ ಮತ್ತು ಸ್ಮಿತಿ ಎಂಬಿಬ್ಬರು ಮಕ್ಕಳಿದ್ದಾರೆ.
ಕುಟುಂಬದ ಮೂರನೇ ತಲೆಮಾರಿಗೆ ಸೇರಿದ ಪ್ರಶಾಂತ್, ಅಂಶುಮಾನ್, ರೇವಂತ್ ಮತ್ತು ಸ್ಮಿತಿ ಅವರು ಯಾವುದೇ ಒಡಕಿಲ್ಲದೇ ಎಸ್ಸಾರ್ ಗ್ರೂಪ್ನ ವಿವಿಧ ಬಿಸಿನೆಸ್ಗಳನ್ನು ನೋಡಿಕೊಳ್ಳುತ್ತಿದ್ದಾರೆ.
‘ತಮ್ಮನ್ನು ತಾವು ಅಭಿವ್ಯಕ್ತಿಪಡಿಸಲು ಅವಕಾಶ ಸಿಕ್ಕರೆ ಆಗ ಕುಟುಂಬ ಸದಸ್ಯರು ಒಟ್ಟಿಗೆ ಇರಲು ಸಾಧ್ಯ… ನಾವು ಇದನ್ನು ಪಾಲಿಸಿಕೊಂಡು ಬಂದಿದ್ದೇವೆ. ನಿಜಕ್ಕೂ ಅದು ಅದ್ಭುತ ಅನುಭವವೇ. ಮನೆಯಲ್ಲೇ ಇರಬಹುದು, ಪ್ರಯಾಣ ಮಾಡುವಾಗಲೇ ಇರಬಹುದು, ಕೆಲಸ ಮಾಡುವಾಗಲೇ ಇರಬಹುದು ಈ ರೀತಿ ಸಪೋರ್ಟ್ ಸಿಸ್ಟಂ ಇದ್ದರೆ ಬಹಳ ಖುಷಿಯಾಗುತ್ತದೆ,’ ಎಂದು ಶಶಿಕಾಂತ್ ಅವರ ಮಗ ಪ್ರಶಾಂತ್ ರೂಯಾ ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ