AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿ ಭರ್ಜರಿ ಮುಂಗಾರು ಬೆಳೆ ನಿರೀಕ್ಷೆ; ಆಹಾರ ಹಣದುಬ್ಬರ ತಲೆನೋವು ಕಡಿಮೆಗೊಳ್ಳುವ ಸಾಧ್ಯತೆ

Kharif production to be higher this season: ಸರ್ಕಾರಕ್ಕೆ ತಲೆನೋವಾಗಿರುವ ಹಣದುಬ್ಬರ ದರ ಮುಂದಿನ ದಿನಗಳಲ್ಲಿ ಇಳಿಕೆ ಆಗಬಹುದು ಎನ್ನಲಾಗುತ್ತಿದೆ. ಹಣಕಾಸು ಸಚಿವಾಲಯ ನ. 25ರಂದು ಬಿಡುಗಡೆ ಮಾಡಿದ ಮಾಸಿಕ ಆರ್ಥಿಕ ವರದಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದೆ. ಈ ಬಾರಿಯ ಮುಂಗಾರು ಬೆಳೆಯ ಫಸಲು ಉತ್ತಮವಾಗಿ ಆಗಲಿದ್ದು, ಆಹಾರವಸ್ತುಗಳ ಬೆಲೆ ಕಡಿಮೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ಈ ಬಾರಿ ಭರ್ಜರಿ ಮುಂಗಾರು ಬೆಳೆ ನಿರೀಕ್ಷೆ; ಆಹಾರ ಹಣದುಬ್ಬರ ತಲೆನೋವು ಕಡಿಮೆಗೊಳ್ಳುವ ಸಾಧ್ಯತೆ
ಬೆಳೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 25, 2024 | 6:01 PM

Share

ನವದೆಹಲಿ, ನವೆಂಬರ್ 25: ಈ ಬಾರಿಯ ಮುಂಗಾರು ಋತುವಿನಲ್ಲಿ ಬಿತ್ತನೆಯಾದ ಬೆಳೆಗಳು ಈಗ ಕಟಾವಿಗೆ ಬಂದಿದೆ. ಈ ಬಾರಿ ಭರ್ಜರಿ ಕೊಯ್ಲು ನಿರೀಕ್ಷೆಯಲ್ಲಿ ಸರ್ಕಾರ ಇದೆ. ಇದರಿಂದ ತರಕಾರಿಗಳ ಬೆಲೆ ಒಂದು ಹದಕ್ಕೆ ಬರಬಹುದು. ಸರ್ಕಾರಕ್ಕೆ ತಲೆನೋವಾಗಿರುವ ರೀಟೇಲ್ ಹಣದುಬ್ಬರ ಕಡಿಮೆ ಆಗಲು ಇದು ಸಹಾಯವಾಗಬಹುದು. ಅದರಲ್ಲೂ ಎರಡಂಕಿ ತಲುಪಿರುವ ಆಹಾರ ಹಣದುಬ್ಬರ ದರ ಕಡಿಮೆ ಆದರೆ ರೀಟೇಲ್ ಹಣದುಬ್ಬರವೂ ಗಮನಾರ್ಹವಾಗಿ ಇಳಿಯುತ್ತದೆ. ಹೀಗಾಗಿ, ಮುಂಗಾರು ಬೆಳೆಯು ಸರ್ಕಾರಕ್ಕೆ ಹೊಸ ಭರವಸೆಯನ್ನು ಮೂಡಿಸಿದೆ. ಹಣಕಾಸು ಸಚಿವಾಲಯವು ಇಂದು ಬಿಡುಗಡೆ ಮಾಡಿದ ಅಕ್ಟೋಬರ್ ತಿಂಗಳ ಆರ್ಥಿಕ ವರದಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದೆ.

ಎಣ್ಣೆ, ಟೊಮಾಟೊ, ಈರುಳ್ಳಿ, ಆಲೂಗಡ್ಡೆಯ ಬೆಲೆಗಳು ಹಣದುಬ್ಬರದ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತವೆ. ನವೆಂಬರ್ ತಿಂಗಳ ಆರಂಭಿಕ ಟ್ರೆಂಡ್ ಗಮನಿಸಿದರೆ ಆಹಾರಪದಾರ್ಥಗಳ ಬೆಲೆಯಲ್ಲಿ ತುಸು ಇಳಿಕೆ ಆಗುವ ಸೂಚನೆ ಇದೆ. ಕೃಷಿ ಕ್ಷೇತ್ರದಲ್ಲಿ ಉತ್ತಮ ಉತ್ಪನ್ನ ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ ಹಣದುಬ್ಬರ ದರ ನಿಯಂತ್ರಣಕ್ಕೆ ಬರಬಹುದು ಎಂದು ಮಾಸಿಕ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಇದನ್ನೂ ಓದಿ: 1947ರ ನಂತರದ ಆದ ಹೂಡಿಕೆಯಲ್ಲಿ ಅರ್ಧಕ್ಕಿಂತ ಹೆಚ್ಚು ಕಳೆದ 10 ವರ್ಷದಲ್ಲೇ ಆಗಿದೆ: ವರದಿ

ಅಕ್ಟೋಬರ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ ಶೇ. 6.2ಕ್ಕೆ ಹೆಚ್ಚಿದೆ. ಕೆಲವೇ ಕೆಲವು ತರಕಾರಿ, ಎಣ್ಣೆ ಪದಾರ್ಥಗಳು ಹಣದುಬ್ಬರದ ಮೇಲೆ ತೀಕ್ಷ್ಣ ಪರಿಣಾಮ ಬೀರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಹಣದುಬ್ಬರ ಶೇ. 4ರಲ್ಲಿ ಇರಬೇಕು ಎಂದು ಆರ್​ಬಿಐ ಗುರಿ ಇಟ್ಟಿದೆ. ಆ ನಿಟ್ಟಿನಲ್ಲಿ ಶೇ. 2ರಿಂದ 6ರಷ್ಟರೊಳಗೆ ಹಣದುಬ್ಬರ ತಾಳಿಕೆ ಮಿತಿ ಇರಬೇಕು ಎನ್ನುವ ಗುರಿಯೂ ಇದೆ. ಆದರೆ, ಅಕ್ಟೋಬರ್ ತಿಂಗಳ ಹಣದುಬ್ಬರವು ಈ ತಾಳಿಕೆಯ ಮಿತಿಗಿಂತ ಮೇಲೆಯೇ ಹೋಗಿದೆ. ಇದು ಬಡ್ಡಿದರ ಕಡಿಮೆಗೊಳಿಸುವ ನಿರ್ಧಾರ ತೆಗೆದುಕೊಳ್ಳಲು ಆರ್​ಬಿಐ ಹಿಂದೇಟು ಹಾಕುವಂತೆ ಮಾಡಿದೆ.

ಇದನ್ನೂ ಓದಿ: ಮಿಂಚುತ್ತಿರುವ ಭಾರತೀಯ ಗೇಮ್​ಗಳು; ‘ಇಂಡಸ್’, ‘ರೇಜ್ ಎಫೆಕ್ಟ್’, ‘ಫೌಜಿ’ ಮೊದಲಾದವುಗಳ ಜಾಗತಿಕ ಸದ್ದು

ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲು ಬ್ಯಾಂಕ್ ಬಡ್ಡಿದರ ಇಳಿಕೆ ಆಗುವುದು ಸರ್ಕಾರಕ್ಕೆ ಮುಖ್ಯ. ಆದರೆ, ಹಣದುಬ್ಬರವನ್ನು ಕಡಿಮೆ ಮಾಡದಿದ್ದರೆ ಬೇರೆ ರೀತಿಯ ಆರ್ಥಿಕ ದುಷ್ಪರಿಣಾಮಗಳಾಗುತ್ತವೆ. ಈ ಸಂದಿಗ್ಧತೆಯಲ್ಲಿ ಆರ್​ಬಿಐ ಮತ್ತು ಸರ್ಕಾರ ಇದೆ. ಮುಂದಿನ ತಿಂಗಳು (ಡಿಸೆಂಬರ್) ಆರ್​ಬಿಐನ ಎಂಪಿಸಿ ಸಭೆ ನಡೆಯಲಿದ್ದು, ಅಲ್ಲಿ ರಿಪೋ ದರವನ್ನು ಇಳಿಸುವ ರಿಸ್ಕ್ ತೆಗೆದುಕೊಳ್ಳಲಾಗುತ್ತಾ ಎನ್ನುವ ಕುತೂಹಲ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:55 pm, Mon, 25 November 24