1947ರ ನಂತರದ ಆದ ಹೂಡಿಕೆಯಲ್ಲಿ ಅರ್ಧಕ್ಕಿಂತ ಹೆಚ್ಚು ಕಳೆದ 10 ವರ್ಷದಲ್ಲೇ ಆಗಿದೆ: ವರದಿ
14 trillion USD invested in India since independence: 1947ರಿಂದ ಇಲ್ಲಿಯವರೆಗೆ ಭಾರತದ ಆರ್ಥಿಕತೆಗೆ ಉತ್ತೇಜನ ನೀಡಲು 14 ಟ್ರಿಲಿಯನ್ ಡಾಲರ್ನಷ್ಟು ಹೂಡಿಕೆ ಈ ದೇಶದಲ್ಲಿ ಆಗಿದೆ. ಮೋತಿಲಾಲ್ ಓಸ್ವಾಲ್ನ ವರದಿ ಪ್ರಕಾರ ಕಳೆದ ಒಂದು ದಶಕದಲ್ಲೇ 8 ಟ್ರಿಲಿಯನ್ ಡಾಲರ್ಗಿಂತಲೂ ಅಧಿಕ ಹೂಡಿಕೆ ಆಗಿದೆ. ಭಾರತದ ಆರ್ಥಿಕತೆಯ ಬೆಳವಣಿಗೆಯು ಷೇರು ಮಾರುಕಟ್ಟೆಯ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದೆ.
ನವದೆಹಲಿ, ನವೆಂಬರ್ 25: ಆರ್ಥಿಕತೆಗೆ ಉತ್ತೇಜನ ನೀಡಲು ಸರ್ಕಾರ ಸಾಕಷ್ಟು ಬಂಡವಾಳ ಚೆಲ್ಲಬೇಕಾಗುತ್ತದೆ. ಈ ರೀತಿ ಸ್ವಾತಂತ್ರ್ಯಾನಂತರ, ಅಂದರೆ 1947ರಿಂದ ಈಚೆಗೆ ಇಲ್ಲಿಯವರೆಗೆ ಭಾರತದಲ್ಲಿ 14 ಟ್ರಿಲಿಯನ್ ಡಾಲರ್ನಷ್ಟು ಹೂಡಿಕೆ ಆಗಿದೆ ಎಂದು ಮೋತಿಸಾಲ್ ಓಸ್ವಾಲ್ನ ವರದಿಯೊಂದು ಹೇಳಿದೆ. ಅಂದರೆ ಸಾವಿರ ಲಕ್ಷ ಕೋಟಿ ರುಪಾಯಿಗೂ ಅಧಿಕ ಮೊತ್ತದ ಹೂಡಿಕೆ ಆಗಿದೆ. ಕಳೆದ ಒಂದು ದಶಕದಲ್ಲೇ ಎಂಟು ಟ್ರಿಲಿಯನ್ ಡಾಲರ್ಗೂ ಅಧಿಕ ಹೂಡಿಕೆ ಆಗಿದೆ. ಇದರಿಂದ ದೇಶದಲ್ಲಿ ಮೂಲಸೌಕರ್ಯ ವ್ಯವಸ್ಥೆ ವೇಗವಾಗಿ ಬೆಳೆಯಲು ಮತ್ತು ಆಧುನಿಕರಣದ ವೇಗ ಹೆಚ್ಚಲು ಸಾಧ್ಯವಾಗಿದೆ.
ಕೋವಿಡ್ ನಂತರದಲ್ಲಿ ತೀವ್ರವಾಗಿ ಹೆಚ್ಚಾದ ಹೂಡಿಕೆ…
ಜಿಡಿಪಿ ಮತ್ತು ಹೂಡಿಕೆ ಅನುಪಾತ 2011ರಿಂದ ಬಹುತೇಕ ಸ್ಥಿರವಾಗಿತ್ತು. ಆದರೆ, ಕೋವಿಡ್ ನಂತರ ಟ್ರೆಂಡ್ ಬದಲಾಗಿದೆ. ಅಭಿವೃದ್ಧಿ ಯೋಜನೆಗಳು ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಸರ್ಕಾರ ಮಾಡುತ್ತಿರುವ ವೆಚ್ಚ ಅಧಿಕಗೊಂಡಿದೆ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ನಂತರದ ಸುಧಾರಣಾ ಕ್ರಮಗಳ ಭಾಗವಾಗಿ ಸರ್ಕಾರದ ಬಂಡವಾಳ ವೆಚ್ಚ ಹೆಚ್ಚಾಗಿದೆ. ಹೀಗಾಗಿ, ಜಿಡಿಪಿ ಮತ್ತು ಹೂಡಿಕೆ ನಡುವಿನ ಅನುಪಾತ ಈಗ ಹೆಚ್ಚಾಗಿದೆ ಎಂದು ಮೋತಿಲಾಲ್ ಓಸ್ವಾಲ್ನ ವರದಿಯಲ್ಲಿ ತಿಳಿಸಲಾಗಿದೆ.
ಷೇರು ಮಾರುಕಟ್ಟೆಗೂ ತಾಕಿದ ಆರ್ಥಿಕತೆಯ ಸಕಾರಾತ್ಮಕತೆ
ಭಾರತದ ಆರ್ಥಿಕ ಅಭಿವೃದ್ಧಿಯ ಪರಿಣಾಮವು ಷೇರು ಮಾರುಕಟ್ಟೆಯ ಮೇಲೂ ಬಿದ್ದಿದೆ. ಕಳೆದ 33 ವರ್ಷಗಳಲ್ಲಿ ಸಾಂದರ್ಭಿಕ ಏರಿಳಿತಗಳ ನಡುವೆ 26 ವರ್ಷ ಷೇರು ಮಾರುಕಟ್ಟೆ ಪಾಸಿಟಿವ್ ರಿಟರ್ನ್ ಕೊಟ್ಟಿರುವುದು ಗಮನಾರ್ಹ. ಕಿರು ಅವಧಿಯಲ್ಲಿ ಮಾರುಕಟ್ಟೆ ಶೇ. 10ರಿಂದ 12ರಷ್ಟು ಹಿನ್ನಡೆ ಕಂಡಿದೆಯಾದರೂ ದೀರ್ಘಾವಧಿಯಲ್ಲಿ ಅಧಿಕ ಬೆಳವಣಿಗೆ ಕಂಡಿದೆ ಎನ್ನಲಾಗಿದೆ.
ಇದನ್ನೂ ಓದಿ: ನವೆಂಬರ್ನಲ್ಲಿ ಪಿಎಂಐ ಔಟ್ಪುಟ್ ಇಂಡೆಕ್ಸ್ 59.5; ಭಾರತದಲ್ಲಿ ಬಿಸಿನೆಸ್ ಚಟುವಟಿಕೆ ತೀವ್ರ
ಪ್ರತೀ ವರ್ಷ ಯಾವುದಾದರೂ ಸಂದರ್ಭದಲ್ಲಿ ಶೇ. 10ರಿಂದ 20ರಷ್ಟು ಹಿನ್ನಡೆ ನಿಶ್ಚಿತವಾಗಿ ಆಗುತ್ತಿದೆ. ಇಂಥ ಕುಸಿತದ ಸಂದರ್ಭದಲ್ಲಿ ಹೂಡಿಕೆದಾರರು ದೃತಿಗೆಡಬಾರದು. ದೀರ್ಘಾವಧಿಯವರೆಗೆ ನಿಮ್ಮ ಹೂಡಿಕೆ ಇರಬೇಕು. ಮಾರುಕಟ್ಟೆ ಮರುಚೇತರಿಕೆಯಿಂದ ಆಗುವ ಲಾಭ ಸಂಪಾದಿಸಬಹುದು ಎಂದು ಮೋತಿಲಾಲ್ ಓಸ್ವಾಲ್ ಸಂಸ್ಥೆಯ ವಿಶ್ಲೇಷಣೆಯಲ್ಲಿ ತಿಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ