ಮಿಂಚುತ್ತಿರುವ ಭಾರತೀಯ ಗೇಮ್ಗಳು; ‘ಇಂಡಸ್’, ‘ರೇಜ್ ಎಫೆಕ್ಟ್’, ‘ಫೌಜಿ’ ಮೊದಲಾದವುಗಳ ಜಾಗತಿಕ ಸದ್ದು
Indian gaming industry: ಭಾರತದ ಗೇಮಿಂಗ್ ಉದ್ಯಮ ಜಾಗತಿಕವಾಗಿ ಮಿಂಚುತ್ತಿವೆ. ಕ್ಯಾಷುವಲ್ ಗೇಮ್ಗಳನ್ನು ತಯಾರಿಸುತ್ತಿದ್ದ ಭಾರತೀಯ ಸಂಸ್ಥೆಗಳು ಈಗ ಹೈಬಜೆಟ್ ಗೇಮ್ಗಳನ್ನು ನಿರ್ಮಿಸುತ್ತಿದ್ದಾರೆ. ಇಂಡಸ್ ಬ್ಯಾಟಲ್ ರಾಯೇಲ್, ರೇಜ್ ಎಫೆಕ್ಟ್, ಫೌಜಿ ಮೊದಲಾದ ಗೇಮ್ಗಳು ಭರವಸೆ ಮೂಡಿಸಿವೆ. ಸಾಕಷ್ಟು ಹೂಡಿಕೆದಾರರನ್ನು ಆಕರ್ಷಿಸಲೂ ಯಶಸ್ವಿಯಾಗಿವೆ.
ನವದೆಹಲಿ, ನವೆಂಬರ್ 25: ಭಾರತದಲ್ಲಿ ಗೇಮಿಂಗ್ ಉದ್ಯಮ ಭರ್ಜರಿಯಾಗಿ ಬೆಳೆಯುತ್ತಿದೆ. ಜಾಗತಿಕ ಮಾರುಕಟ್ಟೆಗಳಿಗೆ ಲಗ್ಗೆ ಹಾಕುತ್ತಿದೆ. ಭಾರತೀಯರಿಂದ ಕ್ಯಾಷುವಲ್ ಗೇಮ್ಗಳ ನಿರ್ಮಾಣವಾಗುತ್ತಿದ್ದ ಕಾಲ ಗತಿಸಿ ಹೋಗಿದೆ. ದೊಡ್ಡ ಬಜೆಟ್, ಉನ್ನತ ಗುಣಮಟ್ಟದ ಗೇಮ್ಗಳನ್ನು ಭಾರತೀಯರು ನಿರ್ಮಿಸುತ್ತಿದ್ದಾರೆ. ಕಳೆದ ತಿಂಗಳು ಭಾರತೀಯರು ರಚಿಸಿದ ಎರಡು ಗೇಮ್ಗಳು ಜಾಗತಿಕವಾಗಿ ಸದ್ದು ಮಾಡುತ್ತಿವೆ. ‘ಇಂಡಸ್ ಬ್ಯಾಟಲ್ ರಾಯೇಲ್’ ಮತ್ತು ‘ರೇಜ್ ಎಫೆಕ್ಟ್: ಮೊಬೈಲ್’ ಗೇಮ್ಗಳು ಜನಪ್ರಿಯವಾಗುತ್ತಿವೆ. ಇಂಡಸ್ ಬ್ಯಾಟಲ್ ರಾಯೇಲ್ ಗೇಮ್ 50 ಲಕ್ಷ ಡೌನ್ಲೋಡ್ ಆಗಿದೆ.
ಶೂಟರ್ ಗೇಮ್ ಆದ ರೇಜ್ ಎಫೆಕ್ಟ್ ಬಿಡುಗಡೆಗೆ ಮುನ್ನವೇ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಅದರ ಬೀಟಾ ವರ್ಷನ್ಗೆ ಒಂದು ಲಕ್ಷಕ್ಕೂ ಅಧಿಕ ಪ್ರೀ ರಿಜಿಸ್ಟ್ರೇಶನ್ಗಳಾಗಿವೆ.
ಮಾಸ್ಕ್ ಗನ್ ಇತ್ಯಾದಿ ಗೇಮ್ಗಳನ್ನು ನಿರ್ಮಿಸಿದ ಪುಣೆ ಮೂಲದ ಸೂಪರ್ಗೇಮಿಂಗ್ ಸಂಸ್ಥೆಯು ಇಂಡಸ್ ಬ್ಯಾಟಲ್ ರಾಯೇಲ್ ಗೇಮ್ ಅನ್ನು ರಚಿಸಿದೆ. 160 ಮಂದಿಯ ತಂಡ ಸೇರಿ ಈ ರೋಚಕ ಗೇಮ್ ಅನ್ನು ಸಿದ್ಧಪಡಿಸಿರುವುದು ತಿಳಿದುಬಂದಿದೆ.
ಡಾಟ್9 ಗೇಮ್ಸ್ ಎನ್ನುವ ಸಂಸ್ಥೆ ‘ಫೌಜಿ ಡಾಮಿನೇಶನ್’ (Fearless and United Guards -FAU G) ಎನ್ನುವ ಗೇಮ್ ತಯಾರಿಸಿದೆ. ಇದು ಭಾರತದ ಫಸ್ಟ್ ಪರ್ಸನ್ ಶೂಟರ್ ಗೇಮ್ ಆಗಿದೆ. ಈ ಗೇಮ್ ಕೂಡ ಜಾಗತಿಕಾಗಿ ನಿರೀಕ್ಷೆ ಹುಟ್ಟುಹಾಕಿದೆ. ಭಾರತೀಯ ಮಿಲಿಟರಿ ಥೀಮ್ ಆಧಾರದಲ್ಲಿ ಗೇಮಿಂಗ್ ಸ್ವರೂಪ ರಚಿಸಲಾಗಿದೆ. ಹೈದರಾಬಾದ್ ಗುರುಗ್ರಾಮ್, ಮುಂಬೈನಲ್ಲಿ ನಡೆದ ಪ್ರಯೋಗಗಳಲ್ಲಿ ಶೇ. 70ರಷ್ಟು ಗೇಮರ್ಗಳಿಗೆ ಈ ಫೌಜಿ ಗೇಮ್ ತೃಪ್ತಿ ಕೊಟ್ಟಿದೆಯಂತೆ.
ಇದನ್ನೂ ಓದಿ: ನೊಂದಾಯಿತ ಸಣ್ಣ ಉದ್ದಿಮೆಗಳಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ 23 ಕೋಟಿ
ಇನ್ನೂ ಹಲವು ಗೇಮ್ಗಳು ಭಾರತದಲ್ಲಿ ತಯಾರಾಗುತ್ತಿವೆ. ಕ್ಯಾಷುವಲ್ ಗೇಮ್ಗಳಿಗೆ ಸೀಮಿತವಾಗಿದ್ದ ಭಾರತೀಯರು ಈಗ ಹೈಬಜೆಟ್ ಗೇಮ್ ತಯಾರಿಸುತ್ತಿದ್ದಾರೆ. ವಿಶೇಷ ಎಂದರೆ ಈ ಗೇಮ್ಗಳಿಗೆ ಹೂಡಿಕೆದಾರರ ಬೆಂಬಲವೂ ಯಥೇಚ್ಛವಾಗಿ ಸಿಗುತ್ತದೆ. ಭಾರತದ ಗೇಮಿಂಗ್ ಉದ್ಯಮದ ಬೆಳವಣಿಗೆಯು ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಮೂಡಿಸಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ