PAN Updates: ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಿದೆಯಾ? ತಿಳಿದುಕೊಳ್ಳುವುದು ಹೇಗೆ?
How To Know Your PAN Is Active: ಆಧಾರ್ ನಂಬರ್ ಜೊತೆ ಜೋಡಿತವಾಗದ ಪಾನ್ ಅನ್ನು ನಿಷ್ಕ್ರಿಯಗೊಳಿಸುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ. ನಿಮ್ಮ ಪಾನ್ ಕಾರ್ಡ್ ಇನ್ನೂ ಚಾಲನೆಯಲ್ಲಿದೆಯಾ, ಅಥವಾ ನಿಷ್ಕ್ರಿಯಗೊಂಡಿದೆಯಾ ಎಂದು ಆನ್ಲೈನ್ನಲ್ಲೇ ತಿಳಿದುಕೊಳ್ಳಬಹುದು.
ಪಾನ್ ಎಂದರೆ ಪರ್ಮನೆಂಟ್ ಅಕೌಂಟ್ ನಂಬರ್ (PAN- Permanent Account Number). ಇದು ಆದಾಯ ತೆರಿಗೆ ಇಲಾಖೆಯಿಂದ ಎಲ್ಲರಿಗೂ ಕೊಡುವ 10 ಅಕ್ಷರ ಅಂಕಿ ಸಂಯೋಜನೆಯ ನಂಬರ್. ದೊಡ್ಡ ಮೊತ್ತದ ಹಣಕಾಸು ವಹಿವಾಟು ನಡೆಸಲು, ಬ್ಯಾಂಕ್ ಖಾತೆ ಇತ್ಯಾದಿ ತೆರೆಯಲು ಪಾನ್ ನಂಬರ್ ಅತ್ಯಗತ್ಯ. ಪಾನ್ ನಂಬರ್ ಹೊಂದಿರುವವರು ಆಧಾರ್ ಕಾರ್ಡ್ಗೆ ಅದನ್ನು ಲಿಂಕ್ ಮಾಡಬೇಕೆಂದು ಸರ್ಕಾರ ಹೇಳುತ್ತಲೇ ಬಂದಿದೆ. ಗಡುವು ವಿಸ್ತರಣೆಯಾಗುತ್ತಲೇ ಬಂದಿದ್ದು ಈಗ ಡೆಡ್ಲೈನ್ ಮಾರ್ಚ್ 31ಕ್ಕೆ ಇದೆ.
ಒಬ್ಬ ವ್ಯಕ್ತಿ ಒಂದು ಆಧಾರ್, ಒಂದು ವೋಟರ್ ಐಡಿ ಹೊಂದಬಹುದಾದಂತೆ ಒಂದು ಪಾನ್ ಕಾರ್ಡ್ ಮಾತ್ರ ಹೊಂದಬಹುದು. ಆಧಾರ್ ಜೊತೆ ಪಾನ್ ನಂಬರ್ ಲಿಂಕ್ ಆಗದೇ ಹೋದರೆ ಅದು ನಿಷ್ಕ್ರಿಯಗೊಳ್ಳುತ್ತದೆ. ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳ್ಳುತ್ತದೆ. ಇನ್ನೂ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಪಾನ್ ನಂಬರ್ ಚಾಲನೆಯಲ್ಲಿ ಇದೆಯಾ, ಇಲ್ಲವಾ ಎಂದು ತಿಳಿದುಕೊಳ್ಳಲು ಅವಕಾಶ ಇದೆ.
ಪಾನ್ ಕಾರ್ಡ್ ಸಿಂಧು ಇದೆಯಾ ಎಂದು ತಿಳಿಯುವುದು ಹೇಗೆ?
- ಮೊದಲು ಇನ್ಕಮ್ ಟ್ಯಾಕ್ಸ್ ಪೋರ್ಟಲ್ಗೆ ಹೋದರೆ, ಎಡಗಡೆ ಕ್ವಿಕ್ ಲಿಂಕ್ಸ್ ಸೆಕ್ಷನ್ ಕಾಣಬಹುದು. ಅಲ್ಲಿ ವೆರಿಫೈ ಯುವರ್ ಪಾನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ಪಾನ್ ನಂಬರ್, ನಿಮ್ಮ ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಭರ್ತಿ ಮಾಡಬೇಕು.
- ಈ ವಿವರ ತುಂಬಿದ ಬಳಿಕ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ಗೆ ಬಂದ ಓಟಿಪಿ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ವ್ಯಾಲಿಡೇಟ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಪಾನ್ ಕಾರ್ಡ್ ವಿವರಗಳು ಸರಿಯಾಗಿದ್ದರೆ ಪಾನ್ ಈಸ್ ಆ್ಕಕ್ಟಿವ್ ಅಂಡ್ ಡೀಟೇಲ್ಸ್ ಆರ್ ಆ್ಯಸ್ ಪರ್ ಪಾನ್ ಎಂಬ ಸಂದೇಶ ಬರುತ್ತದೆ.
- ಒಂದು ವೇಳೆ, ಹೆಸರು ವಿವರ ಬದಲಾಗಿದ್ದು, ಪಾನ್ ಸಂಖ್ಯೆ ಸರಿಯಾಗಿದ್ದರೆ, ಆಗ ಪಾನ್ ಈಸ್ ಆ್ಯಕ್ಟಿವ್, ಬಟ್ ಡೀಟೇಲ್ಸ್ ಆರ್ ನಾಟ್ ಆ್ಯಸ್ ಪರ್ ಪಾನ್ ಎಂಬ ಸಂದೇಶ ಬರುತ್ತದೆ.
- ನಿಮ್ಮದೇ ವೈಯಕ್ತಿಕ ವಿವರದಲ್ಲಿ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಇದ್ದರೆ ಹೆಚ್ಚಿನ ಮಾಹಿತಿ ಬೇಕೆಂದು ಕೇಳಲಾಗುತ್ತದೆ. ಆಗ ನಿಮ್ಮ ತಂದೆಯ ಹೆಸರು ಮತ್ತಿತರ ವಿವರ ನಮೂದಿಸಬೇಕಾಗುತ್ತದೆ.
ಹೆಚ್ಚಿನ ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:06 pm, Wed, 22 February 23