HDFC Interest: ಹೆಚ್ಡಿಎಫ್ಸಿ ಬ್ಯಾಂಕಲ್ಲಿ ಎಫ್ಡಿ ಇಟ್ಟರೆ ಭರ್ಜರಿ ಲಾಭ; ವರ್ಷಕ್ಕೆ ಶೇ. 7.75ರವರೆಗೆ ಬಡ್ಡಿ
Upto 7.75% Interest For FD: ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಹೆಚ್ಡಿಎಫ್ಸಿ ಆರ್ಬಿಐ ರೆಪೋ ದರ ಏರಿಕೆ ಬಳಿಕ ತನ್ನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ತನ್ನಲ್ಲಿ ಇರಿಸುವ ಠೇವಣಿಗಳಿಗೆ ಗರಿಷ್ಠ ಶೇ. 7.75ರವರೆಗೆ ಬಡ್ಡಿಯ ಆಫರ್ ಕೊಟ್ಟಿದೆ.
ನವದೆಹಲಿ: ಎಚ್ಡಿಎಫ್ಸಿ ಬ್ಯಾಂಕು ಇದೀಗ ನಿಶ್ಚಿತ ಠೇವಣಿಗಳ (Fixed Deposit) ಮೇಲೆ ಕೊಡಲಾಗುವ ಬಡ್ಡಿ ದರಗಳನ್ನು ಹೆಚ್ಚಿಸಿದೆ. ನೀವು ಹೆಚ್ಡಿಎಫ್ಸಿ ಬ್ಯಾಂಕಲ್ಲಿ ಎಫ್ಡಿ ಇಟ್ಟರೆ ಶೇ. 7.75ರಷ್ಟು ಬಡ್ಡಿ ಕೊಡುತ್ತದೆ. ಕೆಲ ದಿನಗಳ ಹಿಂದೆ ಆರ್ಬಿಐ ರೆಪೋ ದರ (Repo Rate) ಏರಿಸಿದ ಹಿನ್ನೆಲೆಯಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ನಿನ್ನೆ ಮಂಗಳವಾರ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಅದರಂತೆ ಹಿರಿಯ ನಾಗರಿಕರಿಗೆ ಶೇ. 7.75ರವರೆಗೆ ಬಡ್ಡಿ ಆಫರ್ ಕೊಡಲಾಗಿದೆ. ಇತರರಿಗೆ ಗರಿಷ್ಠ ಶೇ. 7.10ರಷ್ಟು ಬಡ್ಡಿ ಕೊಡಲಾಗುತ್ತದೆ. ಈ ಹೊಸ ಬಡ್ಡಿ ದರಗಳು ಫೆಬ್ರುವರಿ 21ರಿಂದ, ಅಂದರೆ ನಿನ್ನೆಯಿಂದಲೇ ಜಾರಿಗೆ ಬಂದಿವೆ.
2 ಕೋಟಿ ರೂ ಒಳಗಿನ ನಿಶ್ಚಿತ ಠೇವಣಿಗಳಿಗೆ ಈ ದರಗಳು ಅನ್ವಯ ಆಗುತ್ತವೆ. 5 ವರ್ಷದಿಂದ 10 ವರ್ಷದವರೆಗಿನ ಅವಧಿಗೆ ನಿಶ್ಚಿತ ಠೇವಣಿ ಇರಿಸುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗರಿಷ್ಠ 7.75ರಷ್ಟು ಬಡ್ಡಿ ದರ ಕೊಡಲಾಗುವುದು ಎಂದು ಎಚ್ಡಿಎಫ್ಸಿ ಬ್ಯಾಂಕ್ ಹೇಳಿದೆ. ಇದೇ ಅವಧಿಯ ಠೇವಣಿಗೆ ಇತರ ಜನರಿಗಾದರೆ ಶೇ. 7.0 ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕಲ್ಲದವರಿಗೆ ಗರಿಷ್ಠ 7.1 ಬಡ್ಡಿ ದರ ಬೇಕೆಂದರೆ 15ತಿಂಗಳಿಂದ 18 ತಿಂಗಳವರೆಗಿನ ಅವಧಿಗೆ ಠೇವಣಿ ಇರಿಸಬೇಕಾಗುತ್ತದೆ. ಇನ್ನು, ಎರಡು ಕೋಟಿ ರೂಗಿಂತ ಹೆಚ್ಚು ಮೊತ್ತದ ಠೇವಣಿ ಇರಿಸುವವರಿಗೆ ಹೆಚ್ಚು ಬಡ್ಡಿ ಸಿಗುವುದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಕೆಲವೊಮ್ಮೆ ಅಧಿಕ ಮೊತ್ತದ ಠೇವಣಿ ಇರಿಸಿದರೆ ಬಡ್ಡಿ ದರ ತುಸು ಕಡಿಮೆಯೇ ಸಿಗುತ್ತದೆ.
ಹೆಚ್ಡಿಎಫ್ಸಿ ಬ್ಯಾಂಕ್ನ ಎಫ್ಡಿ ಬಡ್ಡಿ ದರಗಳು (2 ಕೋಟಿ ರೂವರೆಗಿನ ಠೇವಣಿಗಳಿಗೆ):
ಅವಧಿ | ಬಡ್ಡಿದರ | ಹಿರಿಯ ನಾಗರಿಕರಿಗೆ ಬಡ್ಡಿ |
7-29 ದಿನಗಳು | ಶೇ 3.00 | ಶೇ. 3.50 |
30-45 ದಿನಗಳು | ಶೇ. 3.50 | ಶೇ. 4.00 |
46-89 ದಿನಗಳು | ಶೇ. 4.50 | ಶೇ. 5.00 |
90 ದಿನಗಳಿಂದ 6 ತಿಂಗಳವರೆಗೆ | ಶೇ. 4.50 | ಶೇ. 5.00 |
6 ತಿಂಗಳು 1 ದಿನದಿಂದ 9 ತಿಂಗಳವರೆಗೆ | ಶೇ. 4.50 | ಶೇ. 5.00 |
9 ತಿಂಗಳು 1ದಿನದಿಂದ 12 ತಿಂಗಳಿಗಿಂತ ಕಡಿಮೆ | ಶೇ. 6.00 | ಶೇ. 6.50 |
1 ವರ್ಷದಿಂದ 15 ತಿಂಗಳಿಗಿಂತ ಕಡಿಮೆ ಅವಧಿ | ಶೇ. 6.60 | ಶೇ. 7.10 |
15ತಿಂಗಳಿಂದ 18 ತಿಂಗಳಿಗಿಂತ ಕಡಿಮೆ ಅವಧಿ | ಶೇ. 7.10 | ಶೇ. 7.60 |
18 ತಿಂಗಳಿಂದ 21 ತಿಂಗಳಿಗಿಂತ ಕಡಿಮೆ ಅವಧಿ | ಶೇ. 7.00 | ಶೇ. 7.50 |
21 ತಿಂಗಳಿಂದ 2 ವರ್ಷದವರೆಗೆ | ಶೇ. 7.00 | ಶೇ. 7.50 |
2 ವರ್ಷ 1 ದಿನದಿಂದ 3 ವರ್ಷದವರೆಗೆ | ಶೇ. 7.00 | ಶೇ. 7.50 |
3 ವರ್ಷ 1 ದಿನದಿಂದ 5 ವರ್ಷದವರೆಗೆ | ಶೇ. 7.00 | ಶೇ. 7.50 |
5 ವರ್ಷ 1 ದಿನದಿಂದ 10 ವರ್ಷದವರೆಗೆ | ಶೇ. 7.00 | ಶೇ. 7.75 |
ನಿಶ್ಚಿತ ಠೇವಣಿ ಬಹಳ ಸುರಕ್ಷಿತ ಮತ್ತು ಉತ್ತಮ ಬಡ್ಡಿ ಕೊಡುವ ಉಳಿತಾಯ ಮಾರ್ಗವಾಗಿದೆ. ಸರ್ಕಾರದ ಹಲವು ಸಾಲಪತ್ರ, ಸೇವಿಂಗ್ ಸ್ಕೀಮ್ಗಳಿಗೆ ಸಿಗುವ ಬಡ್ಡಿ ದರಗಳಿಗೆ ಎಫ್ಡಿ ಸಮೀಪವೇ ಇರುತ್ತದೆ. ಇದು ಸುಲಭ ಮತ್ತು ಸುರಕ್ಷಿತವೂ ಹೌದು. ಆನ್ಲೈನ್ನಲ್ಲಿ ಒಂದೇ ಕ್ಲಿಕ್ನಲ್ಲಿ ನೀವು ನಿಶ್ಚಿತ ಠೇವಣಿಗಳನ್ನ ಇರಿಸಬಹುದು.