ಲಂಡನ್: ಅಮೆರಿಕದಲ್ಲಿ ದಿವಾಳಿಯಾಗಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್ನ ಬ್ರಿಟನ್ ವಿಭಾಗವನ್ನು ಎಚ್ಎಸ್ಬಿಸಿ (HSBC Acquires SVB UK) ಖರೀದಿ ಮಾಡಿದೆ. ಅದೂ ಕೇವಲ 1 ಬ್ರಿಟಿಷ್ ಪೌಂಡ್ ಮೊತ್ತಕ್ಕೆ ಈ ಸೇಲ್ ನಡೆದಿದೆ. ಅಂದರೆ 100 ರುಪಾಯಿಗೆ ಎಸ್ವಿಬಿ ಯುಕೆಯನ್ನು ಎಚ್ಎಸ್ಬಿಸಿ ಖರೀದಿಸಿದೆ. ಯುಕೆ ವಿಭಾಗದ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ಬ್ರಿಟನ್ನಲ್ಲಿ ದಿವಾಳಿ ಪ್ರಕ್ರಿಯೆಗೆ ಒಳಪಡಿಸುವಂತೆ ಕೋರಿ 3 ದಿನಗಳ ಹಿಂದೆ, ಮಾರ್ಚ್ 10ರಂದು ಅರ್ಜಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಈ ಬ್ಯಾಂಕನ್ನು ಮಾರಾಟ ಮಾಡಲಾಗಿದೆ. ಬ್ರಿಟನ್ನ ಸೆಂಟ್ರಲ್ ಬ್ಯಾಂಕ್ ಈ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದು ವಿವಿಧ ಪ್ರಾಧಿಕಾರಗಳೊಂದಿಗೆ ಸಮಾಲೋಚಿಸಿ ಎಸ್ವಿಬಿ ಯುಕೆ ಬ್ಯಾಂಕನ್ನು ಮಾರಲು ನಿರ್ಧರಿಸಲಾಯಿತು ಎಂದು ಹೇಳಿದೆ.
ಪ್ರುಡೆನ್ಷಿಯಲ್ ರೆಗ್ಯುಲೇಶನ್ ಅಥಾರಿಟಿ, ಎಚ್ಎಂ ಟ್ರೆಷರಿ ಮತ್ತು ಫೈನಾನ್ಷಿಯಲ್ ಕಂಡಕ್ಟ್ ಅಥಾರಿಟಿ (ಎಫ್ಸಿಎ) ಜೊತೆ ಬ್ಯಾಂಕ್ ಆಫ್ ಇಂಗ್ಲೆಂಡ್ ಸಮಾಲೋಚನೆ ನಡೆಸಿತು. ಆ ಬಳಿಕ ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ನ ಅಂಗಸಂಸ್ಥೆ ಎಸ್ವಿಬಿ ಯುಕೆ ಲಿ (ಎಸ್ವಿಬಿಯುಕೆ) ಅನ್ನು ಎಚ್ಎಸ್ಬಿಸಿ ಯುಕೆ ಬ್ಯಾಂಕ್ಗೆ ಮಾರುವ ನಿರ್ಧಾರಕ್ಕೆ ಬರಲಾಯಿತು. ಎಸ್ವಿಬಿ ಯುಕೆ ಅನ್ನು ಸಂಕಷ್ಟದಿಂದ ಪಾರು ಮಾಡಲು ಮತ್ತು ಅದರ ಬ್ಯಾಂಕಿಂಗ್ ಸೇವೆಗಳು ಮುಂದುವರಿಯುವಂತೆ ಮಾಡಲು ಮತ್ತು ಬ್ರಿಟನ್ನ ಹಣಕಾಸು ವ್ಯವಸ್ಥೆ ಮೇಲಿನ ವಿಶ್ವಾಸವನ್ನು ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ಅಫ್ ಇಂಗ್ಲೆಂಡ್ ಹೇಳಿಕೆ ನೀಡಿದೆ.
ಎಸ್ವಿಬಿ ಯುಕೆ ಮಾರಾಟವಾದರೂ ಅದರ ಬ್ಯಾಂಕಿಂಗ್ ನಿರ್ವಹಣೆ ಎಲ್ಲವೂ ಅದೇ ಬ್ಯಾಂಕ್ ಕೈಯಲ್ಲಿ ಇರುತ್ತದೆ. ಅದರ ಎಲ್ಲಾ ಸೇವೆಗಳು ಯಥಾ ರೀತಿಯಲ್ಲಿ ಮುಂದುವರಿಯಲಿವೆ. ಎಸ್ವಿಬಿ ಯುಕೆಯ ಗ್ರಾಹಕರ ಖಾತೆ ಇತ್ಯಾದಿ ಯಾವುದೂ ಕೂಡ ಬದಲಾಗುವುದಿಲ್ಲ. ಗ್ರಾಹಕರು ಎಸ್ವಿಬಿ ಯುಕೆ ಜೊತೆ ಈ ಮೊದಲಿಂದಲೂ ಹೊಂದಿರುವ ರೀತಿಯಲ್ಲೇ ವ್ಯವಹಾರ ಮುಂದುವರಿಸಬಹುದು. ಸಾಲದ ಕಂತು ಕಟ್ಟುವ ಪ್ರಕ್ರಿಯೆ ಇತ್ಯಾದಿ ಎಲ್ಲವೂ ಮೊದಲಿನಂತೆಯೇ ನಡೆಯಲಿದೆ ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Bank Crisis: ಬ್ಯಾಂಕುಗಳಿಗೆ ವೈರಲ್ ಫೀವರ್; ಸಿಗ್ನೇಚರ್ ದಿವಾಳಿ; ಅಮೆರಿಕದಲ್ಲಿ ಮಕಾಡೆ ಮಲಗಿದ 3ನೇ ಬ್ಯಾಂಕ್
ಲಾಭದಲ್ಲಿ ಎಸ್ವಿಬಿ ಯುಕೆ
ಬ್ರಿಟನ್ ವಿಭಾಗದ ಸಿಲಿಕಾನ್ ವ್ಯಾಲಿ ಬ್ಯಾಂಕ್ ತಕ್ಕಮಟ್ಟಿಗೆ ಲಾಭದಲ್ಲಿರುವ ಸಂಸ್ಥೆ. 2022ರ ವರ್ಷದ ತನ್ನ ವರದಿಯಲ್ಲಿ 88 ಮಿಲಿಯನ್ ಸ್ಟರ್ಲಿಂಗ್ ಪೌಂಡ್ನಷ್ಟು (ಸುಮಾರು 872 ಕೋಟಿ ರುಪಾಯಿ) ಲಾಭ ತೋರಿಸಿತ್ತು. ಮಾರ್ಚ್ 10ರವರೆಗೆ ಈ ಬ್ಯಾಂಕ್ ಬಳಿ 5.5 ಬಿಲಿಯನ್ ಪೌಂಡ್ (54,000 ಕೋಟಿ ರುಪಾಯಿ) ಮೊತ್ತದಷ್ಟು ಸಾಲ ಇದೆ. 6.7 ಬಿಲಿಯನ್ ಪೌಂಡ್ (ಸುಮಾರು 66,000 ಕೋಟಿ ರುಪಾಯಿ) ಮೊತ್ತದಷ್ಟು ಗ್ರಾಹಕರ ಠೇವಣಿಗಳಿವೆ. ಅದರ ಭೌತಿಕವಲ್ಲದ ಆಸ್ತಿಯ ಮೊತ್ತವೇ 1.40 ಬಿಲಿಯನ್ ಪೌಂಡ್ (ಸುಮಾರು 13.9 ಸಾವಿರ ಕೋಟಿ ರುಪಾಯಿ) ನಷ್ಟು ಇದೆ.
ಈ ಹಿನ್ನೆಲೆಯಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿಯಾಗಿದ್ದು ಎಚ್ಎಸ್ಬಿಸಿಗೆ ವರದಾನವೆಂಬಂತಾಗಬಹುದು. ಆದರೆ, ಎಸ್ವಿಬಿ ಯುಕೆಯ ಗ್ರಾಹಕರು ದೊಡ್ಡ ಪ್ರಮಾಣದಲ್ಲಿ ತಮ್ಮ ಹಣವನ್ನು ಹಿಂಪಡೆಯಲು ಮುಂದಾದರೆ ಎಚ್ಎಸ್ಬಿಸಿ ಏನು ಮಾಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಎಚ್ಎಸ್ಬಿಸಿಯಲ್ಲಿರುವ ನಿಧಿಯನ್ನು ಇದಕ್ಕಾಗಿ ಉಪಯೋಗಿಸಬಹುದು. ಆದರೆ, ಅಮೆರಿಕನ್ ಬ್ಯಾಂಕುಗಳಿಗೆ ಅಂಟುತ್ತಿರುವ ದಿವಾಳಿ ಜಾಢ್ಯ ಎಚ್ಎಸ್ಬಿಸಿಗೂ ಸೋಂಕಿಬಿಟ್ಟರೆ ಕಷ್ಟ. ಒಂದು ವೇಳೆ ಯಾವುದೇ ಪ್ರಮಾದವಾಗದೇ ಈ ಬಿಕ್ಕಟ್ಟು ಶಮನವಾದರೆ ಎಸ್ವಿಬಿ ಯುಕೆಯ ಖರೀದಿಯಿಂದ ಎಚ್ಎಸ್ಬಿಸಿಗೆ ಹೊಸ ಶಕ್ತಿಯಂತೂ ಸಿಕ್ಕಂತಾಗುತ್ತದೆ.
Published On - 5:09 pm, Mon, 13 March 23