ಅಸೆಸ್ಮೆಂಟ್ ವರ್ಷ 2021-22ಕ್ಕೆ ಆದಾಯ ತೆರಿಗೆ ರಿಟರ್ನ್ ಅಥವಾ ಐಟಿಆರ್ ಫೈಲಿಂಗ್ಗೆ (Income Tax Return Filing) ಮಾರ್ಚ್ 31, 2022 ಕೊನೆ ದಿನವಾಗಿದೆ. ಗಳಿಕೆ ಇರುವ ವ್ಯಕ್ತಿಗಳು ತಮ್ಮ ಐಟಿಆರ್ ಅನ್ನು ಡಿಸೆಂಬರ್ 31, 2021ರೊಳಗೆ ಸಲ್ಲಿಸದಿದ್ದಲ್ಲಿ ಈಗಲೂ ಮಾರ್ಚ್ 31, 2022ರೊಳಗೆ ಫೈಲ್ ಮಾಡಬಹುದು. ಆದರೆ ಗಡುವನ್ನು ಮೀರಿದ ಐಟಿಆರ್ ಫೈಲಿಂಗ್ಗೆ ದಂಡ ವಿಧಿಸಲಾಗುತ್ತದೆ. ಆದಾಯ ತೆರಿಗೆ ಸ್ಲ್ಯಾಬ್ ಏನು ಎಂಬುದರ ಆಧಾರದ ಮೇಲೆ ಈ ದಂಡದ ಪ್ರಮಾಣ ನಿರ್ಧರಿಸಲಾಗುತ್ತದೆ. ಆದರೂ ಆದಾಯ ತೆರಿಗೆ ಜವಾಬ್ದಾರಿ ಇರುವ ತೆರಿಗೆ ಪಾವತಿದಾರರು ಕೊನೆ ದಿನಾಂಕದೊಳಗೆ ಐಟಿಆರ್ ಫೈಲ್ ಮಾಡಲು ವಿಫಲರಾದಲ್ಲಿ ಅಂಥವರು ಜೈಲು ಸೇರಬೇಕಾಗಬಹುದು. ಜೈಲು ಶಿಕ್ಷೆಯ ಅವಧಿ ಕನಿಷ್ಠ 3 ವರ್ಷಗಳು ಹಾಗೂ ಗರಿಷ್ಠ 7 ವರ್ಷಗಳ ತನಕ ಇರಲಿದೆ.
ಆದಾಯ ತೆರಿಗೆ ರಿಟರ್ನ್ ಕೊನೆ ದಿನಾಂಕದ ಬಗ್ಗೆ ಮುಂಬೈ ಮೂಲದ ತೆರಿಗೆ ಮತ್ತು ಹೂಡಿಕೆ ತಜ್ಞರೊಬ್ಬರು ಮಾತನಾಡಿದ್ದು, ನಿಗದಿತ ದಿನಾಂಕದೊಳಗೆ ಐಟಿಆರ್ ಫೈಲ್ ಮಾಡಲು ವಿಫಲರಾದಲ್ಲಿ ಆದಾಯ ತೆರಿಗೆ ಇಲಾಖೆಯು ದಂಡ ಮೊತ್ತವಾಗಿ ವಾಸ್ತವ ಆದಾಯ ತೆರಿಗೆಯ ಶೇ 50ರಿಂದ ಶೇ 200ರಷ್ಟು ಕಟ್ಟಬೇಕಾಗುತ್ತದೆ. ಇದರ ಜತೆಗೆ ತೆರಿಗೆ ಮತ್ತು ಆಯಾ ದಿನಾಂಕದ ತನಕ ಬಡ್ಡಿ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆ ನೋಟಿಸ್ ಬಂದಾಗ ಐಟಿಆರ್ ಫೈಲ್ ಮಾಡುವುದರ ಜತೆಗೆ ಇವೆಲ್ಲ ಮಾಡಬೇಕಾಗುತ್ತದೆ ಎನ್ನುತ್ತಾರೆ. ತೆರಿಗೆ ಪಾವತಿದಾರರು ಗಡುವು ಮುಗಿದ ಮೇಲೂ ಆದಾಯ ತೆರಿಗೆ ಕಟ್ಟುವ ಜವಾಬ್ದಾರಿ ಇದ್ದು, ಐಟಿಆರ್ ಫೈಲ್ ಮಾಡುವುದಕ್ಕೆ ವಿಫಲರಾದಲ್ಲಿ ಅಂಥವರ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಭಾರತ ಸರ್ಕಾರಕ್ಕೆ ಅಧಿಕಾರ ಇದೆ.
ಐಟಿಆರ್ ಕಟ್ಟುವ ದಿನಾಂಕವನ್ನು ಮೀರಿದಲ್ಲಿ, ಆದರೆ ಪಾವತಿಸಬೇಕಾದ ದಿನಾಂಕಕ್ಕೆ ಮುಂಚೆ ಕಟ್ಟಬೇಕಾದ ವಿಳಂಬ ಶುಲ್ಕದ ಬಗ್ಗೆ ಮತ್ತೊಬ್ಬ ತಜ್ಞರು ಮಾತನಾಡಿದ್ದು, ಯಾವುದಾದರೂ ತೆರಿಗೆ ಪಾವತಿದಾರರು ಡಿಸೆಂಬರ್ 31, 2021ರೊಳಗೆ ಐಟಿಆರ್ ಫೈಲ್ ಮಾಡದಿದ್ದಲ್ಲಿ ಮಾರ್ಚ್ 31, 2022ರ ತನಕ ಅವಕಾಶ ಇರುತ್ತದೆ. ಆದರೆ 5000 ರೂಪಾಯಿ ವಿಳಂಬ ಶುಲ್ಕವನ್ನು ಐಟಿಆರ್ ಫೈಲಿಂಗ್ ವೇಳೆ ಸಲ್ಲಿಸಬೇಕಾಗುತ್ತದೆ. ಅದೂ ಒಂದು ವೇಳೆ ತೆರಿಗೆ ವ್ಯಾಪ್ತಿಗೆ ಬರುವ ಆದಾಯ 5 ಲಕ್ಷ ರೂಪಾಯಿಗಿಂತ ಹೆಚ್ಚಿದ್ದಾಗ ಮಾತ್ರ. ಒಂದು ವೇಳೆ ತೆರಿಗೆ ವ್ಯಾಪ್ತಿಗೆ ಬರುವ ಆದಾಯ 5 ಲಕ್ಷ ರೂಪಾಯಿ ಒಳಗಿದ್ದಲ್ಲಿ ಅದು 1000 ರೂಪಾಯಿ ಆಗುತ್ತದೆ. ವಾಸ್ತವ ತೆರಿಗೆ ಬಾಕಿ ಮೇಲೆ ಶೇ 50ರಿಂದ ಶೇ 200ರಷ್ಟು ದಂಡ ಬೀಳಬಾರದು ಹಾಗೂ 3ರಿಂದ 7 ವರ್ಷ ಜೈಲು ಶಿಕ್ಷೆ ಆಗಬಾರದು ಅಂದರೆ ಕೊನೆ ದಿನಾಂಕದೊಳಗೆ ಐಟಿಆರ್ ಫೈಲ್ ಮಾಡಲು ಸಲಹೆ ನೀಡುತ್ತಾರೆ.
ಇದನ್ನೂ ಓದಿ: ಐಟಿಆರ್, ಆಧಾರ್, ತೆರಿಗೆ ಯೋಜನೆ ತನಕ 2022ನೇ ಇಸವಿಯಲ್ಲಿನ 5 ಗಡುವು ದಿನಾಂಕಗಳ ಬಗ್ಗೆ ತಿಳಿಯಿರಿ
Published On - 4:39 pm, Fri, 28 January 22