ಐಐಟಿ ವಿದ್ಯಾರ್ಥಿಗಳು ವಿನ್ಯಾಸಪಡಿಸಿದ 8 ಚಿಪ್​ಸೆಟ್​ಗಳು ಸೆಮಿಕಂಡಕ್ಟರ್ ಫ್ಯಾಬ್ ಘಟಕಗಳಿಗೆ ರವಾನೆ; ಈ ಚಿಪ್​ಸೆಟ್​ಗಳು ಯಾಕೆ ಮುಖ್ಯ?

IIT students designed 8 chipsets sent to fabs: ಭಾರತದ ಐಐಟಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ 8 ಚಿಪ್​ಸೆಟ್ ಡಿಸೈನ್​ಗಳನ್ನು ಫ್ಯಾಬ್ ಘಟಕಗಳಿಗೆ ಕಳುಹಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ ಉಪಕರಣಗಳಿಗೆ ಚಿಪ್​ಸೆಟ್ ಮಿದುಳು ಇದ್ದಂತೆ. ಹೀಗಾಗಿ, ಇದರ ಮಹತ್ವ ದೊಡ್ಡದಿದೆ. ಭಾರತದ ವಿವಿಧ ಐಐಟಿಗಳಲ್ಲಿರುವ ವಿದ್ಯಾರ್ಥಿಗಳು ಇದೂವರೆಗೆ 20 ಚಿಪ್​ಸೆಟ್​​ಗಳನ್ನು ಡಿಸೈನ್ ಮಾಡಿದ್ದಾರೆ.

ಐಐಟಿ ವಿದ್ಯಾರ್ಥಿಗಳು ವಿನ್ಯಾಸಪಡಿಸಿದ 8 ಚಿಪ್​ಸೆಟ್​ಗಳು ಸೆಮಿಕಂಡಕ್ಟರ್ ಫ್ಯಾಬ್ ಘಟಕಗಳಿಗೆ ರವಾನೆ; ಈ ಚಿಪ್​ಸೆಟ್​ಗಳು ಯಾಕೆ ಮುಖ್ಯ?
ಸೆಮಿಕಂಡಕ್ಟರ್ ಚಿಪ್

Updated on: Jul 20, 2025 | 2:09 PM

ನವದೆಹಲಿ, ಜೂನ್ 20: ವಿವಿಧ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಇಲ್ಲಿಯವರೆಗೆ 20 ಚಿಪ್​ಸೆಟ್​ಗಳನ್ನು (semiconductor chip) ವಿನ್ಯಾಸಗೊಳಿಸಿದ್ದಾರೆ. ಈ ಪೈಕಿ ಎಂಟನ್ನು ಜಾಗತಿಕ ಫೌಂಡ್ರಿಗಳು (global foundries) ಮತ್ತು ಮೊಹಾಲಿಯಲ್ಲಿರುವ ಸೆಮಿಕಂಡಕ್ಟರ್ ಲ್ಯಾಬ್​​ಗೆ ಕಳುಹಿಸಲಾಗಿದೆ. ಅಲ್ಲಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಕಾರ್ಯಕ್ಕೆ ಅವುಗಳನ್ನು ಬಳಸಲಾಗುತ್ತದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಹೈದರಾಬಾದ್ ಕ್ಯಾಂಪಸ್​ನ ಐಐಟಿಯಲ್ಲಿ 14ನೇ ಘಟಿಕೋತ್ಸವ ಸಮಾರಾಂಭದಲ್ಲಿ ಮಾತನಾಡುತ್ತಿದ್ದ ಕೇಂದ್ರ ಸಚಿವರು, ಭಾರತದ ಮೊದಲ ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್​ನ ವಾಣಿಜ್ಯಾತ್ಮಕ ತಯಾರಿಕೆ ಇದೇ ವರ್ಷದಲ್ಲಿ ಆರಂಭವಾಗುತ್ತದೆ ಎಂಬುದನ್ನು ಪುನರುಚ್ಚರಿಸಿದ್ದಾರೆ.

ಸರ್ಕಾರ ಕೂಡ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಎನ್ನುವ ಯೋಜನೆ ಮೂಲಕ ಈ ಉದ್ಯಮದ ಒಟ್ಟಾರೆ ಬೆಳವಣಿಗೆಗೆ ಉತ್ತೇಜಿಸುತ್ತಿದೆ. ಇದೇ ಮಿಷನ್ ಅಡಿಯಲ್ಲಿ ಚಿಪ್​ಸೆಟ್ ಡಿಸೈನ್​ಗೆ ಪರಿಕರಗಳ ವ್ಯವಸ್ಥೆಯನ್ನೂ ಸರ್ಕಾರ ಮಾಡಿದೆ. ಐಐಟಿ ವಿದ್ಯಾರ್ಥಿಗಳು ಈ ಪರಿಕರಗಳನ್ನು ಬಳಸಿ ಚಿಪ್​ಸೆಟ್ ಅಭಿವೃದ್ಧಪಡಿಸುತ್ತಿದ್ದಾರೆ.

ಇದನ್ನೂ ಓದಿ: ಭಾರತದಿಂದ ಮೊದಲ ಕ್ವಾರ್ಟರ್​ನಲ್ಲಿ 5 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ರಫ್ತು

ಸೆಮಿಕಂಡಕ್ಟರ್ ಉದ್ಯಮಕ್ಕೆ ಚಿಪ್​ಸೆಟ್ ಎಷ್ಟು ಮಹತ್ವದ್ದು ಗೊತ್ತಾ?

ಚಿಪ್​ಸೆಟ್ ಎಂಬುದು ಈಗಿನ ಎಲೆಕ್ಟ್ರಾನಿಕ್ಸ್ ವಸ್ತುಗಳ ಮಿದುಳು ಎಂದು ಬಣ್ಣಿಸಬಹುದು. ಸೆಮಿಕಂಡಕ್ಟರ್ ಉದ್ಯಮದಲ್ಲಿ ಅತ್ಯಂತ ಮೌಲಯುತ ಉತ್ಪನ್ನ ಇದು.

ಒಂದು ಸೆಮಿಕಂಡಕ್ಟರ್ ಚಿಪ್ ಎಂದರೆ ಸಿಲಿಕಾನ್ ಇತ್ಯಾದಿ ಸೆಮಿಕಂಡಕ್ಟರ್ ವಸ್ತುವಿನ ಒಂದು ತುಣುಕು. ಇದರಲ್ಲಿ ಎಲೆಕ್ಟ್ರಾನಿಕ್ ಸರ್ಕ್ಯುಟ್ ನಿರ್ಮಿಸಲಾಗಿರುತ್ತದೆ. ಚಿಪ್​ಸೆಟ್ ಎಂದರೆ ವಿವಿಧ ಚಿಪ್​ಗಳನ್ನು ಒಂದಕ್ಕೊಂದು ಜೋಡಿಸಿರಲಾಗಿರುತ್ತದೆ.

ಕಂಪ್ಯೂಟಿಂಗ್ ಸಾಧನದಲ್ಲಿರುವ ಪ್ರೋಸಸರ್, ಮೆಮೊರಿ, ಸ್ಟೋರೇಜ್ ಹಾಗೂ ಇತರ ಭಾಗಗಳ ಮಧ್ಯೆ ದತ್ತಾಂಶದ ರವಾನೆಯನ್ನು ನಿಗದಿತ ಉದ್ದೇಶದ ಪ್ರಕಾರ ನಿರ್ವಹಿಸುವ ಒಂದು ವ್ಯವಸ್ಥೆಯೇ ಚಿಪ್​ಸೆಟ್. ಸ್ಮಾರ್ಟ್​ಫೋನ್, ಲ್ಯಾಪ್​ಟಾಪ್, ಟ್ಯಾಬ್ಲೆಟ್, ವಾಹನ ಇತ್ಯಾದಿ ಉತ್ಪನ್ನಗಳಿಗೆ ಚಿಪ್​ಸೆಟ್ ಬೇಕೇ ಬೇಕು. ಇಲ್ಲದಿದ್ದರೆ ಈ ಉತ್ಪನ್ನಗಳಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂವಹನ ಸಾಧ್ಯವೇ ಆಗುವುದಿಲ್ಲ.

ಇದನ್ನೂ ಓದಿ: ಒಂದು ಕಾಲದ ಗ್ಲೋಬಲ್ ಸೂಪರ್ ಬ್ರ್ಯಾಂಡ್ ಕೆಲ್ವಿನೇಟರ್ ಈಗ ರಿಲಾಯನ್ಸ್ ಪಾಲು

ಚಿಪ್​ಸೆಟ್ ವಿನ್ಯಾಸ ಮಾಡುವುದು ಅಷ್ಟು ಸುಲಭವಲ್ಲ. ಚಿಪ್​ಸೆಟ್ ಆರ್ ಅಂಡ್ ಡಿ ಕಾರ್ಯಕ್ಕೆ ಸಾವಿರಾರು ಕೋಟಿ ರೂ ಅನ್ನು ವ್ಯಯಿಸಲಾಗುತ್ತದೆ. ಹಾರ್ಡ್​ವೇರ್ ಸಾಫ್ಟ್​ವೇರ್ ಏಕೀಕರಣ, ವಿದ್ಯುತ್ ಬಳಕೆ ಕ್ಷಮತೆ, ಬಹಳ ಸಂಕೀರ್ಣವಾದ ತರ್ಕ ಇತ್ಯಾದಿ ಕಾರ್ಯಗಳು ಚಿಪ್​ಸೆಟ್ ವಿನ್ಯಾಸದ ಹಿಂದೆ ಇರುತ್ತವೆ.

ಕ್ವಾಲ್​ಕಾಮ್, ಇಂಟೆಲ್, ಎಎಂಡಿ, ಆ್ಯಪಲ್, ಮೀಡಿಯಾಟೆಕ್ ಇತ್ಯಾದಿ ಹಲವು ಕಂಪನಿಗಳು ಚಿಪ್​ಸೆಟ್ ವಿನ್ಯಾಸದಲ್ಲಿ ಪಳಗಿವೆ. ಭಾರತದಲ್ಲಿ ಹಲವು ದಶಕಗಳ ಹಿಂದೆಯೇ ಸೆಮಿಕಂಡಕ್ಟರ್ ಉದ್ಯಮ ಸ್ಥಾಪನೆಗೆ ಪ್ರಯತ್ನವಾಗಿತ್ತಾದರೂ ಇತ್ತೀಚಿನ ಕೆಲ ವರ್ಷಗಳಿಂದ ಮಾತ್ರ ಗಂಭೀರ ಎನಿಸಬಹುದಾದ ಹೆಜ್ಜೆಗಳನ್ನು ಇಡಲಾಗಿದೆ.

ಭಾರತದಲ್ಲಿ ಸದ್ಯ ಆರು ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕಗಳಿಗೆ ಅನುಮೋದನೆ ಸಿಕ್ಕಿದೆ. ಇಲ್ಲಿ ಚಿಪ್​ಸೆಟ್​ ವಿನ್ಯಾಸದ ನೆರವಿನಿಂದ ಚಿಪ್​ಸೆಟ್ ಅನ್ನು ತಯಾರಿಸಲಾಗುತ್ತಿದೆ. ಈ ವರ್ಷಾಂತ್ಯದೊಳಗೆ ವಾಣಿಜ್ಯಾತ್ಮಕವಾಗಿ ಚಿಪ್​ಸೆಟ್​​ಗಳನ್ನು ಹೊರತರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ