ನವದೆಹಲಿ, ಏಪ್ರಿಲ್ 17: ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಭಾರತದ ಆರ್ಥಿಕ ಬೆಳವಣಿಗೆ (economic growth) ಬಗ್ಗೆ ತನ್ನ ನಿರೀಕ್ಷೆ ಹೆಚ್ಚಿಸಿದೆ. 2024-25ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.5ರಷ್ಟು ಬೆಳೆಯಬಹುದು ಎಂದು ಅಂದಾಜಿಸಿದ್ದ ಐಎಂಎಫ್ ಇದೀಗ ತನ್ನ ಅಂದಾಜು ಪರಿಷ್ಕರಿಸಿದ್ದು, ಶೇ. 6.8ರಷ್ಟು ಜಿಡಿಪಿ ಹೆಚ್ಚಬಹುದು ಎಂದು ಅಭಿಪ್ರಾಯಪಟ್ಟಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ನಿರೀಕ್ಷೆಮೀರಿ ಬೆಳೆದಿರುವುದು ಮತ್ತು ಈ ವರ್ಷದಲ್ಲಿ ಪ್ರಮುಖ ಆರ್ಥಿಕ ಅಂಶಗಳು ಸುದೃಢವಾಗಿರುವುದರಿಂದ ಐಎಂಎಫ್ ಮಾತ್ರವಲ್ಲ ಬಹುತೇಕ ಏಜೆನ್ಸಿಗಳೂ ಕೂಡ ಭಾರತದ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ.
ನಿನ್ನೆ ಮಂಗಳವಾರ (ಏ. 16) ಬಿಡುಗಡೆ ಮಾಡಿದ ವರ್ಲ್ಡ್ ಎಕನಾಮಿಕ್ ಔಟ್ಲುಕ್ ವರದಿಯಲ್ಲಿ ಐಎಂಎಫ್ ಭಾರತವನ್ನೂ ಒಳಗೊಂಡಂತೆ ವಿವಿಧ ದೇಶಗಳ ಆರ್ಥಿಕ ಬೆಳವಣಿಗೆ ಬಗ್ಗೆ ಅಂದಾಜು ಪರಿಷ್ಕರಿಸಿದೆ. ಈ ವರದಿ ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 7.8ರಷ್ಟು ಬೆಳೆಯಬಹುದು ಎಂದಿದೆ. 2024-25 ಮತ್ತು 2025-26ರಲ್ಲಿ ಕ್ರಮವಾಗಿ ಶೇ. 6.8 ಮತ್ತು ಶೇ. 6.5ರಷ್ಟು ಜಿಡಿಪಿ ವೃದ್ಧಿಯನ್ನು ಭಾರತ ಕಾಣಬಹುದು ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಅದೇ ಸಂಬಳ, ಹೆಚ್ಚು ಕೆಲಸ; ಉದ್ಯೋಗಿಗಳನ್ನು ಕಾಡುತ್ತಿದೆ ‘ಒಣ ಬಡ್ತಿ’ ಟ್ರೆಂಡ್
2024ರ ಕ್ಯಾಲಂಡರ್ ವರ್ಷದಲ್ಲಿ ಜಾಗತಿಕವಾಗಿ ಆರ್ಥಿಕತೆ ಸರಾಸರಿ ಶೇ. 3.2ರಷ್ಟು ವೃದ್ಧಿ ಕಾಣಬಹುದು ಎಂದು ಐಎಂಎಫ್ ನಿರೀಕ್ಷಿಸಿದೆ. 2025ರಲ್ಲೂ ಇಷ್ಟೇ ಪ್ರಮಾಣದ ಬೆಳವಣಿಗೆ ಮುಂದುವರಿಯಬಹುದು ಎಂದಿದೆ. ಮುಂದುವರಿದ ದೇಶಗಳ ಆರ್ಥಿಕತೆ 2024ರಲ್ಲಿ ಶೇ. 1.7ರಷ್ಟು, ಅಭಿವೃದ್ದಿಶೀಲ ದೇಶಗಳ ಆರ್ಥಿಕತೆ ಶೇ. 4.2ರಷ್ಟು ಹೆಚ್ಚಾಗಬಹುದು ಎಂದಿದೆ.
ಚೀನಾದ ಆರ್ಥಿಕತೆ 2024 ಮತ್ತು 2025ರಲ್ಲಿ ಕ್ರಮವಾಗಿ ಶೇ. 4.6 ಮತ್ತು ಶೇ. 4.1ರಷ್ಟು ಬೆಳವಣಿಗೆ ಕಾಣಬಹುದು ಎಂಬುದು ಐಎಂಎಫ್ನ ಅಂದಾಜು. ಕೆಳ ಆದಾಯ ಗುಂಪಿನ ಅಭಿವೃದ್ಧಿಶೀಲ ದೇಶಗಳ ಆರ್ಥಿಕತೆ 2025ರಲ್ಲಿ ಶೇ. 5.2ರಷ್ಟು ಹೆಚ್ಚಬಹುದು ಎಂದು ನಿರೀಕ್ಷಿಸಿದೆ.
ಇದನ್ನೂ ಓದಿ: ಮಾರ್ಚ್ ಕ್ವಾರ್ಟರ್ನಲ್ಲಿ ಚೀನಾ ಆರ್ಥಿಕತೆ ನಿರೀಕ್ಷೆಮೀರಿ ಬೆಳವಣಿಗೆ; ಭಾರತದಕ್ಕಿಂತ ಕಡಿಮೆ
ಭಾರತದ ಆರ್ಥಿಕತೆ 2023-24ರಲ್ಲಿ ಶೇ. 6.7ರಷ್ಟು ಹೆಚ್ಚಬಹುದು ಎಂದು ಈ ಮೊದಲು ನಿರೀಕ್ಷಿದ್ದ ಐಎಂಎಫ್ ಈಗ ಅದನ್ನು ಶೇ. 7.8ಕ್ಕೆ ಬದಲಿಸಿದೆ. ಭಾರತದ ಹಣಕಾಸು ಸಚಿವಾಲಯ ಮಾಡಿದ ಅಂದಾಜಿಗಿಂತಲೂ ಇದು ಹೆಚ್ಚಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ