ಫೆಬ್ರವರಿ 1ರಿಂದ 2 ಲಕ್ಷದಿಂದ 5 ಲಕ್ಷದವರೆಗಿನ ಐಎಂಪಿಎಸ್ ವರ್ಗಾವಣೆಗೆ ಎಸ್‌ಬಿಐನಿಂದ ರೂ. 20 + ಜಿಎಸ್‌ಟಿ

| Updated By: Srinivas Mata

Updated on: Jan 04, 2022 | 8:11 AM

ಫೆಬ್ರವರಿ 1ನೇ ತಾರೀಕಿನಿಂದ ಅನ್ವಯ ಆಗುವಂತೆ 2 ಲಕ್ಷದಿಂದ 5 ಲಕ್ಷ ರೂಪಾಯಿ ತನಕದ ಐಎಂಪಿಎಸ್ ವರ್ಗಾವಣೆಗೆ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ ರೂ. 20 ಹಾಗೂ ಜಿಎಸ್​ಟಿ ವಿಧಿಸುತ್ತದೆ.

ಫೆಬ್ರವರಿ 1ರಿಂದ 2 ಲಕ್ಷದಿಂದ 5 ಲಕ್ಷದವರೆಗಿನ ಐಎಂಪಿಎಸ್ ವರ್ಗಾವಣೆಗೆ ಎಸ್‌ಬಿಐನಿಂದ ರೂ. 20 + ಜಿಎಸ್‌ಟಿ
ಐಎಂಪಿಎಸ್​ ಶುಲ್ಕ ವಿವರ
Follow us on

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್ ಶಾಖೆಗಳಲ್ಲಿ ಮಾಡಿದ ಹಣ ವರ್ಗಾವಣೆಗೆ ಇನ್​ಸ್ಟಂಟ್​ ಪೇಮೆಂಟ್ ಸರ್ವೀಸ್ (IMPS) ಮಿತಿಯನ್ನು ಹೆಚ್ಚಿಸಿದೆ ಎಂದು ಘೋಷಿಸಿದೆ. ಎಸ್​ಬಿಐ ವೆಬ್‌ಸೈಟ್ ಪ್ರಕಾರ, ಫೆಬ್ರವರಿ 1, 2022ರಿಂದ ಜಾರಿಗೆ ಬರುವಂತೆ ಐಎಂಪಿಎಸ್​ ವಹಿವಾಟುಗಳಿಗೆ ಹೊಸ ಸ್ಲ್ಯಾಬ್ ಅನ್ನು ಸೇರಿಸಲಾಗಿದೆ: 2 ಲಕ್ಷದಿಂದ 5 ಲಕ್ಷ ರೂ. ವೆಬ್‌ಸೈಟ್ ಪ್ರಕಾರ ರೂ. 2 ಲಕ್ಷದಿಂದ ರೂ. 5 ಲಕ್ಷದವರೆಗಿನ ಮೊತ್ತಕ್ಕೆ ಐಎಂಪಿಎಸ್ ಮೂಲಕ ಹಣ ಕಳುಹಿಸುವ ಶುಲ್ಕಗಳು ರೂ. 20 ಮತ್ತು ಜಿಎಸ್‌ಟಿ ಆಗಿರುತ್ತದೆ. IMPS ಎಂಬುದು ಬ್ಯಾಂಕ್‌ಗಳು ರಿಯಲ್​ ಟೈಮ್​ನಲ್ಲಿ ಅಂತರ-ಬ್ಯಾಂಕ್ ಹಣ ವರ್ಗಾವಣೆಯನ್ನು ಅನುಮತಿಸಲು ಒದಗಿಸಿದ ಜನಪ್ರಿಯ ಪಾವತಿ ಸೇವೆಯಾಗಿದೆ. ಅದು ಭಾನುವಾರ ಮತ್ತು ರಜಾದಿನಗಳನ್ನು ಒಳಗೊಂಡಂತೆ 24X7 ಲಭ್ಯವಿದೆ. ಎಸ್​ಬಿಐನ IMPS ಶುಲ್ಕಗಳನ್ನು ಬ್ಯಾಂಕ್ ಶಾಖೆಗಳಲ್ಲಿ ಮಾಡಲಾಗುತ್ತದೆ.

IMPS ಎಂದರೇನು?
ಐಎಂಪಿಎಸ್​ ಅಂದರೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) 24×7 ಶೀಘ್ರ ದೇಶೀಯ ಹಣ ವರ್ಗಾವಣೆ ಸೌಲಭ್ಯವನ್ನು ಒದಗಿಸುವುದಕ್ಕೆ ಮಾಡಿರುವ ಪ್ರಮುಖ ಪಾವತಿ ವ್ಯವಸ್ಥೆಯಾಗಿದೆ. ಮತ್ತು ಇಂಟರ್​ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್‌ಗಳು, ಬ್ಯಾಂಕ್ ಶಾಖೆಗಳು, ATMಗಳು, SMS ಮತ್ತು IVRSನಂತಹ ವಿವಿಧ ಚಾನೆಲ್‌ಗಳ ಮೂಲಕ ಇದನ್ನು ಬಳಸಬಹುದಾಗಿದೆ. ಬ್ಯಾಂಕ್‌ಗಳು ಮತ್ತು RBI ಅಧಿಕೃತ ಪ್ರಿಪೇಯ್ಡ್ ಪಾವತಿ ಸಾಧನ ವಿತರಕರ (PPI) ಮೂಲಕ ಗ್ರಾಹಕರು ಭಾರತದಾದ್ಯಂತ ಹಣವನ್ನು ಶೀಘ್ರವಾಗಿ ವರ್ಗಾಯಿಸಲು ಇದು ಅವಕಾಶ ಒದಗಿಸುತ್ತದೆ.

IMPS ವಹಿವಾಟುಗಳು ಚಾನೆಲ್ ಸ್ವತಂತ್ರವಾಗಿರುತ್ತವೆ ಮತ್ತು ಮೊಬೈಲ್/ಇಂಟರ್‌ನೆಟ್/ಎಟಿಎಂ ಚಾನೆಲ್‌ಗಳಿಂದ ಮಾಡಬಹುದು. ಗ್ರಾಹಕರು ಎಸ್ಸೆಮ್ಮೆಸ್ ಮೂಲಕ ಡೆಬಿಟ್ ಮತ್ತು ಕ್ರೆಡಿಟ್ ದೃಢೀಕರಣವನ್ನು ಪಡೆಯುತ್ತಾರೆ. ಇದು ಭಾನುವಾರ ಮತ್ತು ರಜಾದಿನಗಳನ್ನು ಒಳಗೊಂಡಂತೆ 24 X 7 ಲಭ್ಯವಿರುವ ಸೇವೆಯಾಗಿದೆ. IMPS ಮೂಲಕ ಪಾವತಿಗಳನ್ನು ಮಾಡಲು ಮೊಬೈಲ್ ಸಂಖ್ಯೆ ಮತ್ತು ಮೊಬೈಲ್ ಹಣ ಗುರುತಿಸುವಿಕೆ ಅಥವಾ ಬ್ಯಾಂಕ್ ಖಾತೆ ಮತ್ತು IFSC ಕೋಡ್ ಅಥವಾ ಆಧಾರ್ ಅಗತ್ಯವಾಗಿದೆ. ಇಂಟರ್​ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಥವಾ ಎಟಿಎಂಗಳನ್ನು ಬಳಸಿಕೊಂಡು ಪಾವತಿಗಳನ್ನು ಮಾಡಬಹುದು. 2021ರ ಅಕ್ಟೋಬರ್​ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) IMPS ಮೂಲಕ ವರ್ಗಾವಣೆ ಮಾಡಬಹುದಾದ ಹಣದ ಮೊತ್ತದಲ್ಲಿ ಹೆಚ್ಚಳವನ್ನು ಘೋಷಿಸಿತು. ವಹಿವಾಟಿನ ಮಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿತು.

“ಐಎಂಪಿಎಸ್‌ನಲ್ಲಿನ ಪ್ರತಿ ವಹಿವಾಟಿನ ಮಿತಿಯನ್ನು 2014ರ ಜನವರಿಯಿಂದ ಜಾರಿಗೆ ತರಲಾಗಿದೆ. ಪ್ರಸ್ತುತ SMS ಮತ್ತು IVRS ಹೊರತುಪಡಿಸಿ ಇತರ ಚಾನೆಲ್‌ಗಳಿಗೆ 2 ಲಕ್ಷ ರೂಪಾಯಿ ಮಿತಿ ಆಗಿದ್ದರೆ, SMS ಮತ್ತು IVRS ಚಾನೆಲ್‌ಗಳಿಗೆ ಪ್ರತಿ-ವಹಿವಾಟಿನ ಮಿತಿಯು ರೂ. 5000 ಆಗಿದೆ. RTGS ಈಗ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ. IMPSನ ತೀರುವಳಿ ಚಕ್ರಗಳಲ್ಲಿ ಅನುಗುಣವಾದ ಹೆಚ್ಚಳ ಕಂಡುಬಂದಿದೆ. ಇದರಿಂದಾಗಿ ಕ್ರೆಡಿಟ್ ಮತ್ತು ಇತ್ಯರ್ಥದ ಅಪಾಯಗಳನ್ನು ಕಡಿಮೆ ಮಾಡಲಾಗಿದೆ. ದೇಶೀಯ ಪಾವತಿ ವಹಿವಾಟುಗಳ ಪ್ರಕ್ರಿಯೆಯಲ್ಲಿ IMPS ವ್ಯವಸ್ಥೆಯ ಪ್ರಾಮುಖ್ಯವನ್ನು ಗಮನದಲ್ಲಿಟ್ಟುಕೊಂಡು, SMS ಮತ್ತು IVRS ಹೊರತುಪಡಿಸಿ ಇತರ ಚಾನೆಲ್‌ಗಳಿಗೆ ಪ್ರತಿ ವಹಿವಾಟಿನ ಮಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಇದು ಡಿಜಿಟಲ್ ಪಾವತಿಯಲ್ಲಿ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಲಿದ್ದು, ಗ್ರಾಹಕರಿಗೆ 2 ಲಕ್ಷಕ್ಕಿಂತ ಹೆಚ್ಚಿನ ಡಿಜಿಟಲ್ ಪಾವತಿ ಮಾಡಲು ಹೆಚ್ಚುವರಿ ಸೌಲಭ್ಯವನ್ನು ಒದಗಿಸಲಿದೆ. ಈ ನಿಟ್ಟಿನಲ್ಲಿ ಅಗತ್ಯ ಸೂಚನೆಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು,” ಎಂದು ಬೆಳವಣಿಗೆ ಮತ್ತು ನಿಯಂತ್ರಕ ನೀತಿಗಳ ಮೇಲಿನ ಆರ್‌ಬಿಐ ಹೇಳಿಕೆ ಪ್ರಕಾರ ಗೊತ್ತಾಗಿದೆ.

IMPS ವಹಿವಾಟುಗಳನ್ನು ಬಳಸುವ ಗ್ರಾಹಕರಿಗೆ ಬ್ಯಾಂಕ್‌ಗಳು ಶುಲ್ಕವನ್ನು ವಿಧಿಸುತ್ತವೆ. ಆದರೆ ಕೆಲವು ಬ್ಯಾಂಕ್‌ಗಳು ಗ್ರಾಹಕರು ಹೊಂದಿರುವ ಖಾತೆಯ ಪ್ರಕಾರ ಅಥವಾ ಇಂಟರ್​ನೆಟ್ ಬ್ಯಾಂಕಿಂಗ್ ಮೂಲಕ IMPS ಅನ್ನು ಬಳಸುವ ಆಧಾರದ ಮೇಲೆ IMPS ಅನ್ನು ಉಚಿತವಾಗಿ ನೀಡುತ್ತವೆ.

ಇದನ್ನೂ ಓದಿ: SBI 3 in 1 Account: ಎಸ್​ಬಿಐ 3 ಇನ್ 1 ಖಾತೆ ವೈಶಿಷ್ಟ್ಯ, ಅನುಕೂಲ ಹಾಗೂ ಇತರ ಮಾಹಿತಿಗಳು ಇಲ್ಲಿವೆ