Income Tax: ಹೊಸ ಆದಾಯ ತೆರಿಗೆ ಪದ್ಧತಿ; ಹಳೆಯ ತೆರಿಗೆ ವ್ಯವಸ್ಥೆಗಿಂತ ಇದು ಹೇಗೆ ಭಿನ್ನ?

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 07, 2023 | 2:21 PM

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ತೆರಿಗೆ ಪದ್ಧತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ, ಹಳೆಯ ತೆರಿಗೆ ವ್ಯವಸ್ಥೆ ಬೇಕು ಎನ್ನುವವರಿಗೂ ಅವಕಾಶ ಮುಂದುವರಿಯುತ್ತದೆ ಎಂದೂ ಸಚಿವೆ ಸ್ಪಷ್ಟಪಡಿಸಿದ್ದಾರೆ.

Income Tax: ಹೊಸ ಆದಾಯ ತೆರಿಗೆ ಪದ್ಧತಿ; ಹಳೆಯ ತೆರಿಗೆ ವ್ಯವಸ್ಥೆಗಿಂತ ಇದು ಹೇಗೆ ಭಿನ್ನ?
ಸಾಂದರ್ಭಿಕ ಚಿತ್ರ
Follow us on

ದೆಹಲಿ: ವೈಯಕ್ತಿಕ ಆದಾಯ ತೆರಿಗೆ (Personal Income Tax) ವಿಚಾರದಲ್ಲಿ ಸರ್ಕಾರ ಜಾರಿಗೆ ತಂದಿರುವ ಹೊಸ ವ್ಯವಸ್ಥೆ ಬಹಳಷ್ಟು ಮಂದಿಗೆ ಗೊಂದಲಕ್ಕೆ ಕಾರಣವಾಗಿದೆ. ಸರ್ಕಾರ ಸುಖಾಸುಮ್ಮನೆ ಏಳು ಸ್ಲ್ಯಾಬ್ ಗಳನ್ನು (Tax slabs) ಸೃಷ್ಟಿಸಿ ತೆರಿಗೆ ವ್ಯವಸ್ಥೆಯನ್ನು ಸಂಕೀರ್ಣಗೊಳಿಸಿದೆ ಎಂಬ ಆಕ್ಷೇಪಗಳು ಕೆಲವರಿಂದ ವ್ಯಕ್ತವಾಗಿದ್ದವು. ಆದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಹೊಸ ತೆರಿಗೆ ಪದ್ಧತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ, ಹಳೆಯ ತೆರಿಗೆ ವ್ಯವಸ್ಥೆ ಬೇಕು ಎನ್ನುವವರಿಗೂ ಅವಕಾಶ ಮುಂದುವರಿಯುತ್ತದೆ ಎಂದೂ ಸಚಿವೆ ಸ್ಪಷ್ಟಪಡಿಸಿದ್ದಾರೆ. ಅಂದರೆ, ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆ ಎರಡೂ ಕೂಡ ಅಸ್ತಿತ್ವದಲ್ಲಿರುತ್ತದೆ.

ಅಬ್ಸರ್ವರ್ ರಿಸರ್ಚ್ ಫೌಂಡೇಶನ್ನ ಉಪಾಧ್ಯಕ್ಷ ಗೌತಮ್ ಚೀಕರ್ಮಾನೆ ಬರೆದಿರುವ ‘ರಿಫಾರ್ಮ್ ನೇಶನ್’ (Reform Nation) ಎಂಬ ಪುಸ್ತಕದಲ್ಲಿ, ಹಳೆಯ ತೆರಿಗೆ ವ್ಯವಸ್ಥೆಯಲ್ಲಿದ್ದ ಸರಳತೆಯ ಅಂಶವನ್ನು ಹೊಸ ತೆರಿಗೆ ಪದ್ಧತಿಯಲ್ಲಿ ಕೈಬಿಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ನಿರ್ಮಲಾ ಸೀತಾರಾಮನ್, ಹಳೆಯ ತೆರಿಗೆ ಪದ್ಧತಿ ಯಾಕೆ ಸರಳವಿಲ್ಲ ಎಂಬುದನ್ನು ವಿವರಿಸಿದ್ದಾರೆ.

“ಹಳೆಯ ತೆರಿಗೆ ಪದ್ಧತಿ ಅಷ್ಟು ಸರಳವಿಲ್ಲ. ಬಹಳಷ್ಟು ವಿನಾಯಿತಿಗಳು ತುಂಬಿಹೋಗಿವೆ. 7-10 ತೆರಿಗೆ ವಿನಾಯಿತಿಗಳಿವೆ. ಶೇ. 10, ಶೇ. 20 ಮತ್ತು ಶೇ. 30ರ ಟ್ಯಾಕ್ಸ್ ಸ್ಲ್ಯಾಬ್ ಗಳಿವೆ. ಇದು ಸರಳವೆನ್ನುವವರಿಗೆ ಈ ಪದ್ಧತಿ ಮುಂದುವರಿಯುತ್ತದೆ. ಇದರ ಜೊತೆಗೆ ಹೊಸ ತೆರಿಗೆ ಪದ್ಧತಿ ಪರ್ಯಾಯವಾಗಿ ಚಾಲನೆಯಲ್ಲಿರುತ್ತದೆ” ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ:Income Tax Return: ಪರಿಷ್ಕೃತ ಆದಾಯ ತೆರಿಗೆ ರಿಟರ್ನ್; ಅರ್ಹತೆ, ಗಡುವು, ನೀವು ತಿಳಿದಿರಬೇಕಾದ ಇತರೆ ಅಂಶಗಳು ಇಲ್ಲಿವೆ

ಹೊಸ ತೆರಿಗೆ ಪದ್ಧತಿ ಹೇಗೆ ಭಿನ್ನ?

ಹೊಸ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ. ಆದರೆ, ತೆರಿಗೆ ಸ್ಲ್ಯಾಬ್ ಗಳನ್ನು ಏಳಕ್ಕೆ ಹೆಚ್ಚಿಸಲಾಗಿದೆ. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ 2.5 ಲಕ್ಷ ರೂ ವಾರ್ಷಿಕ ಆದಾಯದವರಿಗೆ ತೆರಿಗೆ ಇರುವುದಿಲ್ಲ. 2.5 ರಿಂದ 5 ಲಕ್ಷ ರೂವರೆಗಿನ ಆದಾಯದವರಿಗೆ ಶೇ. 5ರಷ್ಟು ತೆರಿಗೆ ಇದೆ. 5ರಿಂದ 10 ಲಕ್ಷ ರೂವರೆಗಿನ ಆದಾಯದವರಿಗೆ ಶೇ. 20 ತೆರಿಗೆ ಹಾಕಲಾಗುತ್ತದೆ. 10 ಲಕ್ಷಕ್ಕಿಂತ ಹೆಚ್ಚಿನ ಆದಾಯದವರಿಗೆ ಶೇ. 30ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಹೊಸ ತೆರಿಗೆ ಪದ್ಧತಿಯಲ್ಲೂ 2.5 ಲಕ್ಷ ರೂವರೆಗಿನ ಆದಾಯದ ಹಣ ತೆರಿಗೆ ಮುಕ್ತವಾಗಿರುತ್ತದೆ. 2.5 ರಿಂದ 5 ಲಕ್ಷ ರೂಗೆ ಶೇ. 5ರಷ್ಟು ತೆರಿಗೆ, 5ರಿಂದ 7.5 ಲಕ್ಷ ರೂವರೆಗಿನ ಆದಾಯಕ್ಕೆ ಶೇ. 10 ತೆರಿಗೆ ಇದೆ. 7.5ರಿಂದ 10 ಲಕ್ಷ ರೂಗೆ ಶೇ. 15 ತೆರಿಗೆ; 10ರಿಮದ 12.5 ಲಕ್ಷ ರೂಗೆ ಶೇ. 20ರಷ್ಟು ತೆರಿಗೆ; 12.5ರಿಂದ 15 ಲಕ್ಷ ರೂ ಆದಾಯಕ್ಕೆ ಶೇ. 25 ತೆರಿಗೆ ಮತ್ತು 15 ಲಕ್ಷ ರೂ ಮೇಲ್ಪಟ್ಟ ಆದಾಯದವರಿಗೆ ಶೇ. 30ರಷ್ಟು ತೆರಿಗೆ ಇದೆ.

ಹೊಸ ತೆರಿಗೆ ವ್ಯವಸ್ಥೆಯು ವಾರ್ಷಿಕವಾಗಿ 15 ಲಕ್ಷ ರೂಗಿಂತ ಕಡಿಮೆ ಆದಾಯ ಇರುವವರಿಗೆ ಹೆಚ್ಚು ಅನುಕೂಲವಾಗಿದೆ. ಆದರೆ, ಹೊಸ ತೆರಿಗೆ ವ್ಯವಸ್ಥೆಯ ಅಡಿ ತೆರಿಗೆ ಪಾವತಿಸುವವರಿಗೆ ಹೆಚ್ಆರ್ಎ ಇತ್ಯಾದಿ ತೆರಿಗೆ ವಿನಾಯಿತಿಗಳ ಅವಕಾಶ ಇರುವುದಿಲ್ಲ.

2020-21ರ ಬಜೆಟ್ ನಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಮೊದಲ ಬಾರಿಗೆ ಪ್ರಕಟಿಸಲಾಗಿತ್ತು. ಈಗ ಫೆಬ್ರುವರಿ 1ರಂದು 2023-24ರ ಬಜೆಟ್ ಮಂಡನೆಯಾಗುತ್ತಿದೆ. ಇದು ಈ ಸರ್ಕಾರದ ಕೊನೆಯ ಪೂರ್ಣಪ್ರಮಾಣದ ಬಜೆಟ್ ಆಗಿರಲಿದೆ. ಆದಾಯ ತೆರಿಗೆ ಸ್ಲ್ಯಾಬ್ ಸಂಖ್ಯೆ ಮತ್ತು ಆದಾಯ ಮಿತಿ ಎರಡೂ ಈಗಿರುವಷ್ಟೇ ಮುಂದುವರಿಯುವ ಸಾಧ್ಯತೆ ಇದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ