ನವದೆಹಲಿ, ಅಕ್ಟೋಬರ್ 24: ಭಾರತದಲ್ಲಿ ಕಳೆದ ಹತ್ತು ವರ್ಷದಲ್ಲಿ ಶಿಕ್ಷಣಕ್ಕೆ ಮಾಡುತ್ತಿರುವ ವೆಚ್ಚ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿದೆ. ಯುನೆಸ್ಕೋದ ನೂತನ ವರದಿಗಳ ಪ್ರಕಾರ 2015ರಿಂದ 2024ರವರೆಗೂ ಭಾರತದಲ್ಲಿ ಜಿಡಿಪಿಯ ಶೇ. 4.1ರಿಂದ 4.6ರಷ್ಟು ಮೊತ್ತವನ್ನು ಶಿಕ್ಷಣಕ್ಕೆ ವಿನಿಯೋಗಿಸಲಾಗಿದೆಯಂತೆ. ಅಂತಾರಾಷ್ಟ್ರೀಯವಾಗಿ ನಿಗದಿ ಮಾಡಲಾಗಿರುವ ಮಾನದಂಡದ ಪ್ರಕಾರ ಪ್ರತೀ ದೇಶವೂ ಜಿಡಿಪಿಯ ಶೇ. 4ರಿಂದ 6ರಷ್ಟು ಹಣವನ್ನು ಶಿಕ್ಷಣಕ್ಕೆ ವಿನಿಯೋಗಿಸಬೇಕು ಎಂದಿದೆ.
ಇನ್ನು, ಭಾರತದಲ್ಲಿ ಸರ್ಕಾರ ಶಿಕ್ಷಣಕ್ಕೆ ಮಾಡಿರುವ ವೆಚ್ಚ ಈ ಹತ್ತು ವರ್ಷದ ಅವಧಿಯಲ್ಲಿ ಶೇ. 13.5ರಿಂದ ಶೇ. 17.2ರಷ್ಟಿದೆ. ಇದೂ ಕೂಡ ಶೇ. 15ರಿಂದ 20ರಷ್ಟು ಸರ್ಕಾರಿ ವೆಚ್ಚ ಇರಬೇಕು ಎನ್ನುವ ಗುರಿಗೆ ಬದ್ಧವಾಗಿದೆ.
ಶಿಕ್ಷಣಕ್ಕೆ ಹೆಚ್ಚು ವೆಚ್ಚ ಮಾಡುತ್ತಿರುವ ಕೆಲವೇ ದೇಶಗಳಲ್ಲಿ ಭಾರತವೂ ಇದೆ. ಚೀನಾ, ಜಪಾನ್ ಮೊದಲಾದ ದೇಶಗಳಿಗಿಂತ ಭಾರತ ಶಿಕ್ಷಣಕ್ಕೆ ವೆಚ್ಚ ಮಾಡುವ ಅನುಪಾತ ಹೆಚ್ಚಿದೆ. ಜಿಡಿಪಿ ಶೇಕಡವಾರಾಗಲೀ, ಸರ್ಕಾರಿ ವೆಚ್ಚದ ಪ್ರಮಾಣವಾಗಲೀ ಎರಡರಲ್ಲೂ ಭಾರತ ನಿರೀಕ್ಷಿತ ಸಾಧನೆ ತೋರಿದೆ.
ಅಚ್ಚರಿ ಎಂದರೆ, ಜಾಗತಿಕವಾಗಿ ಶಿಕ್ಷಣಕ್ಕೆ ಮಾಡಲಾಗುತ್ತಿರುವ ವೆಚ್ಚ ಕಡಿಮೆ ಆಗುತ್ತಿದೆ. 2010ರಲ್ಲಿ ಜಾಗತಿಕವಾಗಿ ಶಿಕ್ಷಣಕ್ಕೆ ಸಾರ್ವಜನಿಕ ವೆಚ್ಚ ಸರಾಸರಿಯಾಗಿ ಶೇ. 13.2 ಇತ್ತು. 2020ರಲ್ಲಿ ಇದು ಶೇ. 12.5ಕ್ಕೆ ಇಳಿದಿದೆ. ಮಧ್ಯ ಏಷ್ಯಾ ಮತ್ತು ದಕ್ಷಿಣ ಏಷ್ಯಾ ಪ್ರದೇಶಗಳ ದೇಶಗಳು ಜಗತ್ತಿನ ಇತರ ಪ್ರದೇಶಗಳಿಗಿಂತ ಹೆಚ್ಚು ವೆಚ್ಚವನ್ನು ಶಿಕ್ಷಣಕ್ಕೆ ವಿನಿಯೋಗಿಸುತ್ತವೆ ಎಂಬುದು ಯುನೆಸ್ಕೋ ವರದಿಗಳಿಂದ ಗೊತ್ತಾಗುತ್ತದೆ.
ಇದನ್ನೂ ಓದಿ: ದೇಶದ ಹಿತಾಸಕ್ತಿಗೆ ಮೊದಲ ಆದ್ಯತೆ; ಕಣ್ಮುಚ್ಚಿ ಎಫ್ಡಿಐ ಸ್ವೀಕರಿಸಲು ಆಗಲ್ಲ: ನಿರ್ಮಲಾ ಸೀತಾರಾಮನ್
ಮಧ್ಯ ಮತ್ತು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಭಾರತಕ್ಕಿಂತ ಹೆಚ್ಚು ಶಿಕ್ಷಣ ವೆಚ್ಚ (ಜಿಡಿಪಿ ಪ್ರತಿಶತ) ಮಾಡುವ ದೇಶಗಳೆಂದರೆ ಭೂತಾನ್, ಕಜಕಸ್ತಾನ್, ಮಾಲ್ಡೀವ್ಸ್, ತಜಿಕಿಸ್ತಾನ್ ಮತ್ತು ಉಜ್ಬೆಕಿಸ್ತಾನ್ ಮಾತ್ರವೇ. ಇನ್ನುಳಿದ ದೇಶಗಳಿಗಿಂತ ಭಾರತ ಈ ವಿಚಾರದಲ್ಲಿ ಮುಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ