ದೇಶದ ಹಿತಾಸಕ್ತಿಗೆ ಮೊದಲ ಆದ್ಯತೆ; ಕಣ್ಮುಚ್ಚಿ ಎಫ್​ಡಿಐ ಸ್ವೀಕರಿಸಲು ಆಗಲ್ಲ: ನಿರ್ಮಲಾ ಸೀತಾರಾಮನ್

Nirmala Sitharaman speaks at US: ದೇಶದ ಹಿತಾಸಕ್ತಿ ಕಡೆಗಣಿಸಿ ವಿದೇಶೀ ನೇರ ಬಂಡವಾಳ ಹೂಡಿಕೆಗೆ ಅನುಮತಿ ಕೊಡಲು ಆಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಮೆರಿಕದ ವಾರ್ಟನ್ ಬಿಸಿನೆಸ್ ಸ್ಕೂಲ್​ನಲ್ಲಿ ಅ. 22ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸೀತಾರಾಮನ್, 2047ರೊಳಗೆ ಮುಂದುವರಿದ ದೇಶವನ್ನಾಗಿಸುವ ಗುರಿ ಸಾಧನೆಗೆ ಗಮನ ಕೊಡಲಾಗುತ್ತಿರುವ ನಾಲ್ಕು ಕ್ಷೇತ್ರಗಳನ್ನು ವಿವರಿಸಿದ್ದಾರೆ.

ದೇಶದ ಹಿತಾಸಕ್ತಿಗೆ ಮೊದಲ ಆದ್ಯತೆ; ಕಣ್ಮುಚ್ಚಿ ಎಫ್​ಡಿಐ ಸ್ವೀಕರಿಸಲು ಆಗಲ್ಲ: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

Updated on: Oct 24, 2024 | 11:09 AM

ನವದೆಹಲಿ, ಅಕ್ಟೋಬರ್ 24: ಭಾರತದ ವಿದೇಶೀ ಬಂಡವಾಳ ಹೂಡಿಕೆ ಹೆಚ್ಚುತ್ತಿರುವ ಹೊತ್ತಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟ ಸಂದೇಶವೊಂದನ್ನು ರವಾನಿಸಿದ್ದಾರೆ. ವಿದೇಶೀ ನೇರ ಹೂಡಿಕೆಗಳನ್ನು (ಎಫ್​ಡಿಐ) ಕಣ್ಮುಚ್ಚಿ ಸ್ವೀಕರಿಸಲು ಆಗಲ್ಲ. ದೇಶದ ಹಿತಾಸಕ್ತಿ ಮೊದಲ ಆದ್ಯತೆಯಾಗಿರುತ್ತದೆ. ಅದರಲ್ಲೂ ಮುಖ್ಯವಾಗಿ ತಂತ್ರಾತ್ಮಕವಾಗಿ ಸೂಕ್ಷ್ಮ ಪ್ರದೇಶದಲ್ಲಿ ದೇಶ ಇರುವುದರಿಂದ ಎಚ್ಚರದಿಂದಿರುವುದು ಅವಶ್ಯ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮೊನ್ನೆ (ಅ. 22) ಅಮೆರಿಕದ ವಾರ್ಟನ್ ಬಿಸಿನೆಸ್ ಸ್ಕೂಲ್​ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಎನ್ ಸೀತಾರಾಮನ್, ತಮ್ಮ ದೇಶಕ್ಕೆ ಉದ್ದಿಮೆ ಬೇಕು, ಹೂಡಿಕೆ ಬೇಕು. ಹಾಗಂತ ಎಲ್ಲಾ ಭದ್ರತೆಗಳನ್ನು ಗಾಳಿಗೆ ತೂರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಹೂಡಿಕೆ ಬೇಕು, ಅದು ಎಲ್ಲಿಂದಲಾದರೂ ಬರಲಿ ಅಂತ ಅಂದುಕೊಂಡು ಎಫ್​ಡಿಐಗೆ ಕಣ್ಮುಚ್ಚಿ ಒಪ್ಪಿಗೆ ಕೊಡಲು ಆಗಲ್ಲ. ನಮಗೆ ಬಿಸಿನೆಸ್ ಬೇಕು, ಹೂಡಿಕೆ ಬೇಕು ಎಂಬುದು ಹೌದು. ಆದರೆ, ಬಹಳ ಬಹಳವೇ ಸೂಕ್ಷ್ಮವಾಗಿರುವ ಪ್ರದೇಶದಲ್ಲಿ ಭಾರತ ಇರುವುದರಿಂದ ಒಂದಷ್ಟು ಸುರಕ್ಷತೆಗಳ ಬಗ್ಗೆಯೂ ಗಮನ ಕೊಡಬೇಕಾಗುತ್ತದೆ. ಇದೊಂದು ವಿಷಯ ಬಿಟ್ಟರೆ ಎಫ್​ಡಿಐ ಅನ್ನು ಸ್ವಾಗತಿಸುತ್ತೇವೆ’ ಎಂದು ಕೇಂದ್ರ ಹಣಕಾಸು ಸಚಿವೆ ವಿವರಿಸಿದ್ದಾರೆ.

ಇದನ್ನೂ ಓದಿ: ಮೋದಿಯ ಆ ಮಾತು ಸರಿ ಅನಿಸಿತು… ಭಾರತದೊಂದಿಗೆ ಸೇರಿ ಚಿಪ್ ತಯಾರಿಸಲು ಸಜ್ಜಾದ ವಿಶ್ವ ದೈತ್ಯ ನಿವಿಡಿಯಾ

ನಿರ್ಮಲಾ ಸೀತಾರಾಮನ್ ಪ್ರಕಾರ, ಭಾರತವು ನಿರೀಕ್ಷಿತ ಬೆಳವಣಿಗೆ ವೇಗ ಪಡೆಯಬೇಕಾದರೆ 100 ಬಿಲಿಯನ್ ಡಾಲರ್​ನಷ್ಟು ಹೂಡಿಕೆ ಬೇಕಾಗಬಹುದು. ಸದ್ಯ ಇದು 70ರಿಂದ 80 ಬಿಲಿಯನ್ ಡಾಲರ್ ಇದೆ.

2047ರ ಗುರಿ ಈಡೇರಿಕೆಗೆ ನಾಲ್ಕು ‘ಐ’ಗಳು

2047ರೊಳಗೆ ಮುಂದುವರಿದ ದೇಶವನ್ನಾಗಿ ಮಾಡುವ ಗುರಿ ಹೊಂದಿರುವ ಸರ್ಕಾರ ಈ ನಿಟ್ಟಿನಲ್ಲಿ ಇನ್​ಫ್ರಾಸ್ಟ್ರಕ್ಚರ್, ಇನ್ವೆಸ್ಟ್​ಮೆಂಟ್, ಇನ್ನೋವೇಶನ್ ಮತ್ತು ಇನ್​ಕ್ಲೂಸಿವ್ನೆಸ್, ಈ ನಾಲ್ಕು ಕ್ಷೇತ್ರಗಳನ್ನು ಗುರುತಿಸಿದೆ ಎಂದು ಹಣಕಾಸು ಸಚಿವೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 2024-26ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ. 7ರಿಂದ 8; ಡಲಾಯ್ಟ್, ಐಎಂಎಫ್, ಆರ್​ಬಿಐ ಅಂದಾಜು

ಸೇತುವೆ, ಬಂದರು, ಡಿಜಿಟಲ್ ಇತ್ಯಾದ ಬಹಳ ಮುಖ್ಯವಾಗಿರುವ ಭೌತಿಕ ಸೌಕರ್ಯಗಳ ಯೋಜನೆ ರೂಪಿಸುವುದು. ಇವುಗಳಿಗೆ ಬಂಡವಾಳ ವ್ಯವಸ್ಥೆ ಮಾಡುವುದು. ದೇಶದ ಸಮಸ್ಯೆ ಮತ್ತು ಸವಾಲುಗಳಿಗೆ ನವೀನ ಪರಿಹಾರಗಳನ್ನು ಒದಗಿಸುವುದು ಮೂರನೇ ಅಂಶ. ಹಾಗೆಯೇ, ಈ ಅಭಿವೃದ್ಧಿಯ ಫಲವು ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳುವುದು ನಾಲ್ಕನೇ ಮುಖ್ಯ ಅಂಶ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us