
ನವದೆಹಲಿ, ಆಗಸ್ಟ್ 25: ಅಮೆರಿಕ ಅಧಿಕ ಟ್ಯಾರಿಫ್ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಆ ದೇಶಕ್ಕೆ ಪೋಸ್ಟಲ್ ಸೇವೆಗಳನ್ನು ಭಾರತವೂ ಒಳಗೊಂಡಂತೆ ಅನೇಕ ದೇಶಗಳು ನಿಲ್ಲಿಸುತ್ತಿವೆ. ಇವತ್ತು ಆಗಸ್ಟ್ 25ರಂದು ಭಾರತವು ಅಮೆರಿಕಕ್ಕೆ ಎಲ್ಲಾ ಪೋಸ್ಟಲ್ ಸರ್ವಿಸ್ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಅಮೆರಿಕದ ಹೊಸ ಸುಂಕ ನಿಯಮಗಳು (US tariffs) ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಭಾರತವು ಮೊನ್ನೆ ಈ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿತು. ಯೂರೋಪಿಯನ್ ದೇಶಗಳು ಕೂಡ ಅಮೆರಿಕಕ್ಕೆ ಎಲ್ಲಾ ಪೋಸ್ಟಲ್ ಸೇವೆಗಳನ್ನು ನಿಲ್ಲಿಸಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಣತಿ ಮೇರೆಗೆ ಭಾರತದ ಮೇಲೆ ಆರಂಭಿಕ ಹಂತದಲ್ಲಿ ಶೇ. 25 ಟ್ಯಾರಿಫ್ ಅನ್ನು ಅಮೆರಿಕ ಹಾಕಿತು. ನಂತರ, ರಷ್ಯನ್ ತೈಲ ಖರೀದಿಸುತ್ತಿದೆ ಎನ್ನುವ ಕಾರಣಕ್ಕೆ ಆಗಸ್ಟ್ 29ರಿಂದ ಹೆಚ್ಚುವರಿ ಶೇ. 25 ಟ್ಯಾರಿಫ್ ಹಾಕುವುದಾಗಿ ಹೇಳಿದೆ. ಅಲ್ಲಿಗೆ ಒಟ್ಟು ಶೇ. 50 ಟ್ಯಾರಿಫ್ ಅನ್ನು ಭಾರತದ ಸರಕುಗಳಿಗೆ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: ಮೊದಲ ಸಲ ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್ ಪರಿಶೀಲನೆ ಕಡ್ಡಾಯವಲ್ಲ: ಹಣಕಾಸು ಸಚಿವಾಲಯ
‘ಅಮೆರಿಕಕ್ಕೆ ಕಳುಹಿಸಲಾಗುವ ಯಾವುದೇ ಮೌಲ್ಯದ ಎಲ್ಲಾ ಅಂತಾರಾಷ್ಟ್ರೀಯ ಪೋಸ್ಟಲ್ ಐಟಂಗಳಿಗೂ ಆಯಾ ದೇಶದ ನಿರ್ದಿಷ್ಟ ಟ್ಯಾರಿಫ್ ಅನ್ವಯ ಆಗುತ್ತದೆ’ ಎಂದು ಅಂಚೆ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
100 ಡಾಲರ್ವರೆಗಿನ ಮೌಲ್ಯದ ಗಿಫ್ಟ್ ಐಟಂಗಳಿಗೆ ಟ್ಯಾರಿಫ್ನಿಂದ ವಿನಾಯಿತಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಸರಕುಗಳನ್ನು ಸಾಗಿಸುವ ಸಂಸ್ಥೆಗಳು ಆಗಸ್ಟ್ 25ರ ನಂತರ ಸರಕುಗಳನ್ನು ಸಾಗಿಸಲು ಆಗುವುದಿಲ್ಲ ಎಂದು ಭಾರತದ ಅಧಿಕಾರಿಗಳಿಗೆ ತಿಳಿಸಿವೆ. ಈ ಕಾರಣಕ್ಕೆ ಅಂಚೆ ಇಲಾಖೆಯು ಅಮೆರಿಕಕ್ಕೆ ಯಾವುದೇ ಪೋಸ್ಟ್ಗಳ ಬುಕಿಂಗ್ ಅನ್ನು ನಿಲ್ಲಿಸಲು ನಿರ್ಧರಿಸಿದೆ.
ಯೂರೋಪಿಯನ್ ದೇಶಗಳೂ ಕೂಡ ಇದೇ ಟ್ಯಾರಿಫ್ ಕಾರಣಕ್ಕೆ ಅಮೆರಿಕಕ್ಕೆ ಪೋಸ್ಟಲ್ ಸೇವೆಗಳನ್ನು ಸದ್ಯಕ್ಕೆ ನಿಲ್ಲಿಸಿವೆ. ಜರ್ಮನಿ, ಡೆನ್ಮಾರ್ಕ್, ಸ್ವೀಡನ್ ಮತ್ತು ಇಟಲಿ ದೇಶಗಳಿಂದ ನಿನ್ನೆಯಿಂದಲೇ ಅಮೆರಿಕಕ್ಕೆ ಪೋಸ್ಟಲ್ ಸರ್ವಿಸ್ ನಿಂತಿದೆ. ಫ್ರಾನ್ಸ್, ಆಸ್ಟ್ರಿಯಾ ದೇಶಗಳು ಇಂದಿನಿಂದ ನಿಲ್ಲಿಸಿವೆ. ಬ್ರಿಟನ್ನ ರಾಯಲ್ ಮೇಲ್ ನಾಳೆ ಮಂಗಳವಾರದಿಂದ ಸ್ಥಗಿತಗೊಳಿಸಲಿವೆ.
ಇದನ್ನೂ ಓದಿ: ಬೆಂಗಳೂರಿನ ಫ್ಲೈಯಿಂಗ್ ವೆಡ್ಜ್ನಿಂದ ಕಾಲಭೈರವ ಸಿದ್ಧ: ಇದು ಭಾರತದ ಮೊದಲ ದೇಶೀಯ ನಿರ್ಮಾಣದ MALE ಯುದ್ಧವಿಮಾನ
ಅಂಚೆಗಳಿಗೆ ಸುಂಕ ವಿಧಿಸುವುದಾದರೆ ಯಾರು ಅದನ್ನು ಪಾವತಿಸಬೇಕು ಎಂಬುದು ಸ್ಪಷ್ಟವಾಗಿಲ್ಲ. ಅಮೆರಿಕಕ್ಕೆ ಪೋಸ್ಟಲ್ ಸರ್ವಿಸ್ ನಿಲ್ಲಿಸಲು ಇದೂ ಒಂದು ಕಾರಣ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ