
ನವದೆಹಲಿ, ಸೆಪ್ಟೆಂಬರ್ 8: ಭಾರತ ಸರ್ಕಾರ ಮತ್ತು ಇಸ್ರೇಲ್ ಸರ್ಕಾರದ ಮಧ್ಯೆ ಇಂದು ಸೋಮವಾರ ದ್ವಿಪಕ್ಷೀಯ ಹೂಡಿಕೆ ಒಪ್ಪಂದ (Bilateral Investment Treaty) ಏರ್ಪಟ್ಟಿದೆ. ಇದರೊಂದಿಗೆ ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ. ಭಾರತ ಮತ್ತು ಇಸ್ರೇಲ್ನ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಬೆಜಾಲೆಲ್ ಸ್ಮಾಟ್ರಿಚ್ (Bezalel Smotrich) ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ದ್ವಿಪಕ್ಷೀಯ ಹೂಡಿಕೆ ಒಪ್ಪಂದವು ಎರಡು ದೇಶಗಳ ಮಧ್ಯೆ ಪರಸ್ಪರರ ಹೂಡಿಕೆ ರಕ್ಷಣೆಗೆ ಬದ್ಧತೆ ತೋರುವ ಒಂದು ಸಹಕಾರ ವ್ಯವಸ್ಥೆಯಾಗಿದೆ. ಅಂದರೆ, ಭಾರತದಲ್ಲಿ ಇಸ್ರೇಲಿನ ಖಾಸಗಿ ಹೂಡಿಕೆದಾರರು ಮಾಡುವ ಹೂಡಿಕೆಗಳನ್ನು ಭಾರತ ರಕ್ಷಿಸಲು ಬದ್ಧವಾಗಿರುತ್ತದೆ. ಹಾಗೆಯೇ, ಇಸ್ರೇಲ್ನಲ್ಲಿ ಭಾರತೀಯರು ಮಾಡುವ ಹೂಡಿಕೆಗಳನ್ನು ಆ ದೇಶವು ರಕ್ಷಣೆ ಮಾಡುತ್ತದೆ. ಇದು ಭಾರತ ಹಾಗೂ ಇಸ್ರೇಲ್ ನಡುವಿನ ದ್ವಿಪಕ್ಷೀಯ ಒಪ್ಪಂದದಲ್ಲಿ ಮಾಡಲಾಗಿರುವ ವ್ಯವಸ್ಥೆ.
ಎರಡೂ ದೇಶಗಳ ನಡುವೆ ಹೂಡಿಕೆಗಳಿಗೆ ಉತ್ತೇಜಿಸಲು ಮತ್ತು ರಕ್ಷಣೆ ನೀಡಲು ಅಗತ್ಯವಾದ ನಿಯಮ ಚೌಕಟ್ಟುಗಳನ್ನು ಈ ಒಪ್ಪಂದದಲ್ಲಿ ಮಾಡಲಾಗಿದೆ.
ಭಾರತದ ಹೊಸ ಮಾದರಿಯ ಒಪ್ಪಂದ ನಿಯಮಾವಳಿ ಅಡಿಯಲ್ಲಿ ಇಸ್ರೇಲ್ ಸಹಿ ಹಾಕಿದೆ. ಕುತೂಹಲ ಎಂದರೆ ಒಇಸಿಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ) ಸದಸ್ಯ ರಾಷ್ಟ್ರವೊಂದು ಭಾರತದೊಂದಿಗೆ ಈ ಚೌಕಟ್ಟಿನಲ್ಲಿ ಸಹಿ ಹಾಕಿದ್ದು ಇದೇ ಮೊದಲು.
ಇಸ್ರೇಲ್ ಹಣಕಾಸು ಸಚಿವ ಬೆಜಾಲೆಲ್ ಸ್ಮಾಟ್ರಿಚ್ ಅವರು ಇಸ್ರೇಲ್ನ ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಿ ಭಾರತಕ್ಕೆ ಭೇಟಿ ಕೊಟ್ಟಿದ್ದಾರೆ. ಸೆ. 8ರಿಂದ 10ರವರೆಗೂ ಅವರು ಭಾರತದಲ್ಲಿ ಇರಲಿದ್ದಾರೆ. ಇವತ್ತು ನಿರ್ಮಲಾ ಸೀತಾರಾಮನ್ ಜೊತೆ ಸೇರಿ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಅಂಕಿತ ಹಾಕಿದ್ದಾರೆ.
ಇದನ್ನೂ ಓದಿ: ಭಾರತದ 15 ವರ್ಷದ ಭರ್ಜರಿ ಡಿಫೆನ್ಸ್ ಪ್ಲಾನ್; ಯುದ್ಧವೆಂದರೆ ಬಾಹ್ಯಾಕಾಶಕ್ಕೂ ಸೈ, ಎಐಗೂ ಸೈ
ವಾಣಿಜ್ಯ ಸಚಿವ ಪೀಯೂಶ್ ಗೋಯಲ್, ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನೂ ಸ್ಮಾಟ್ರಿಚ್ ಭೇಟಿ ಮಾಡಲಿದ್ದಾರೆ. ಗುಜರಾತ್ನ ಗಾಂಧಿನಗರದಲ್ಲಿರುವ ಗಿಫ್ಟ್ ಸಿಟಿ ಹಾಗೂ ಮುಂಬೈ ನಗರಕ್ಕೂ ಬಾಟ್ರಿಚ್ ಭೇಟಿ ಮಾಡುವ ಯೋಜನೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ