ಭಾರತದ 15 ವರ್ಷದ ಭರ್ಜರಿ ಡಿಫೆನ್ಸ್ ಪ್ಲಾನ್; ಯುದ್ಧವೆಂದರೆ ಬಾಹ್ಯಾಕಾಶಕ್ಕೂ ಸೈ, ಎಐಗೂ ಸೈ
India's mega 15-year defence plan: ಭಾರತದ ಸೇನಾ ಪಡೆಗಳನ್ನು ಅತ್ಯಾಧುನಿಕ ಯುದ್ಧ ತಂತ್ರಗಳಿಗೆ ಅಣಿಗೊಳಿಸಲು ಸರ್ಕಾರ ಮಹಾ ಯೋಜನೆ ಹಾಕಿದೆ. ಈ ನಿಟ್ಟಿನಲ್ಲಿ ಡಿಫೆನ್ಸ್ ಸಿಸ್ಟಂ ಅನ್ನು ಮೇಲ್ದರ್ಜೆಗೇರಿಸಲು 15 ವರ್ಷದ ಪ್ಲಾನ್ ಹಾಕಿದೆ. ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳಿಗೆ ಹೊಸ, ಅತ್ಯಾಧುನಿಕ ಮತ್ತು ಎಐ ಶಕ್ತ ಶಸ್ತ್ರಾಸ್ತ್ರಗಳನ್ನು ಒದಗಿಸಲಾಗುತ್ತದೆ.

ನವದೆಹಲಿ, ಸೆಪ್ಟೆಂಬರ್ 8: ಜಾಗತಿಕವಾಗಿ ಯಾರೂ ಖಾಯಂ ಶತ್ರುಗಳಲ್ಲ, ಮಿತ್ರಗಳಲ್ಲ ಎನ್ನುವುದು ಮತ್ತೊಮ್ಮೆ ಜಾಹೀರಾಗುತ್ತಿರುವಂತೆಯೇ ಭಾರತ ತನ್ನ ರಕ್ಷಣಾ ಕೋಟೆಯನ್ನು ಮತ್ತಷ್ಟು ಬಿಗಿಗೊಳಿಸಲು ಹೊರಟಿದೆ. ಭವಿಷ್ಯದ ಯುದ್ಧಗಳಿಗೆ ಭವಿಷ್ಯದ ತಂತ್ರಜ್ಞಾನ ಬಳಕೆ ಅತ್ಯಗತ್ಯ ಇರುವುದರಿಂದ ಭಾರತ ತನ್ನ ರಕ್ಷಣಾ ಪಡೆಯನ್ನು (Indian Army) ಸಜ್ಜುಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ 15 ವರ್ಷದ ಯೋಜನೆ ಹಮ್ಮಿಕೊಂಡಿದೆ. ಪರಮಾಣುಶಕ್ತ ಸಮರನೌಕೆಗಳು, ಮುಂದಿನ ತಲೆಮಾರಿನ ಬ್ಯಾಟಲ್ ಟ್ಯಾಂಕ್ಗಳು, ಹೈಪರ್ಸಾನಿಕ್ ಮಿಸೈಲ್ಗಳು, ಸ್ಟೀಲ್ತ್ ಬಾಂಬರ್ ಡ್ರೋನ್ಗಳು, ಎಐ ಶಕ್ತ ಶಸ್ತ್ರಗಳು, ಬಾಹ್ಯಾಕಾಶ ಸಮರ ತಂತ್ರಗಳು ಹೀಗೆ ಮೆಗಾಪ್ಲಾನ್ ಅನ್ನು ಹಾಕಲಾಗಿದೆ.
ಭಾರತೀಯ ಭೂ ಸೇನೆಗೆ ಈ ಪ್ಲಾನ್
ಈಗಿರುವ ಹಳೆಯ ಶಸ್ತ್ರಾಸ್ತ್ರಗಳ ಬದಲಿಗೆ ಹೊಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನಯುಕ್ತ ಸಮರಾಸ್ತ್ರಗಳನ್ನು ತುಂಬಿಸುವುದು ಯೋಜನೆಯ ಮುಖ್ಯ ಉದ್ದೇಶ. ಹೊಸ 1,800 ಪ್ರಬಲ ಬ್ಯಾಟಲ್ ಟ್ಯಾಂಕ್ಗಳು, ಗುಡ್ಡಗಾಡುಗಳಲ್ಲಿ ಯುದ್ಧ ಮಾಡಲು ಸಹಾಯವಾಗುವ 400 ಹಗುರ ಬ್ಯಾಟಲ್ ಟ್ಯಾಂಕ್ಗಳು, ಶತ್ರುಗಳ ಟ್ಯಾಂಕ್ಗಳನ್ನು ಧ್ವಂಸ ಮಾಡಬಲ್ಲ 50,000 ಕ್ಷಿಪಣಿಗಳು, ಐಇಡಿಗಳನ್ನು ಪತ್ತೆ ಮಾಡಿ ನಾಶ ಮಾಡಬಲ್ಲ 700 ರೋಬೋ ಸಿಸ್ಟಂಗಳು ಹೀಗೆ ಬಹಳಷ್ಟು ಶಸ್ತ್ರಾಸ್ತ್ರಗಳನ್ನು ಭಾರತ ತನ್ನ ಬತ್ತಳಿಕೆಗೆ ಸೇರಿಸಲಿದೆ.
ಇದನ್ನೂ ಓದಿ: ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಅಗ್ನಿ-5; ಅಮೆರಿಕವನ್ನೂ ತಲುಪಬಲ್ಲುದು ಈ ಮಿಸೈಲ್
ಭಾರತೀಯ ನೌಕಾ ಪಡೆಗೆ ಈ ಪ್ಲಾನ್
ಭಾರತೀಯ ನೌಕಾಪಡೆಗೆ ಹೊಸ ಏರ್ಕ್ರಾಫ್ಟ್ ಕ್ಯಾರಿಯರ್ ಬರಲಿದೆ. ಮುಂದಿನ ತಲೆಮಾರಿನ 10 ಫ್ರಿಗೇಟ್ಗಳು, ಏಳು ಸುಧಾರಿತ ಕಾರ್ವೆಟ್ಗಳು, ನಾಲ್ಕು ಲ್ಯಾಂಡಿಂಗ್ ಡಾಕ್ ಪ್ಲಾಟ್ಫಾರ್ಮ್ಗಳನ್ನು ಪಡೆಯಲಿದೆ ನೌಕಾಪಡೆ.
ಭಾರತೀಯ ವಾಯುಪಡೆಗೆ ಸಖತ್ ಅಸ್ತ್ರಗಳು
ಈಗಿನ ಯುದ್ಧದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ವಾಯುಪಡೆಗೆ ದೊಡ್ಡ ಯೋಜನೆ ಹಮ್ಮಿಕೊಂಡಿದೆ ಸರ್ಕಾರ. 75 ನಕಲಿ ಸೆಟಿಲೈಟ್ (ಸ್ಯೂಡೋ ಸೆಟಿಲೈಟ್), 150 ಸ್ಟೀಲ್ತ್ ಬಾಂಬರ್ ಡ್ರೋನ್, 100ಕ್ಕೂ ಹೆಚ್ಚು ರಿಮೋಟ್ ಚಾಲಿತ ಯುದ್ಧವಿಮಾನಗಳು ಹೀಗೆ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ವಾಯುಪಡೆ ಪಡೆಯಲಿದೆ.
ಮೇಲೆ ತಿಳಿಸಿದ ನಕಲಿ ಸೆಟಿಲೈಟ್ಗಳು ಒಂದು ರೀತಿಯ ಡ್ರೋನ್ಗಳಾಗಿದ್ದು, ಕಮರ್ಷಿಯಲ್ ವಿಮಾನಗಳು ಹಾರಾಡುವ ಸ್ತರ ಹಾಗೂ ಸೆಟಿಲೈಟ್ಗಳು ಸುತ್ತುವ ಸ್ತರದ ನಡುವಿನ ಎತ್ತರದಲ್ಲಿ ಹಾರುತ್ತವೆ. ಚೀನಾ ಗಡಿ, ಪಾಕಿಸ್ತಾನ ಗಡಿ, ಸಾಗರದ ಗಡಿಗಳು ಇವೇ ಮುಂತಾದ ಆಯಕಟ್ಟಿನ ಹಾಗೂ ಸೂಕ್ಷ್ಮ ಸ್ಥಳಗಳನ್ನು ಇವು ಗಮನಿಸಿ ನಿಖರವಾದ ಮಾಹಿತಿಯನ್ನು ರವಾನಿಸಬಲ್ಲುವು.
ಇದನ್ನೂ ಓದಿ: ಪಾಕಿಸ್ತಾನದ ಜೊತೆಗಿನ ಯುದ್ಧ ಮೇ 10ಕ್ಕೆ ಕೊನೆಗೊಂಡಿಲ್ಲ; ಆಪರೇಷನ್ ಸಿಂಧೂರ್ ಬಗ್ಗೆ ಸೇನಾ ಮುಖ್ಯಸ್ಥ ಮಹತ್ವದ ಹೇಳಿಕೆ
2035ಕ್ಕೆ ಸುದರ್ಶನ ಚಕ್ರ
ಮುಂದಿನ ಹತ್ತು ವರ್ಷದಲ್ಲಿ ಭಾರತದ್ದೇ ಸ್ವಂತವಾದ ವಾಯು ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸಂಕಲ್ಪ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ನಿಟ್ಟಿನಲ್ಲಿ ‘ಸುದರ್ಶನ್ ಚಕ್ರ’ ಮಿಷನ್ ಘೋಷಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




