ಭಾರತಕ್ಕೆ 2024ರ ಸಿಹಿ; ಆರ್ಥಿಕತೆಯಿಂದ ಹಿಡಿದು ಬಾಹ್ಯಾಕಾಶದವರೆಗೆ ಭಾರತ ಇಟ್ಟ ದೈತ್ಯ ಹೆಜ್ಜೆಗಳಿವು…

|

Updated on: Dec 31, 2024 | 7:23 PM

India at 2024: 2024ರಲ್ಲಿ ಭಾರತ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ಕಂಡಿದೆ. ಜಾಗತಿಕ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳ ನಡುವೆ ಭಾರತ ಗಟ್ಟಿ ಹೆಜ್ಜೆಗಳನ್ನಿಟ್ಟಿದೆ. 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ ದರ ಶೇ. 8.2ರ ಮಟ್ಟದಲ್ಲಿತ್ತು. ಈ ವರ್ಷ ಶೇ. 6.5ರ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. 2024ರಲ್ಲಿ ಷೇರು ಮಾರುಕಟ್ಟೆ ಮಿಂಚಿನ ಬಂಡವಾಳ ಹರಿವು ಕಂಡಿದೆ. ಬಾಹ್ಯಾಕಾಶ ಯೋಜನೆಗಳು ದಟ್ಟವಾಗತೊಡಗಿವೆ.

ಭಾರತಕ್ಕೆ 2024ರ ಸಿಹಿ; ಆರ್ಥಿಕತೆಯಿಂದ ಹಿಡಿದು ಬಾಹ್ಯಾಕಾಶದವರೆಗೆ ಭಾರತ ಇಟ್ಟ ದೈತ್ಯ ಹೆಜ್ಜೆಗಳಿವು...
ಭಾರತದ ಆರ್ಥಿಕತೆ
Follow us on

2024, ಭಾರತಕ್ಕೆ ಕೆಲ ಮಹತ್ವದ ವಿದ್ಯಮಾನಗಳನ್ನು ಇತ್ತ ವರ್ಷ. ಜಾಗತಿಕ ಆರ್ಥಿಕ ಮತ್ತು ರಾಜಕೀಯ ತಲ್ಲಣಗಳ ಮಧ್ಯೆ ಭಾರತ ಹೆಚ್ಚು ಜಗ್ಗದೇ ಸಾಗಲು ಯಶಸ್ವಿಯಾಗಿದೆ. ಆರ್ಥಿಕತೆಯಲ್ಲಿ ಮಾತ್ರವಲ್ಲ, ಕ್ರೀಡೆ, ತಂತ್ರಜ್ಞಾನದಲ್ಲೂ ಉತ್ತಮ ಮುನ್ನಡೆ ಕಂಡಿದೆ. 2024ರಲ್ಲಿ ರಾಜಕೀಯವಾಗಿ ಮಹತ್ವದ ಬೆಳವಣಿಗೆ ಎಂದರೆ ಅದು ನರೇಂದ್ರ ಮೋದಿ ನೇತೃತ್ವದಲ್ಲಿ ಎನ್​ಡಿಎ ಮೈತ್ರಿಕೂಟ ಸತತ ಮೂರನೇ ಬಾರಿ ಅಧಿಕಾರದ ಗದ್ದುಗೆ ಹಿಡಿದಿದ್ದು. ಗುಜರಾತ್​ನಲ್ಲಿ ಸತತ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಈಗ ಸತತ ಮೂರನೇ ಬಾರಿ ಪ್ರಧಾನಮಂತ್ರಿಯಾಗಿದ್ದಾರೆ. 2001ರಿಂದ ನಿರಂತರವಾಗಿ ಸರ್ಕಾರದ ಮುಖ್ಯಸ್ಥ ಸ್ಥಾನದಲ್ಲಿದ್ದಾರೆ.

ಭಾರತದ ಆರ್ಥಿಕತೆಯಲ್ಲಿ 2024ರಲ್ಲಿ ಮೈಲಿಗಲ್ಲುಗಳು…

ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ರಷ್ಯಾ ಉಕ್ರೇನ್ ಯುದ್ಧದಿಂದ ಇಡೀ ಜಗತ್ತು ಬಾಧಿತವಾಗಿದೆ. ಇದರ ನಡುವೆಯೂ ಭಾರತ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಂಡಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 8.2ರಷ್ಟು ಹೆಚ್ಚಿದೆ.

2024ರ ಏಪ್ರಿಲ್​ನಿಂದ 2024ರ ಸೆಪ್ಟೆಂಬರ್​ವರೆಗೆ ಭಾರತಕ್ಕೆ ಹರಿದುಬಂದ ವಿದೇಶೀ ನೇರ ಹೂಡಿಕೆ (ಎಫ್​ಡಿಐ) ದಾಖಲೆಯ 1 ಟ್ರಿಲಿಯನ್ ಡಾಲರ್ ಮುಟ್ಟಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ ಮೊತ್ತಮೊದಲ ಬಾರಿಗೆ 700 ಬಿಲಿಯನ್ ಡಾಲರ್ ಮೈಲಿಗಲ್ಲು ದಾಟಿತು.

ಇದನ್ನೂ ಓದಿ: ಹತ್ತು ವರ್ಷದಲ್ಲಿ ರಕ್ಷಣಾ ವಲಯದ ರಫ್ತಿನಲ್ಲಿ ಹತ್ತು ಪಟ್ಟು ಹೆಚ್ಚಳ; ರಾಜನಾಥ್ ಸಿಂಗ್ ಪ್ರಶಂಸೆ

ದಾಖಲೆಯ ಐಪಿಒಗಳು….

ಭಾರತದ ಪ್ರಾಥಮಿಕ ಬಂಡವಾಳ ಮಾರುಕಟ್ಟೆ ಎನಿಸಿದ ಐಪಿಒ ಈ ಬಾರಿ ಮಿಂಚಿದೆ. 2024ರಲ್ಲಿ ಭಾರತೀಯ ಕಂಪನಿಗಳು ಐಪಿಒಗಳ ಮೂಲಕ ಸಂಗ್ರಹಿಸಿದ ಬಂಡವಾಳ ಬರೋಬ್ಬರಿ 1.6 ಲಕ್ಷ ಕೋಟಿ ರೂ. ಹ್ಯುಂಡೈ ಮೋಟಾರ್ ಸಂಸ್ಥೆ 27,870 ಕೋಟಿ ರೂ ಬಂಡವಾಳ ಪಡೆಯಿತು. ಸ್ವಿಗ್ಗಿ 11,000 ಕೋಟಿ ರೂ ಫಂಡಿಂಗ್ ಪಡೆಯಿತು. ಸಣ್ಣ ಪುಟ್ಟ ಸಂಸ್ಥೆಗಳ ಐಪಿಒಗಳಿಗೂ ಹೂಡಿಕೆದಾರರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿತು.

2024ರಲ್ಲಿ ಭಾರತದ ಬಾಹ್ಯಾಕಾಶ ಸಾಧನೆಗಳು…

ಬಾಹ್ಯಾಕಾಶ ಕ್ಷೇತ್ರದಲ್ಲೂ ಭಾರತದ ಸಾಧನೆ 2024ರಲ್ಲಿ ಮುಂದುವರಿದಿದೆ. ಕಳೆದ ವರ್ಷ ಮೂರನೇ ಚಂದ್ರಯಾನ ಯಶಸ್ವಿಯಾಯಿತು. ಈಗ ಮಹತ್ವದ ಗಗನಯಾನ ಯೋಜನೆಗೆ ಭಾರತ ಸಜ್ಜಾಗಿದೆ. ಇದರಲ್ಲಿ ಬಾಹ್ಯಾಕಾಶಕ್ಕೆ ಮೂವರು ಗಗನಯಾತ್ರಿಗಳನ್ನು ಕಳುಹಿಸಲಾಗುತ್ತದೆ. ಭಾರತಕ್ಕೆ ಇದು ಹೊಸತು.

ಇದನ್ನೂ ಓದಿ: ಶೇ. 2.6ಕ್ಕೆ ಇಳಿದ ಬ್ಯಾಂಕುಗಳ ಎನ್​ಪಿಎ; ಇದು 12 ವರ್ಷದಲ್ಲೇ ಕನಿಷ್ಠ ಕೆಟ್ಟ ಆಸ್ತಿ ಪ್ರಮಾಣ

ಚಂದ್ರ ಮತ್ತು ಸೂರ್ಯನ ಬಳಿ ಗಗನನೌಕೆಯನ್ನು ಕಳುಹಿಸಿದ್ದ ಭಾರತ ಈಗ ಶುಕ್ರ ಗ್ರಹದ ಮೇಲೆ ಕಣ್ಣಿಟ್ಟಿದೆ. ಮಂಗಳ ಗ್ರಹಕ್ಕೆ ಎರಡನೇ ಬಾರಿ ನೌಕೆ ಕಳುಹಿಸಲು ಹೊರಟಿದೆ. ಗಗನಯಾನಗಳು ಯಶಸ್ವಿಯಾದರೆ 2040ರೊಳಗೆ ಚಂದ್ರ ಗ್ರಹದ ನೆಲದ ಮೇಲೆ ಮನುಷ್ಯನನ್ನು ಇಳಿಸುವ ಮತ್ತೊಂದು ಮಹತ್ವದ ಗುರಿ ಭಾರತಕ್ಕೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ