ಶೇ. 2.6ಕ್ಕೆ ಇಳಿದ ಬ್ಯಾಂಕುಗಳ ಎನ್ಪಿಎ; ಇದು 12 ವರ್ಷದಲ್ಲೇ ಕನಿಷ್ಠ ಕೆಟ್ಟ ಆಸ್ತಿ ಪ್ರಮಾಣ
NPA ratio comes down: ಬ್ಯಾಂಕುಗಳ ಜಿಎನ್ಪಿಎ ಶೇ. 2.6ಕ್ಕೆ ಇಳಿದಿದೆ. ನಿವ್ವಳ ಎನ್ಪಿಎ ಶೇ. 0.6ಕ್ಕೆ ಇಳಿದಿದೆ. 37 ಕಮರ್ಷಿಯಲ್ ಬ್ಯಾಂಕುಗಳ ಒಟ್ಟಾರೆ ಎನ್ಪಿಎ ಕಳೆದ 12 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಬಂದಿದೆ. ಹೊಸ ಸಾಲಗಳ ಸಂಖ್ಯೆ ಏರುತ್ತಿರುವುದು, ಸಾಲಗಳು ಎನ್ಪಿಎಗೆ ತಿರುಗುವುದು ಕಡಿಮೆ ಆಗುತ್ತಿರುವುದು ಮತ್ತು ಎನ್ಪಿಎಯನ್ನು ರೈಟ್ ಆಫ್ ಮಾಡುತ್ತಿರುವುದು ಹೆಚ್ಚುತ್ತಿರುವುದು ಇದಕ್ಕೆ ಕಾರಣವಾಗಿದೆ.
ನವದೆಹಲಿ, ಡಿಸೆಂಬರ್ 30: ಬ್ಯಾಂಕುಗಳಲ್ಲಿನ ಅನುತ್ಪಾದಕ ಆಸ್ತಿ ಅಥವಾ ಕೆಟ್ಟ ಸಾಲಗಳ ಪ್ರಮಾಣ ಕಡಿಮೆ ಆಗುತ್ತಿದೆ. ಆರ್ಬಿಐ ಇಂದು ಸೋಮವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಬ್ಯಾಂಕುಗಳ ಒಟ್ಟಾರೆ ಅನುತ್ಪಾದಕ ಆಸ್ತಿ (ಜಿಎನ್ಪಿಎ) ಸೆಪ್ಟೆಂಬರ್ 2024ರಲ್ಲಿ ಶೇ. 2.6ರಷ್ಟಿದೆ. ಇದು ಕಳೆದ 12 ವರ್ಷದಲ್ಲೇ ಕನಿಷ್ಠ ಎನ್ಪಿಎ ಅನುಪಾತ ಎನಿಸಿದೆ. ಸಾಲಗಳು ಎನ್ಪಿಎಗೆ ತಿರುತ್ತಿರುವ ಪ್ರಮಾಣ ಕಡಿಮೆ ಆಗುತ್ತಿರುವುದು, ಹಾಗೂ ಸಾಲಗಳಿಗೆ ಬೇಡಿಕೆ ಕ್ರಮೇಣ ಹೆಚ್ಚುತ್ತಿರುವುದು ಜಿಎನ್ಪಿಎ ಇಳಿಕೆಗೆ ಎಡೆ ಮಾಡಿಕೊಟ್ಟಿದೆ.
ಆದರೆ, ಬ್ಯಾಂಕುಗಳು ಕೆಟ್ಟ ಸಾಲಗಳನ್ನು ರೈಟ್ ಆಫ್ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆರ್ಬಿಐ ವ್ಯಾಕುಲಗೊಂಡಿದೆ. ಅದರಲ್ಲೂ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಈ ಲೋನ್ ರೈಟ್ ಆಫ್ ಟ್ರೆಂಡ್ ಹೆಚ್ಚು ಇದೆಯಂತೆ. ಈ ರೈಟ್ ಆಫ್ನಿಂದಾಗಿ ಕೆಟ್ಟ ಸಾಲಗಳ ತೀವ್ರತೆ ಅಷ್ಟು ದಟ್ಟವಾಗಿ ಕಾಣುತ್ತಿಲ್ಲ ಎಂಬುದು ಎಂಬುದು ಆರ್ಬಿಐನ ಚಿಂತೆ. ಬ್ಯಾಂಕುಗಳ ಕೆಟ್ಟ ಆಸ್ತಿ ಪ್ರಮಾಣ 2026ರಲ್ಲಿ ಮತ್ತೆ ಮೇಲೇರುವ ಸಾಧ್ಯತೆ ಇದೆ ಎಂಬುದು ರಿಸರ್ವ್ ಬ್ಯಾಂಕ್ನ ಅಂದಾಜು.
ಇದನ್ನೂ ಓದಿ: ಬ್ಯಾಂಕ್ ಬ್ಯಾಲನ್ಸ್ ಎಷ್ಟಿದೆ ನೋಡಿ… 3 ರೀತಿಯ ಬ್ಯಾಂಕ್ ಖಾತೆಗಳನ್ನು ಮುಚ್ಚುತ್ತಿದೆ ಆರ್ಬಿಐ
37 ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳ ಒಟ್ಟು ಎನ್ಪಿಎ ಅನುಪಾತ ಶೇ. 2.6ರಷ್ಟಿದೆ. ನಿವ್ವಳ ಎನ್ಪಿಎ ಪ್ರಮಾಣ ಶೇ. 0.6ರ ಆಸುಪಾಸಿನಷ್ಟಿದೆ. ಈ ಕಡಿಮೆ ಎನ್ಪಿಎಗೆ ರೈಟ್ ಆಫ್ ಕೂಡ ಒಂದು ಕಾರಣ ಎನಿಸಿದೆ. ಇಲ್ಲಿ ರೈಟ್ ಆಫ್ ಎಂದರೆ ಬ್ಯಾಂಕುಗಳು ಸಾಲ ಮರುವಸೂಲಾತಿ ಸಾಧ್ಯವಿಲ್ಲವೆಂದು ಕೈಬಿಟ್ಟ ಸಾಲಗಳು.
ಎನ್ಪಿಎ ಮತ್ತು ರೈಟ್ ಆಫ್ಗೂ ಏನು ವ್ಯತ್ಯಾಸ?
ಬ್ಯಾಂಕುಗಳಿಗೆ ಆಸ್ತಿ ಎಂದರೆ ಅವು ಗ್ರಾಹಕರಿಗೆ ನೀಡುವ ಸಾಲ ಹಾಗೂ ಅದರಿಂದ ಸಿಗುವ ಬಡ್ಡಿ ಹಣ. ಈ ರೀತಿಯ ಸಾಲಕ್ಕೆ 90 ದಿನಗಳಾದರೂ ಬಡ್ಡಿ ಸಂದಾಯವಾಗದೇ ಹೋದರೆ, ಅಂಥ ಸಾಲವನ್ನು ಎನ್ಪಿಎ ಎಂದು ಪರಿಗಣಿಸಲಾಗುತ್ತದೆ. ಅನುತ್ಪಾದಕ ಸಾಲವಾಗುತ್ತದೆ.
ಒಮ್ಮೆ ಒಂದು ಸಾಲವನ್ನು ಬ್ಯಾಂಕು ಎನ್ಪಿಎ ಎಂದು ವರ್ಗೀಕರಿಸಿದರೆ, ಆಗ ಸಾಲ ವಸೂಲಾತಿಗೆ ಲಭ್ಯ ಇರುವ ವಿವಿಧ ಮಾರ್ಗಗಳನ್ನು ಅವಲೋಕಿಸಲಾಗುತ್ತದೆ. ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತದೆ. ಅಡಮಾನ ಇಟ್ಟುಕೊಂಡಿದ್ದರೆ ಅದನ್ನು ಹರಾಜು ಮಾಡಲಾಗುತ್ತದೆ.
ಇದನ್ನೂ ಓದಿ: ಭಾರತೀಯ ಹೆಂಗಸರ ಬಳಿ ಇರುವ ಚಿನ್ನ ಅಮೆರಿಕ ಸೇರಿ ಐದು ದೇಶಗಳ ಗೋಲ್ಡ್ ರಿಸರ್ವ್ಗಿಂತಲೂ ಹೆಚ್ಚು..!
ಇಲ್ಲಿ ರೈಟ್ ಆಫ್ ಎಂದರೆ ಅನುತ್ಪಾದಕ ಸಾಲವನ್ನು ಮರುವಸೂಲಾತಿ ಮಾಡುವ ಯಾವುದೆ ಮಾರ್ಗ ಸಿಗದಿದ್ದಾಗ ಬ್ಯಾಂಕು ಕೈಚೆಲ್ಲುವ ಸಂದರ್ಭವಾಗಿರುತ್ತದೆ. ಇಂಥ ಸಾಲವನ್ನು ಬ್ಯಾಂಕ್ ತನ್ನ ಬ್ಯಾಲನ್ಸ್ ಶೀಟ್ನಿಂದ ತೆಗೆದುಹಾಕುತ್ತದೆ. ಆದರೆ, ಅದು ಸಾಲ ಮನ್ನಾ ಎನಿಸುವುದಿಲ್ಲ. ಬೇರೆ ಏಜೆನ್ಸಿಗೆ ಅದನ್ನು ಕಡಿಮೆ ಬೆಲೆಗೆ ಬ್ಯಾಂಕು ಮಾರಾಟ ಮಾಡಬಹುದು. ಅಥವಾ ಸಾಲ ವಸೂಲಾತಿ ಮಾಡುವ ಅವಕಾಶ ಮುಂದೆ ಸಿಕ್ಕರೆ ಅದನ್ನು ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ