
ನವದೆಹಲಿ, ಜನವರಿ 28: ಭಾರತ ಮತ್ತು ಯೂರೋಪಿಯನ್ ಯೂನಿಯನ್ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಅಮೆರಿಕದವರು ಪ್ರತಿಕ್ರಿಯಿಸಿದ್ದಾರೆ. ಭಾರತಕ್ಕೆ ಒಳ್ಳೆಯ ಒಪ್ಪಂದ ದಕ್ಕಿತು ಎಂದು ಅಮೆರಿಕದ ಟ್ರೇಡ್ ರೆಪ್ರೆಸೆಂಟೇಟಿವ್ ಆದ ಜೇಮೀಸನ್ ಗ್ರೀರ್ (Jamieson Greer) ಅಭಿಪ್ರಾಯಪಟ್ಟಿದ್ದಾರೆ. ‘ಈ ಒಪ್ಪಂದದಲ್ಲಿ ಭಾರತ ಹೆಚ್ಚು ಅನುಕೂಲ ಪಡೆದಿದೆ. ಹೆಚ್ಚು ಮಾರುಕಟ್ಟೆ ಪ್ರವೇಶ ಮತ್ತು ವಲಸೆಗೆ ಅವಕಾಶ ಪಡೆದಿದೆ’ ಎಂದು ಖಾಸಗಿ ವಾಹಿನಿಯೊಂದಕ್ಕೆ ಗ್ರೀರ್ ಪ್ರತಿಕ್ರಿಯಿಸಿದ್ದಾರೆ.
ಭಾರತ ಹಾಗೂ ಐರೋಪ್ಯ ಒಕ್ಕೂಟದ ಒಪ್ಪಂದವು ಅಮೆರಿಕದ ಟ್ಯಾರಿಫ್ ಕ್ರಮದ ಪರಿಣಾಮ ಎಂದು ಜೇಮಿಸನ್ ಗ್ರೀರ್ ಬಣ್ಣಿಸಿದ್ದಾರೆ. ಅಮೆರಿಕವು ದೇಶೀಯ ಉತ್ಪಾದನೆಗೆ ಒತ್ತುಕೊಡುತ್ತಿದೆ. ಬೇರೆ ದೇಶಗಳು ತಮ್ಮ ಹೆಚ್ಚುವರಿ ಉತ್ಪಾದನೆ ಸಾಗಿಸಲು ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುತ್ತಿವೆ ಎಂದೂ ಅಮೆರಿಕದ ವ್ಯಾಪಾರ ಪ್ರತಿನಿಧಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತ-ಯೂರೋಪಿಯನ್ ಒಕ್ಕೂಟ ವ್ಯಾಪಾರ ಒಪ್ಪಂದದಿಂದ ಹೊರಗುಳಿದಿವೆ ಈ ಮೂರು ಸೆಕ್ಟರ್ಗಳು; ಇಲ್ಲಿದೆ ಡೀಲ್ನ ಹೈಲೈಟ್ಸ್
ರಷ್ಯನ್ ತೈಲ ಖರೀದಿ ಮಾಡಲಾಗುತ್ತಿರುವ ಕಾರಣಕ್ಕೆ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ. 25 ಟ್ಯಾರಿಫ್ ಅನ್ನು ಅಮೆರಿಕ ಹಾಕುತ್ತಿದೆ. ಒಟ್ಟು ಶೇ. 50 ಟ್ಯಾರಿಫ್ ಇದೆ. ಈಗ ಭಾರತೀಯ ತೈಲ ಕಂಪನಿಗಳು ರಷ್ಯನ್ ತೈಲ ಖರೀದಿ ಕಡಿಮೆ ಮಾಡಿವೆ. ಅಮೆರಿಕದ ವಾಣಿಜ್ಯ ಕಾರ್ಯದರ್ಶಿಯಾದ ಸ್ಕಾಟ್ ಬೆಸೆಂಟ್ ಅವರು ಭಾರತದ ಮೇಲೆ ಟ್ಯಾರಿಫ್ ಅನ್ನು ಇಳಿಸಬಹುದು ಎಂದು ಸುಳಿವು ನೀಡಿದ್ದರು. ಆದರೆ, ಜೇಮಿಸನ್ ಗ್ರೀರ್ ಅವರು ಬೇರೆಯೇ ಹೇಳಿಕೆ ನೀಡಿದ್ದಾರೆ.
ಭಾರತವು ರಷ್ಯದಿಂದ ತೈಲ ಆಮದನ್ನು ಕಡಿಮೆ ಮಾಡಿರುವುದು ಹೌದು. ಆದರೂ ಟ್ಯಾರಿಫ್ ಕ್ರಮ ಮುಂದುವರಿಯುತ್ತದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿಯಾದ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ ಮತ್ತು ಯೂರೋಪಿಯನ್ ಯೂನಿಯನ್ ವ್ಯಾಪಾರ ಒಪ್ಪಂದಕ್ಕೆ ಸಹಿ; ಹೊಸ ಇತಿಹಾಸ
‘ರಷ್ಯನ್ ತೈಲ ವಿಚಾರದಲ್ಲಿ ಭಾರತದ ಕ್ರಮಗಳ ಮೇಲೆ ಅಮೆರಿಕ ನಿಕಟವಾಗಿ ಕಣ್ಣಿಟ್ಟಿದೆ. ಭಾರತದ ವಾಣಿಜ್ಯ ಸಚಿವರ ಜೊತೆ ಸಂಪರ್ದಲ್ಲಿದ್ದೇವೆ’ ಎಂದೂ ಜೇಮಿಸನ್ ಗ್ರೀರ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ