ಭಾರತ-ಯೂರೋಪಿಯನ್ ಒಕ್ಕೂಟ ವ್ಯಾಪಾರ ಒಪ್ಪಂದದಿಂದ ಹೊರಗುಳಿದಿವೆ ಈ ಮೂರು ಸೆಕ್ಟರ್ಗಳು; ಇಲ್ಲಿದೆ ಡೀಲ್ನ ಹೈಲೈಟ್ಸ್
India-European Union trade deal: ಭಾರತ ಮತ್ತು ಯೂರೋಪಿಯನ್ ಯೂನಿಯನ್ ಮಧ್ಯೆ ಐತಿಹಾಸಿಕ ಫ್ರೀ ಟ್ರೇಡ್ ಅಗ್ರೀಮೆಂಟ್ ಆಗಿದೆ. ಆಟೊಮೊಬೈಲ್, ಸ್ಟೀಲ್ ಮತ್ತು ಕೃಷಿ ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲವಕ್ಕೂ ಕಾಲ ಕ್ರಮೇಣವಾಗಿ ಟ್ಯಾರಿಫ್ ಮುಕ್ತ ಪ್ರವೇಶ ಸಿಗಲಿದೆ. ಆಟೊಮೊಬೈಲ್ ಮತ್ತು ಸ್ಟೀಲ್ ಉದ್ಯಮದಲ್ಲಿ ಸಾಕಷ್ಟು ಉದ್ಯೋಗಸೃಷ್ಟಿ ಇರುವುದರಿಂದ ಅವನ್ನು ರಕ್ಷಿಸಲು ಟ್ಯಾರಿಫ್ ಕ್ರಮ ಮುಂದುವರಿಯುತ್ತದೆ. ಕೃಷಿ ಕ್ಷೇತ್ರದಲ್ಲೂ ಟ್ಯಾರಿಫ್ ಇರುತ್ತದೆ.

ನವದೆಹಲಿ, ಜನವರಿ 27: ಭಾರತ ಮತ್ತು ಯೂರೋಪಿಯನ್ ಒಕ್ಕೂಟದ ನಡುವೆ ಮುಕ್ತ ವ್ಯಾಪಾರ ಒಪ್ಪಂದ (India-EU trade pact) ಏರ್ಪಟ್ಟಿದೆ. ವಿಶ್ವದ ಶೇ. 25 ಜಿಡಿಪಿ ಇರುವ ಮತ್ತು 200 ಕೋಟಿ ಜನರಿರುವ ಬೃಹತ್ ಮಾರುಕಟ್ಟೆ ಸೃಷ್ಟಿಸಿರುವ ಈ ಡೀಲ್ ಅನ್ನು ಮದರ್ ಆಫ್ ಆಲ್ ಡೀಲ್ಸ್ ಎಂದು ಬಣ್ಣಿಸಲಾಗುತ್ತಿದೆ. ಭಾರತ ಹಾಗೂ ಯೂರೋಪಿಯನ್ ಒಕ್ಕೂಟ ಎರಡಕ್ಕೂ ಇದು ವಿನ್ ವಿನ್ ಸ್ಥಿತಿ ಎಂದೂ ಪರಿಗಣಿಸಲಾಗುತ್ತಿದೆ.
ವಾಹನ, ಉಕ್ಕು ಮತ್ತು ಕೃಷಿ, ಈ ಮೂರು ಸೆಕ್ಟರ್ಗಳನ್ನು ಟ್ಯಾರಿಫ್ ಮುಕ್ತಗೊಳಿಸಲಾಗಿರುವ ಸರಕುಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಈ ಕ್ಷೇತ್ರಗಳನ್ನು ಎರಡೂ ಕಡೆಯಲ್ಲೂ ಸೂಕ್ಷ್ಮ ಸೆಕ್ಟರ್ಗಳೆಂದು ಪರಿಗಣಿಸಲಾಗಿದೆ. ಆಟೊಮೊಬೈಲ್ ಮತ್ತು ಉಕ್ಕು ಉದ್ಯಮಗಳ ಸುತ್ತ ದೊಡ್ಡ ಸಂಖ್ಯೆಯ ದೇಶೀಯ ಉದ್ದಿಮೆಗಳು ಅವಲಂಬಿತವಾಗಿವೆ. ಕೃಷಿ ಕ್ಷೇತ್ರವು ರೈತರ ಆಧಾರವಾಗಿದೆ. ಹೀಗಾಗಿ, ಈ ಮೂರು ಸೆಕ್ಟರ್ಗಳಲ್ಲಿನ ಉತ್ಪನ್ನಗಳ ಮೇಲೆ ಟ್ಯಾರಿಫ್ಗಳು ಮುಂದುವರಿಯುತ್ತವೆ. ಆದರೆ, ಟ್ಯಾರಿಫ್ ದರ ಸ್ವಲ್ಪ ತಗ್ಗಬಹುದು.
ಈ ಡೀಲ್ ಪ್ರಕಾರ ಭಾರತ ಮತ್ತು ಐರೋಪ್ಯ ಒಕ್ಕೂಟವು ಪರಸ್ಪರ ಆಮದು ಸುಂಕಗಳನ್ನು ತೆಗೆದುಹಾಕಲಿವೆ, ಅಥವಾ ಗಣನೀಯವಾಗಿ ಇಳಿಕೆ ಮಾಡಲಿವೆ. ಮುಂದಿನ ಏಳು ವರ್ಷಗಳಲ್ಲಿ ಹಂತ ಹಂತವಾಗಿ ಟ್ಯಾರಿಫ್ ಇಳಿಕೆ ಆಗಲಿದೆ. ಒಟ್ಟಾರೆ ಶೇ. 96ರಷ್ಟು ಸರಕುಗಳಿಗೆ ಟ್ಯಾರಿಫ್ ಇಳಿಕೆ ಆಗುತ್ತದೆ.
ಇದನ್ನೂ ಓದಿ: ಭಾರತ ಮತ್ತು ಯೂರೋಪಿಯನ್ ಯೂನಿಯನ್ ವ್ಯಾಪಾರ ಒಪ್ಪಂದಕ್ಕೆ ಸಹಿ; ಹೊಸ ಇತಿಹಾಸ
ಭಾರತದ ಶೇ. 90ರಷ್ಟು ಸರಕುಗಳಿಗೆ ತತ್ಕ್ಷಣದಿಂದಲೇ ಟ್ಯಾರಿಫ್ ಮುಕ್ತ ಪ್ರವೇಶ ಸಿಗುತ್ತದೆ. ಮುಂದಿನ ಏಳು ವರ್ಷದಲ್ಲಿ ಶೇ. 99.5ರಷ್ಟು ಐರೋಪ್ಯ ಮಾರುಕಟ್ಟೆ ಭಾರತಕ್ಕೆ ತೆರೆದುಕೊಳ್ಳುತ್ತದೆ. ಭಾರತವು ತತ್ಕ್ಷಣಕ್ಕೆ ಶೇ. 30ರಷ್ಟು ಮಾರುಕಟ್ಟೆ ಪ್ರವೇಶ ಕಲ್ಪಿಸಲಿದೆ. ಮುಂದಿನ 10 ವರ್ಷದಲ್ಲಿ ಹಂತ ಹಂತವಾಗಿ ಯೂರೋಪ್ನ ಶೇ. 96ರಷ್ಟು ಸರಕುಗಳಿಗೆ ಟ್ಯಾರಿಫ್ ವಿನಾಯಿತಿ ಕಲ್ಪಿಸಲಿದೆ.
ವಾಹನಗಳ ಮೇಲಿನ ಟ್ಯಾರಿಫ್ ಹೀಗಿರುತ್ತದೆ
ಆಟೊಮೊಬೈಲ್ ಕ್ಷೇತ್ರದಲ್ಲಿ ಕಾರುಗಳ ಮೇಲೆ ಟ್ಯಾರಿಫ್ ಅನ್ನು ಶೇ. 110ರಿಂದ ಶೇ 10ಕ್ಕೆ ಇಳಿಸಲು ಒಪ್ಪಲಾಗಿದೆ. ಆದರೆ, ಷರತ್ತು ಇರುತ್ತದೆ. ವರ್ಷಕ್ಕೆ 2.5 ಲಕ್ಷ ವಾಹನಗಳಿಗೆ ಮಾತ್ರ ಈ ಟ್ಯಾರಿಫ್ ರಿಯಾಯಿತಿ ಇರುತ್ತದೆ.
ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಾರು ಮಾರುಕಟ್ಟೆಯಾಗಿದೆ. ಇಲ್ಲಿ ವರ್ಷಕ್ಕೆ 44 ಲಕ್ಷ ಕಾರುಗಳು ಮಾರಾಟವಾಗುತ್ತವೆ. ಮಾರುತಿ ಸುಜುಕಿ, ಮಹೀಂದ್ರ, ಟಾಟಾ, ಟೊಯೊಟೋ ಕಂಪನಿಗಳ ಪಾರಮ್ಯ ಇಲ್ಲಿದೆ. ಯೂರೋಪಿಯನ್ ಕಂಪನಿಗಳ ಕಾರುಗಳ ಮಾರುಕಟ್ಟೆ ಪಾಲು ಶೇ. 4 ಮಾತ್ರ. ಈಗ ಟ್ಯಾರಿಫ್ ಇಳಿಕೆಯಿಂದ ಬಿಎಂಡಬ್ಲ್ಯು, ವೋಲ್ಸ್ವಾಗನ್, ಮರ್ಸಿಡೆಸ್ ಬೆಂಜ್ ಮೊದಲಾದ ಕಂಪನಿಗಳಿಗೆ ಪುಷ್ಟಿ ಸಿಗಬಹುದು.
ಇದನ್ನೂ ಓದಿ: ಭಾರತದೊಂದಿಗೆ ಒಪ್ಪಂದ, ‘ಯೂರೋಪ್ ಕಾಲ ಮೇಲೆ ಚಪ್ಪಡಿ’: ಅಮೆರಿಕ ಸಿಡಿಮಿಡಿ
ಭಾರತದಲ್ಲಿ ಸದ್ಯ 40,000 ಡಾಲರ್ಗಿಂತ ಕಡಿಮೆ ಮೌಲ್ಯದ ಕಾರುಗಳ ಆಮದಿನ ಮೇಲೆ ಶೇ. 70 ಟ್ಯಾರಿಫ್ ಹಾಕಲಾಗುತ್ತಿದೆ. 40,000 ಡಾಲರ್ಗಿಂತ ಹೆಚ್ಚಿನ ಮೌಲ್ಯದ ಕಾರುಗಳಿಗೆ ಶೇ. 110ರಷ್ಟು ಸುಂಕ ಇದೆ. ಈಗ 25 ಲಕ್ಷ ರೂಗಿಂತ ಹೆಚ್ಚಿನ ಬೆಲೆಯ ಕಾರುಗಳಿಗೆ ಭಾರತದ ಟ್ಯಾರಿಫ್ನಲ್ಲಿ ಇಳಿಕೆ ಆಗಲಿದೆ.
ಒಂದು ಒಪ್ಪಂದ, 27 ದೇಶಗಳ ಮಾರುಕಟ್ಟೆ
ಭಾರತಕ್ಕೆ ಈ ಒಂದು ಒಪ್ಪಂದದಿಂದ 27 ಶ್ರೀಮಂತ ದೇಶಗಳ ಮಾರುಕಟ್ಟೆ ಪ್ರವೇಶ ಸಿಕ್ಕಂತಾಗಿದೆ. 6.4 ಲಕ್ಷ ಕೋಟಿ ರೂ ಮೊತ್ತದ ರಫ್ತು ಅವಕಾಶ ಸಿಗಲಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಹೆಚ್ಚಿನ ಬ್ಯುಸಿನೆಸ್ ಸಿಗಲಿದೆ.
ಎಂಜಿನಿಯರಿಂಗ್ ಮತ್ತು ಮ್ಯಾನುಫ್ಯಾಕ್ಚರಿಂಗ್ನಲ್ಲಿ ಯೂರೋಪ್ನ ಎರಡು ಟ್ರಿಲಿಯನ್ ಡಾಲರ್ ಕೈಗಾರಿಕಾ ಮಾರುಕಟ್ಟೆಯಲ್ಲಿ ಆದ್ಯತಾ ಪ್ರವೇಶ ಸಿಗಲಿದೆ.
ಆಭರಣ ಸೆಕ್ಟರ್ಗೆ 79 ಬಿಲಿಯನ್ ಡಾಲರ್ ಮೌಲ್ಯದ ಪ್ರತಿಷ್ಠಿತ ಐರೋಪ್ಯ ಮಾರುಕಟ್ಟೆಯಲ್ಲಿ ಟ್ಯಾರಿಫ್ ರಹಿತ ಪ್ರವೇಶ ಸಿಗುತ್ತದೆ.
ಇದನ್ನೂ ಓದಿ: ಭಾರತ-ಯೂರೋಪಿಯನ್ ಯೂನಿಯನ್ ಒಪ್ಪಂದದಿಂದ ಯಾರಿಗೆ ಲಾಭ?
ಲೆದರ್ ಮತ್ತು ಪಾದರಕ್ಷೆ ಕ್ಷೇತ್ರದಲ್ಲಿ ಶೇ. 17 ಇದ್ದ ಟ್ಯಾರಿಫ್ ಅನ್ನು ಶೂನ್ಯಕ್ಕೆ ಇಳಿಸಲಾಗಿದೆ. ಯೂರೋಪಿಯನ್ ಯೂನಿಯನ್ನ 100 ಬಿಲಿಯನ್ ಲೆದರ್ ಮಾರುಕಟ್ಟೆ ಭಾರತಕ್ಕೆ ಸಿಗುತ್ತದೆ. ಭಾರತದ ಚಮ್ಮಾರ ಕುಟುಂಬಗಳಿಗೆ ಖುಷಿಯ ಸುದ್ದಿ ಇದು.
ಯೂರೋಪಿಯನ್ ಯೂನಿಯನ್ನ 263 ಬಿಲಿಯನ್ ಡಾಲರ್ ಮೌಲ್ಯದ ಟೆಕ್ಸ್ಟೈಲ್ ಮಾರುಕಟ್ಟೆಗೆ ಭಾರತದ ಸರಕುಗಳು ಸುಂಕರಹಿತ ಪ್ರವೇಶ ಪಡೆಯಲಿವೆ. ಭಾರತೀಯ ನೇಕಾರ ಕುಟುಂಬಗಳಿಗೆ ಖುಷಿ ಸುದ್ದಿ ಇದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




