ಹತ್ತು ವರ್ಷದಲ್ಲಿ ರಕ್ಷಣಾ ವಲಯದ ರಫ್ತಿನಲ್ಲಿ ಹತ್ತು ಪಟ್ಟು ಹೆಚ್ಚಳ; ರಾಜನಾಥ್ ಸಿಂಗ್ ಪ್ರಶಂಸೆ

|

Updated on: Dec 31, 2024 | 3:38 PM

India's defence exports: ಹತ್ತು ವರ್ಷದ ಹಿಂದೆ 2,000 ಕೋಟಿ ರೂ ರಫ್ತು ಮಾಡುತ್ತಿದ್ದ ಭಾರತದ ರಕ್ಷಣಾ ಕ್ಷೇತ್ರ ಈಗ 21,000 ಕೋಟಿ ರೂ ಮೊತ್ತದ ರಫ್ತು ಮಾಡುತ್ತಿದೆ. ಮಧ್ಯಪ್ರದೇಶದ ಮಹೂ ಬಳಿ ಆರ್ಮಿ ಆಫೀಸರ್​ಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಮಾಹಿತಿ ನೀಡಿದ್ದಾರೆ. ಭಾರತವು ಮಿಲಿಟರಿ ಮತ್ತು ಆರ್ಥಿಕತೆ ಎರಡರಲ್ಲೂ ಶಕ್ತಿಶಾಲಿ ದೇಶವಾಗಬೇಕೆಂಬ ಸಂಕಲ್ಪ ತಮ್ಮ ಸರ್ಕಾರಕ್ಕಿದೆ ಎಂದಿದ್ದಾರೆ.

ಹತ್ತು ವರ್ಷದಲ್ಲಿ ರಕ್ಷಣಾ ವಲಯದ ರಫ್ತಿನಲ್ಲಿ ಹತ್ತು ಪಟ್ಟು ಹೆಚ್ಚಳ; ರಾಜನಾಥ್ ಸಿಂಗ್ ಪ್ರಶಂಸೆ
ರಾಜನಾಥ್ ಸಿಂಗ್
Follow us on

ನವದೆಹಲಿ, ಡಿಸೆಂಬರ್ 31: ಭಾರತದ ರಕ್ಷಣಾ ವಲಯದ (Defence sector) ಮ್ಯಾನುಫ್ಯಾಕ್ಚರಿಂಗ್ ಕಾರ್ಯ ಕಳೆದ ಒಂದು ದಶಕದಲ್ಲಿ ಗಮನಾರ್ಹವಾಗಿ ಬೆಳೆದಿದೆ. ಕಳೆದ 10 ವರ್ಷದಲ್ಲಿ ಈ ಕ್ಷೇತ್ರದಿಂದ ಆಗುವ ರಫ್ತು 10 ಪಟ್ಟು ಹೆಚ್ಚಾಗಿದೆ. ದಶಕದ ಹಿಂದೆ ಒಂದು ವರ್ಷದಲ್ಲಿ 2,000 ಕೋಟಿ ರೂನಷ್ಟು ರಫ್ತಾಗುತ್ತಿತ್ತು. ಈಗ ಅದು ವರ್ಷವೊಂದಕ್ಕೆ 21,000 ಕೋಟಿ ರೂಗೆ ತಲುಪಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಮಾಹಿತಿ ನೀಡಿದ್ದಾರೆ. ಮಧ್ಯಪ್ರದೇಶದ ಮಹೂ (MHow) ಪಟ್ಟಣದ ಆರ್ಮಿ ವಾರ್ ಕಾಲೇಜ್​ನಲ್ಲಿ ಸೇನಾಧಿಕಾರಿಗಳನ್ನು (officers) ಉದ್ದೇಶಿಸಿ ಮಾತನಾಡುತ್ತಿದ್ದ ಸಚಿವರು, 2029ರೊಳಗೆ ಭಾರತದ ಡಿಫೆನ್ಸ್ ರಫ್ತು ಮೌಲ್ಯ 50,000 ಕೋಟಿ ರೂ ಗಡಿ ದಾಟುವ ಗುರಿ ಇಡಲಾಗಿರುವುದನ್ನು ತಿಳಿಸಿದ್ದಾರೆ.

ಸೈನಿಕ ತರಬೇತಿ ಕೇಂದ್ರಗಳನ್ನು ಶ್ಲಾಘಿಸಿದ ರಾಜನಾಥ್ ಸಿಂಗ್

ನಿರಂತರವಾಗಿ ಬದಲಾಗುತ್ತಿರುವ ಸಂದರ್ಭದಲ್ಲಿ ಹೊಸ ತಂತ್ರಜ್ಞಾನಗಳನ್ನು ಸಿದ್ಧಿಸಿಕೊಳ್ಳುವುದು ಬಹಳ ಅಗತ್ಯ. ಭವಿಷ್ಯದ ಯುದ್ಧ ಸ್ವರೂಪಗಳಿಗೆ ಒಗ್ಗಿಕೊಳ್ಳಲು ಸೈನಿಕರನ್ನು ಅಣಿಗೊಳಿಸಬೇಕು. ಆ ನಿಟ್ಟಿನಲ್ಲಿ ಮಿಲಿಟರಿ ತರಬೇತಿ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಇ-ವ್ಯಾಲಟ್, ಎಟಿಎಂ: ಇಪಿಎಫ್ ಹಣ ಹಿಂಪಡೆಯಲು ಇನ್ನಷ್ಟು ಸುಲಭ ಮಾರ್ಗಗಳು

ಮಾಹಿತಿ ಯುದ್ಧಕಲೆ, ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಆಧಾರಿತ ಯುದ್ಧಕಲೆ, ಪರೋಕ್ಷ ಯುದ್ಧ, ಎಲೆಕ್ಟ್ರೋಮ್ಯಾಗ್ನೆಟಿಕ್ ಸಮರ, ಬಾಹ್ಯಾಕಾಶ ಸಮರ, ಸೈಬರ್ ದಾಳಿ ಇತ್ಯಾದಿ ಅಸಂಪ್ರದಾಯಿಕ ಯುದ್ಧ ವಿಧಾನಗಳು ಇವತ್ತಿನ ಕಾಲಘಟ್ಟದಲ್ಲಿ ಎದುರಾಗುತ್ತಿವೆ. ಇವುಗಳನ್ನು ಎದುರಿಸುವುದು ಇವತ್ತಿನ ದೊಡ್ಡ ಸವಾಲು. ಇಂಥ ಸಂಕೀರ್ಣ ಯುದ್ಧಗಳನ್ನು ಎದುರಿಸಲು ಸೂಕ್ತ ತಂತ್ರಜ್ಞಾನ, ತರಬೇತಿ ಇತ್ಯಾದಿ ಎಲ್ಲವೂ ಅಗತ್ಯವಾಗಿರುತ್ತದೆ ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಮಿಲಿಟರಿ ಟ್ರೈನಿಂಗ್ ಸೆಂಟರ್​ಗಳು ತಮ್ಮ ತರಬೇತಿ ಪಠ್ಯಕ್ರಮವನ್ನು ನಿರಂತರವಾಗಿ ಉತ್ತಮಪಡಿಸುತ್ತಿವೆ. ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಯೋಧರು ಸಿದ್ಧರಾಗುವ ನಿಟ್ಟಿನಲ್ಲಿ ಇವುಗಳು ಶ್ರಮ ವಹಿಸುತ್ತಿವೆ ಎಂದ ಅವರು ಮುಂದಿನ ದಿನಗಳಲ್ಲಿ ಭಾರತದ ಎಲ್ಲಾ ಮೂರು ಸೇನೆಗಳೂ ಸಂಯೋಜಿತ ರೀತಿಯಲ್ಲಿ ಮತ್ತು ಹೆಚ್ಚು ಕ್ಷಮತೆಯಿಂದ ಒಗ್ಗೂಡಿ ಸವಾಲುಗಳನ್ನು ಎದುರಿಸಬಲ್ಲುವು ಎಂದಿದ್ದಾರೆ.

ಇದನ್ನೂ ಓದಿ: ಶೇ. 2.6ಕ್ಕೆ ಇಳಿದ ಬ್ಯಾಂಕುಗಳ ಎನ್​ಪಿಎ; ಇದು 12 ವರ್ಷದಲ್ಲೇ ಕನಿಷ್ಠ ಕೆಟ್ಟ ಆಸ್ತಿ ಪ್ರಮಾಣ

ವಿಶ್ವದ ಅತ್ಯಂತ ಶಕ್ತಿಶಾಲಿ ಆರ್ಥಿಕತೆ ಮತ್ತು ಮಿಲಿಟರಿ ದೇಶವನ್ನಾಗಿ ಭಾರತವನ್ನು ಮಾಡಬೇಕೆಂಬ ಸಂಕಲ್ಪ ಸರ್ಕಾರದ್ದಾಗಿದೆ. ದೇಶದ ಭದ್ರತೆಗೆ ಪೂರ್ಣ ಗಮನ ಕೊಟ್ಟರೆ ಮಾತ್ರವೇ ಆರ್ಥಿಕ ಸಮೃದ್ಧಿ ನೆಲಸಲು ಸಾಧ್ಯ. ಹಾಗೆಯೇ, ಆರ್ಥಿಕತೆ ಬಲವಾಗಿದ್ದರೆ ಮಾತ್ರವೇ ಭದ್ರತಾ ವ್ಯವಸ್ಥೆ ಉತ್ತಮವಾಗಿರುತ್ತದೆ ಎಂದು ರಾಜನಾಥ್ ಸಿಂಗ್ ಅವರು ಆರ್ಥಿಕತೆ ಹಾಗೂ ಮಿಲಿಟರಿಗಳೆರಡೂ ಅನಿವಾರ್ಯ ಎಂಬುದನ್ನು ಒತ್ತಿಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ