Indian Economy: ರಾಯ್ಟರ್ಸ್ ಸಮೀಕ್ಷೆ: 2023-24ರಲ್ಲಿ ಭಾರತದ ಆರ್ಥಿಕತೆ ಶೇ. 6.9ರಷ್ಟು ವೃದ್ಧಿ ಸಾಧ್ಯತೆ

|

Updated on: Jan 24, 2024 | 2:28 PM

Reuter's Poll of Economists: 2023-24ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.9ರಷ್ಟು ಬೆಳೆಯಬಹುದು ಎಂದು ರಾಯ್ಟರ್ಸ್ ನಡೆಸಿದ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ. ಈ ಹಣಕಾಸು ವರ್ಷದ ಮೊದಲ ಎರಡು ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಶೇ. 7.8 ಮತ್ತು ಶೇ. 7.6ರಷ್ಟು ಬೆಳೆದಿದೆ. ಹಣದುಬ್ಬರ ಕೂಡ ಈ ವರ್ಷ ಶೇ. 5.4ಕ್ಕೆ ಇಳಿಯಬಹುದು. 2024-25ರಲ್ಲಿ ಶೇ. 4.7 ಇರಬಹುದು ಎನ್ನಲಾಗಿದೆ.

Indian Economy: ರಾಯ್ಟರ್ಸ್ ಸಮೀಕ್ಷೆ: 2023-24ರಲ್ಲಿ ಭಾರತದ ಆರ್ಥಿಕತೆ ಶೇ. 6.9ರಷ್ಟು ವೃದ್ಧಿ ಸಾಧ್ಯತೆ
ಭಾರತದ ಆರ್ಥಿಕತೆ
Follow us on

ನವದೆಹಲಿ, ಜನವರಿ 24: ಈ ವರ್ಷವೂ, ಮುಂದಿನ ವರ್ಷವೂ ಭಾರತ ಅತಿವೇಗದ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಗಳಲ್ಲಿ (Indian Economy) ಒಂದಾಗಿರುತ್ತದೆ. ರಾಯ್ಟರ್ಸ್ ಸಮೀಕ್ಷೆಯಲ್ಲಿ (Reuters Poll) ಪಾಲ್ಗೊಂಡಿದ್ದ ವಿವಿಧ ಆರ್ಥಿಕ ತಜ್ಞರ ಪ್ರಕಾರ ಭಾರತದ ಆರ್ಥಿಕತೆ ಶೇ. 6.9ರಷ್ಟು ಬೆಳೆಯಬಹುದು. ಹಾಗೆಯೇ, ಹಣದುಬ್ಬರ ಏರುವಿಕೆಗೂ ಕಡಿವಾಣ ಬೀಳಬಹುದು ಎನ್ನಲಾಗಿದೆ.

ರಾಯ್ಟರ್ಸ್ ಸಮೀಕ್ಷೆಯಲ್ಲಿ 54 ಮಂದಿ ಆರ್ಥಿಕ ತಜ್ಞರು ಪಾಲ್ಗೊಂಡಿದ್ದರು. ಜನವರಿ 10ರಿಂದ 23ರವರೆಗೆ ಭಾರತದ ಆರ್ಥಿಕ ಪ್ರಗತಿ ಬಗ್ಗೆ ಈ ಸಮೀಕ್ಷೆಯಾಗಿದ್ದು. ಅವರೆಲ್ಲರ ಲೆಕ್ಕಾಚಾರಗಳ ಸರಾಸರಿ ಹಾಕಿದಾಗ 2023-24ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.9ರಷ್ಟು ಬೆಳೆಯಬಹುದು ಎಂದಾಗಿದೆ. ಡಿಸೆಂಬರ್​ನಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ. 6.7ರಷ್ಟು ಬೆಳೆಯಬಹುದು ಎಂದು ಎಣಿಸಲಾಗಿತ್ತು. ಒಂದು ತಿಂಗಳ ಅಂತರದಲ್ಲಿ ಆರ್ಥಿಕ ತಜ್ಞರ ಅಂದಾಜು ಬದಲಾಗಿದೆ.

ಇದನ್ನೂ ಓದಿ: Tax: ನೇರ ತೆರಿಗೆ, ಐಟಿಆರ್ ಸಲ್ಲಿಕೆಯಲ್ಲಿ 10 ವರ್ಷದಲ್ಲಿ ಭರ್ಜರಿ ಹೆಚ್ಚಳ: ಸಿಬಿಡಿಟಿ ಅಂಕಿ ಅಂಶ ಬಿಡುಗಡೆ

ಈ ಹಣಕಾಸು ವರ್ಷದ ಮೊದಲ ಎರಡು ಕ್ವಾರ್ಟರ್​ಗಳಲ್ಲಿ ಭಾರತದ ಜಿಡಿಪಿ ಶೇ. 7.8 ಮತ್ತು ಶೇ. 7.6ರಷ್ಟು ಬೆಳೆದಿದೆ. ಇದು ಆರ್​ಬಿಐ ನಿರೀಕ್ಷಿಸಿದುದಕ್ಕಿಂತಲೂ ವೇಗದ ಪ್ರಗತಿಯಾಗಿದೆ. ಇದಾದ ಬಳಿಕ ಬಹುತೇಕ ಆರ್ಥಿಕ ತಜ್ಞರು ಭಾರತದ ಜಿಡಿಪಿ ಬೆಳವಣಿಗೆ ಬಗೆಗಿನ ತಮ್ಮ ಅಂದಾಜನ್ನು ಬದಲಿಸಿಕೊಂಡಿದ್ದಾರೆ.

ಹಣದುಬ್ಬರೂ ಇಳಿಮುಖವಾಗುವ ಸಾಧ್ಯತೆ

ಡಿಸೆಂಬರ್​ನಲ್ಲಿ ಭಾರತದ ಹಣದುಬ್ಬರ ಶೇ. 5.69ರ ಮಟ್ಟ ಮುಟ್ಟಿದೆ. ಆರ್​ಬಿಐ ಹಣದುಬ್ಬರ ತಾಳಿಕೆ ಮಿತಿಯಾದ ಶೇ. 6ರ ಸಮೀಪಕ್ಕೆ ಹೋಗಿದೆ. ಆಹಾರ ಬೆಲೆಗಳು ಈ ಉಬ್ಬರಕ್ಕೆ ಪ್ರಮುಖ ಕಾರಣವಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಹಣದುಬ್ಬರ ಸಾಕಷ್ಟುತಗ್ಗಲಿದೆ ಎಂದು ಆರ್ಥಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Interesting Case: ಬ್ಯಾಂಕುಗಳು ಮನಬಂದಂತೆ ಬಡ್ಡಿ ಹಾಕಿದ್ರೆ ನೀವೇನ್ ಮಾಡುತ್ತಿರುತ್ತೀರಿ? ಆರ್​ಬಿಐಗೆ ಛೇಮಾರಿ ಹಾಕಿದ ಕೋರ್ಟ್

ರಾಯ್ಟರ್ಸ್ ಸಮೀಕ್ಷೆ ಪ್ರಕಾರ ಈ ವರ್ಷ (2023-24) ಹಣದುಬ್ಬರ ಶೇ. 5.4ರಷ್ಟು ಇದ್ದರೆ, ಮುಂದಿನ ಹಣಕಾಸು ವರ್ಷದಲ್ಲಿ ಇದು ಶೇ. 4.7ಕ್ಕೆ ಇಳಿಯಬಹುದು.

ಹೊಸ ವರ್ಷದಲ್ಲಿ ಶುಭಾರಂಭ: ಎಚ್​ಎಸ್​ಬಿಸಿ ಸರ್ವೇ

ಭಾರತದ ಆರ್ಥಿಕತೆ ಈ ಕ್ಯಾಲಂಡರ್ ವರ್ಷದಲ್ಲಿ ಶುಭಾರಂಭ ಮಾಡಿರಬಹುದು ಎಂದು ಎಚ್​ಎಸ್​ಬಿಸಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. 2024ರ ಜನವರಿ ತಿಂಗಳಲ್ಲಿ ಸರ್ವಿಸ್ ಕ್ಷೇತ್ರ ಮತ್ತು ಉತ್ಪಾದನಾ ಕ್ಷೇತ್ರಗಳು ಚುರುಕಾಗಿ ಮುನ್ನಡೆ ಹೊಂದಿವೆ. ಇದರ ಫಲವಾಗಿ ಭಾರತದ ಆರ್ಥಿಕತೆ ಜನವರಿಯಲ್ಲಿ ಬಹಳ ವೇಗವಾಗಿ ಬೆಳೆದಿರುವ ಸಾಧ್ಯತೆ ಇದೆ ಎಂದು ಆ ಸಮೀಕ್ಷೆಯು ಅಂದಾಜು ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ