Interesting Case: ಬ್ಯಾಂಕುಗಳು ಮನಬಂದಂತೆ ಬಡ್ಡಿ ಹಾಕಿದ್ರೆ ನೀವೇನ್ ಮಾಡುತ್ತಿರುತ್ತೀರಿ? ಆರ್​ಬಿಐಗೆ ಛೇಮಾರಿ ಹಾಕಿದ ಕೋರ್ಟ್

Allahabad High Court Swipe at RBI: ಗ್ರಾಹಕರ ಗಮನಕ್ಕೆ ತಾರದೆಯೇ ಬಡ್ಡಿದರ ಪರಿಷ್ಕರಿಸಿದ್ದ ಬ್ಯಾಂಕು ಮತ್ತು ಆರ್​ಬಿಐಗೆ ಅಲಹಾಬಾದ್ ಹೈಕೋರ್ಟ್ ಛೀಮಾರಿ ಹಾಕಿದೆ. ಮನಮೀತ್ ಸಿಂಗ್ ಎಂಬುವವರು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್​ನಲ್ಲಿ ಶೇ. 12.5ರ ಬಡ್ಡಿದರಲ್ಲಿ ಪಡೆದಿದ್ದ ಸಾಲಕ್ಕೆ ಶೇ. 16-18ರಷ್ಟು ಬಡ್ಡಿ ಹಾಕಲಾಗಿತ್ತು. ಓಂಬುಡ್ಸ್​ಮ್ಯಾನ್ ಬಳಿ ದೂರು ನೀಡಿದರೂ ಗ್ರಾಹಕನಿಗೆ ನ್ಯಾಯ ದಕ್ಕಲಿಲ್ಲ.

Interesting Case: ಬ್ಯಾಂಕುಗಳು ಮನಬಂದಂತೆ ಬಡ್ಡಿ ಹಾಕಿದ್ರೆ ನೀವೇನ್ ಮಾಡುತ್ತಿರುತ್ತೀರಿ? ಆರ್​ಬಿಐಗೆ ಛೇಮಾರಿ ಹಾಕಿದ ಕೋರ್ಟ್
ಅಲಾಹಾಬಾದ್ ಹೈಕೋರ್ಟ್
Follow us
|

Updated on: Jan 24, 2024 | 11:07 AM

ಅಲಾಹಾಬಾದ್, ಜನವರಿ 24: ಯಾವುದೇ ಬ್ಯಾಂಕು ಸಾಲ ನೀಡಿದ ಬಳಿಕ ಬಡ್ಡಿ ದರ ಹೆಚ್ಚಳ ಮಾಡುವ ಮುನ್ನ ಗ್ರಾಹಕರಿಗೆ ಮಾಹಿತಿ ನೀಡಿ ಸಮ್ಮತಿ ಪಡೆಯಬೇಕು ಎಂದು ಆರ್​ಬಿಐ ನಿಯಮ ಹೇಳುತ್ತದೆ. ಆದರೆ, ಬಹಳಷ್ಟು ಬ್ಯಾಂಕುಗಳು ಗ್ರಾಹಕರಿಗೆ ಗಮನಕ್ಕೆ ತಾರದೆಯೇ ಬಡ್ಡಿದರ ಪರಿಷ್ಕರಿಸಿ ಜಾರಿಗೆ ತರುವುದುಂಟು. ಇಂತಿಷ್ಟು ಬಡ್ಡಿ ಎಂಬ ತಿಳಿವಳಿಕೆಯಲ್ಲಿರುವ ಗ್ರಾಹಕರಿಗೆ ಅಂತಿಮವಾಗಿ ಸಾಲದ ಹೊರೆ ಬಹಳ ದೊಡ್ಡದಾಗಿ ಹೋಗಿರುತ್ತದೆ. ಇಂಥದ್ದೊಂದು ಘಟನೆ ಕೋರ್ಟ್ ಮೆಟ್ಟಿಲೇರಿದ್ದು, ಉತ್ತರಪ್ರದೇಶದ ಅಲಹಾಬಾದ್ ಉಚ್ಚ ನ್ಯಾಯಾಲಯದ (Allahabad High Court) ಕಣ್ಣು ಬಿಸಿಯಾಗುವಂತೆ ಮಾಡಿದೆ. ನಿಗದಿತ ದರಕ್ಕಿಂತ ಹೆಚ್ಚು ಬಡ್ಡಿ ವಸೂಲಿ ಮಾಡಿದ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮತ್ತು ಬಡ್ಡಿದರದ ಅನ್ಯಾಯಗಳನ್ನು ಕಂಡೂಕಾಣದಂತೆ ಸುಮ್ಮನಿರುವ ಆರ್​ಬಿಐಗೆ ಹೈಕೋರ್ಟ್ ನ್ಯಾಯಪೀಠ ಛೀಮಾರಿ ಹಾಕಿದೆ.

ಏನಿದು ಪ್ರಕರಣ?

ಮನಮೀತ್ ಸಿಂಗ್ ಎಂಬುವವರು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್​ನಿಂದ 9 ಲಕ್ಷ ರೂ ಸಾಲ ಪಡೆದಿರುತ್ತಾರೆ. ಫ್ಲೋಟಿಂಗ್ ರೇಟ್ (floating rate) ಆಯ್ಕೆ ಮಾಡಿಕೊಳ್ಳುತ್ತಾರೆ. ಬಡ್ಡಿದರ ಶೇ. 12.5ರಷ್ಟಿರುತ್ತದೆ. ಪೂರ್ಣ ಸಾಲ ಮರುಪಾವತಿ ಮಾಡಿ ನೋ ಡ್ಯೂ ಸರ್ಟಿಫಿಕೇಟ್ ಮತ್ತು ಅಡವಿಟ್ಟಿದ್ದ ಆಸ್ತಿಪತ್ರಗಳನ್ನು ಪಡೆಯುತ್ತಾರೆ.

ಇದನ್ನೂ ಓದಿ: UP Economy: ರಾಮಮಂದಿರದಿಂದಾಗಿ ಉತ್ತರಪ್ರದೇಶಕ್ಕೆ ಒಂದು ವರ್ಷದಲ್ಲಿ 25,000 ಕೋಟಿ ರೂ ಹೆಚ್ಚುವರಿ ತೆರಿಗೆ ಸಂಗ್ರಹವಾಗುತ್ತದಾ?

ಆದರೆ, ಮನಮೀತ್ ಸಿಂಗ್ ತಮ್ಮ ಲೋನ್ ಅಕೌಂಟ್ ಅನ್ನು ಪರಿಶೀಲಿಸಿದಾಗ ವಾಸ್ತವ ಗೊತ್ತಾಗುತ್ತದೆ. ಅವರ ಬ್ಯಾಂಕ್ ಖಾತೆಯಿಂದ ಲೋನ್ ಖಾತೆಗೆ ಒಟ್ಟು 27 ಲಕ್ಷ ರೂ ಮುರಿದುಕೊಂಡಿರಲಾಗುತ್ತದೆ. ಶೇ. 12.5ರಷ್ಟು ಬಡ್ಡಿದರದಲ್ಲಿ 17 ಲಕ್ಷ ರೂ ಹಣವನ್ನು ಮುರಿದುಕೊಳ್ಳಬೇಕಿತ್ತು. ಆದರೆ ಬ್ಯಾಂಕ್ 10 ಲಕ್ಷದಷ್ಟು ಹೆಚ್ಚು ಹಣ ಡೆಬಿಟ್ ಮಾಡಿರುತ್ತದೆ. ಅಂದರೆ, ಶೇ. 16-18ರಷ್ಟು ಬಡ್ಡಿದರವನ್ನು ಸಾಲಕ್ಕೆ ವಿಧಿಸಲಾಗಿರುತ್ತದೆ.

ಬ್ಯಾಂಕಿಂಗ್ ಓಂಬುಡ್ಸ್​ಮ್ಯಾನ್ ಅವರಿಗೆ ಮನಮೀತ್ ಸಿಂಗ್ ದೂರು ಕೊಡುತ್ತಾರೆ. ಬ್ಯಾಂಕ್​ನ ಲಿಖಿತ ಉತ್ತರದ ಪ್ರತಿಯನ್ನು ಸಿಂಗ್​ಗೆ ನೀಡಿ ಆ ಕೇಸ್ ಸಮಾಪ್ತಿ ಮಾಡಲಾಗುತ್ತದೆ.

ಬ್ಯಾಂಕ್ ಉತ್ತರ ಏನು?

ಫ್ಲೋಟಿಂಗ್ ರೇಟ್​ನಲ್ಲಿ ಸಾಲ ನೀಡಲಾಗಿರುತ್ತದೆ. ಮೂರು ತಿಂಗಳಿಗೊಮ್ಮೆ ಬಡ್ಡಿದರ ಪರಿಷ್ಕರಿಸುವ ಅಧಿಕಾರ ಬ್ಯಾಂಕಿಗೆ ಇರುತ್ತದೆ. ಅಂತೆಯೇ ಬಡ್ಡಿದರ ಹೆಚ್ಚಿಸಲಾಗಿತ್ತು. ಇದು ನಿಯಮ ಪ್ರಕಾರ ನಡೆದ ಹೆಚ್ಚಳವಾಗಿದೆ ಎಂದು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ವಾದಿಸಿತ್ತು.

ಇದನ್ನೂ ಓದಿ: Stock Market: ಇತಿಹಾಸದಲ್ಲಿ ಮೊದಲ ಬಾರಿಗೆ ಹಾಂಕಾಂಗ್ ಅನ್ನು ಹಿಂದಿಕ್ಕಿದೆ ಭಾರತದ ಷೇರುಪೇಟೆ; ಚೀನಾ ಸಮೀಪ ದೌಡು

ಮನಮೀತ್ ಸಿಂಗ್ ಅವರು ಅಲಾಹಾಬಾದ್ ಹೈಕೋರ್ಟ್ ಮೊರೆ ಹೋಗುತ್ತಾರೆ. ನ್ಯಾಯಾಧೀಶರಾದ ಮಹೇಶ್ ಚಂದ್ರ ತ್ರಿಪಾಠಿ ಮತ್ತು ಪ್ರಶಾಂತ್ ಕುಮಾರ್ ಅವರಿರುವ ನ್ಯಾಯಪೀಠ ವಿಚಾರಣೆ ನಡೆಸುತ್ತದೆ. ಬಡ್ಡಿದರ ಪರಿಷ್ಕರಿಸಿದಾಗ ಅದನ್ನು ಜಾರಿಗೊಳಿಸುವ ಮುನ್ನ ಗ್ರಾಹಕರಿಗೆ ನೋಟೀಸ್ ನೀಡಿ ಅವರ ಸಮ್ಮತಿ ಪಡೆಯಬೇಕು ಎನ್ನುವ ಆರ್​ಬಿಐ ನಿಯಮವನ್ನು ಬ್ಯಾಂಕು ಉಲ್ಲಂಘಿಸಿರುವ ಸಂಗತಿಯನ್ನು ನ್ಯಾಯಪೀಠ ಗಮನಿಸುತ್ತದೆ.

ಆ ವಿಚಾರವಾಗಿ ಬ್ಯಾಂಕು ಮತ್ತು ಆರ್​ಬಿಐ ಅನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ಅರ್ಜಿದಾರರಿಗೆ ಪ್ರತಿವಾದ ಮಂಡಿಸುವ ಅವಕಾಶ ಕೊಡದ ಬ್ಯಾಂಕಿಂಗ್ ಓಂಬುಡ್ಸ್​​ಮ್ಯಾನ್​ನ ವರ್ತನೆ ಬಗ್ಗೆಯೂ ಹೈಕೋರ್ಟ್ ಅಸಮಾಧಾನಗೊಳ್ಳುತ್ತದೆ. ಈ ಪ್ರಕರಣವನ್ನು ಹೊಸದಾಗಿ ವಿಚಾರಿಸಿ ಇತ್ಯರ್ಥಪಡಿಸುವಂತೆ ಮತ್ತೆ ಓಂಬುಡ್ಸ್​ಮ್ಯಾನ್​ಗೆ ಪ್ರಕರಣವನ್ನು ಹಿಂದಿರುಗಿಸಿ ಅಲಾಹಾಬಾದ್ ಹೈಕೋರ್ಟ್ ನ್ಯಾಯಪೀಠ ಆದೇಶ ನೀಡಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ