Halwa Ceremony: ಬಜೆಟ್ ಮಂಡನೆಗೆ ಮುನ್ನ ಹಲ್ವಾ ತಿನಿಸುವ ಕಾರ್ಯಕ್ರಮ ಯಾಕೆ ನಡೆಯುತ್ತದೆ? ಏನಿದರ ವಿಶೇಷತೆ?

Union Budget 2024: ಹಲ್ವಾ ಆಚರಣೆಯ ಸಂಪ್ರದಾಯ ಮೊದಲಿಂದಲೂ ನಡೆಸಿಕೊಂಡು ಬರಲಾಗಿದೆ. ಬಜೆಟ್​ಗೆ ಕೆಲ ದಿನ ಮೊದಲು ಈ ಕಾರ್ಯಕ್ರಮ ಇರುತ್ತದೆ. ಬಜೆಟ್ ತಯಾರಿಕೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಹಣಕಾಸು ಸಚಿವರು ಹಲ್ವಾ ಸಿಹಿ ತಿನಿಸುತ್ತಾರೆ. ಬಜೆಟ್ ತಯಾರಿಕೆಯಲ್ಲಿರುವ ಜನರು ಹಲವು ದಿನಗಳ ಕಾಲ ಪ್ರತ್ಯೇಕ ಕಟ್ಟಡದಲ್ಲಿ ಹೊರಗಿನ ಸಂಪರ್ಕ ಇಲ್ಲದಂತೆ ಕೆಲಸ ಮಾಡುತ್ತಾರೆ.

Halwa Ceremony: ಬಜೆಟ್ ಮಂಡನೆಗೆ ಮುನ್ನ ಹಲ್ವಾ ತಿನಿಸುವ ಕಾರ್ಯಕ್ರಮ ಯಾಕೆ ನಡೆಯುತ್ತದೆ? ಏನಿದರ ವಿಶೇಷತೆ?
ಹಲ್ವಾ ಕಾರ್ಯಕ್ರಮ
Follow us
|

Updated on: Jan 24, 2024 | 9:00 AM

ನವದೆಹಲಿ, ಜನವರಿ 23: ಫೆಬ್ರುವರಿ 1ರಂದು ಕೇಂದ್ರ ಹಣಕಾಸು ಸಚಿವೆ ಬಜೆಟ್ (Budget 2024) ಮಂಡಿಸಲಿದ್ದಾರೆ. ಲೋಕಸಭೆಗೆ ಮುನ್ನ ನಡೆಯುವ ಇದು ಪೂರ್ಣ ಬಜೆಟ್ ಬದಲು ಮಧ್ಯಂತರ ಬಜೆಟ್ ಮಾತ್ರವೇ ಆಗಿರುತ್ತದೆ. ಯಾವುದೇ ಬಜೆಟ್ ಮಂಡಿಸುವ ಮೊದಲು ಕೆಲವಿಷ್ಟು ಸಂಪ್ರದಾಯ, ಆಚರಣೆಗಳನ್ನು ನಡೆಸಲಾಗುತ್ತದೆ. ಇಂಥ ಕೆಲ ಸಂಪ್ರದಾಯಗಳನ್ನು ಸರ್ಕಾರಗಳು ಕೈಬಿಟ್ಟಿರುವುದುಂಟು. ಹಾಗೆಯೇ, ಕೆಲ ಆಚರಣೆಗಳು ಮುಂದುವರಿದುಕೊಂಡು ಬಂದಿವೆ. ಇಂಥ ಸಂಪ್ರದಾಯದಲ್ಲಿ ಹಲ್ವಾ ಕಾರ್ಯಕ್ರಮವೂ (Halwa ceremony) ಒಂದು. ಬಜೆಟ್ ಮಂಡನೆಗೆ ಕೆಲ ದಿನಗಳ ಮೊದಲು ಹಲ್ವಾ ಕಾರ್ಯಕ್ರಮ ನಡೆಯುತ್ತದೆ.

ಏನಿದು ಹಲ್ವಾ ಕಾರ್ಯಕ್ರಮ?

ಒಂದು ಬಜೆಟ್ ತಯಾರಿಸಲು ಆರು ತಿಂಗಳ ಹಿಂದಿನಿಂದಲೇ ಕೆಲಸಗಳು ನಡೆಯುತ್ತವೆ. ಬಜೆಟ್​​ ಅನ್ನು ಅಂತಿಮಗೊಳಿಸಿ ಬಜೆಟ್ ಪುಸ್ತಕ ಸೇರಿದಂತೆ ಅದಕ್ಕೆ ಸಂಬಂಧಿಸಿ ವಿವಿಧ ದಾಖಲೆಗಳನ್ನು ಮುದ್ರಿಸಲಾಗುತ್ತದೆ. ಬಜೆಟ್ ಅನ್ನು ಅಂತಿಮಗೊಳಿಸಿದ ಖುಷಿಯನ್ನು ಆಚರಿಸಲು ಹಲ್ವಾ ಕಾರ್ಯಕ್ರಮ ನಡೆಸಲಾಗುತ್ತದೆ. ಪುಸ್ತಕ ಮುದ್ರಣಕ್ಕೆ ಮೊದಲು ಇದು ನಡೆಯುತ್ತದೆ.

ಹಲ್ವಾ ಕಾರ್ಯಕ್ರಮದಲ್ಲಿ ದೊಡ್ಡ ಕಡಾಯಿಯಲ್ಲಿ ಹಲ್ವಾ ಸಿಹಿಯನ್ನು ತಯಾರಿಸಲಾಗುತ್ತದೆ. ಹಣಕಾಸು ಖಾತೆ ಹೊತ್ತವರು ಸಿಹಿ ತಯಾರಿಸುವ ಕಾರ್ಯಕ್ಕೆ ಕೈಜೋಡಿಸುತ್ತಾರೆ. ಸಿಹಿ ತಯಾರಾದ ಬಳಿಕ ತಮ್ಮ ಸಚಿವಾಲಯದ ಸಿಬ್ಬಂದಿಗೆ ಸಿಹಿ ನೀಡುತ್ತಾರೆ.

ಇದನ್ನೂ ಓದಿ: ಫೆಬ್ರವರಿ 1 ರಂದು ಬಜೆಟ್ ಮಂಡಿಸಲಿದ್ದಾರೆ ನಿರ್ಮಲಾ ಸೀತಾರಾಮನ್, ಏನಿದು ಮಧ್ಯಂತರ ಬಜೆಟ್?

ಬಜೆಟ್ ತಯಾರಿಸುವ ಶ್ರಮ ಅಷ್ಟಿಷ್ಟಲ್ಲ…

ಬಜೆಟ್ ಅನ್ನು ತಯಾರಿಸುವ ಕಾರ್ಯ ಬಹಳ ವಿಶೇಷವಾದುದು. ಬಜೆಟ್ ಮಂಡನೆ ಆಗುವವರೆಗೂ ಇದನ್ನು ಬಹಳ ರಹಸ್ಯದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಇದರಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಯನ್ನೂ ಪ್ರತ್ಯೇಕವಾಗಿ ಇಡಲಾಗುತ್ತದೆ. ಬಜೆಟ್ ಮಂಡನೆ ಆಗುವವರೆಗೂ ಇವರಿಗೆ ಹೊರಜಗತ್ತಿನ ಸಂಪರ್ಕವೇ ಇರುವುದಿಲ್ಲ.

ಗುಪ್ತಚರರ ಕಣ್ಗಾವಲು ಸದಾ ಇರುತ್ತದೆ. ತುರ್ತು ಕರೆಗೆ ಮಾತ್ರವೇ ಆಸ್ಪದ ಇರುತ್ತದೆ. ಫೋನ್ ಮಾಡಿದರೂ ಅದರ ಮೇಲೂ ಕಿವಿ ಇರುತ್ತದೆ. ಪ್ರಬಲ ಸೈಬರ್ ಸೆಕ್ಯೂರಿಟಿ ವ್ಯವಸ್ಥೆ ಇರುತ್ತದೆ. ಹಣಕಾಸು ಸಚಿವರು ಮಾತ್ರವೇ ಇವರಿರುವ ಸ್ಥಳಕ್ಕೆ ಹೋಗಿ ಬರಬಹುದು. ಅವರು ಹೋದರೂ ಅಲ್ಲಿಂದ ಮೊಬೈಲ್ ಫೋನ್ ಬಳಸಲು ನಿರ್ಬಂಧ ಇರುತ್ತದೆ.

ಇದನ್ನೂ ಓದಿ: ವಿತ್ತೀಯ ಕೊರತೆ ಹೆಚ್ಚಬಾರದು, ಬಂಡವಾಳ ವೆಚ್ಚ ಕಡಿಮೆ ಆಗಬಾರದು: ಬಜೆಟ್​ನಲ್ಲಿ ಬ್ಯಾಲನ್ಸ್ ಮಾಡೋದೇ ಸವಾಲು

ಈಗ ಬಜೆಟ್ ಪುಸ್ತಕಗಳನ್ನು ಮುದ್ರಿಸುವ ಕಾರ್ಯ ಕೈಬಿಡಲಾಗಿದೆ. ಎಲ್ಲವೂ ಡಿಜಿಟಲ್ ಆಗಿದೆ. ಆದರೂ ಬಜೆಟ್ ತಯಾರಿಕೆಯ ಶ್ರಮ ಕಡಿಮೆ ಆಗಿಲ್ಲ. ಹೀಗಾಗಿ, ಹಲ್ವಾ ತಿನಿಸುವ ಕಾರ್ಯಕ್ರಮ ಇನ್ನೂ ಮುಂದುವರಿದುಕೊಂಡು ಬಂದಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ