
ನವದೆಹಲಿ, ಅಕ್ಟೋಬರ್ 12: ಭಾರತ ಮತ್ತು ಇಎಫ್ಟಿಎ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದ (India EFTA trade pact) ಭಾರತಕ್ಕೆ ಹಲವು ವಿಧದಲ್ಲಿ ಲಾಭವಾಗುವ ನಿರೀಕ್ಷೆ ಇದೆ. ಮುಂದಿನ 15 ವರ್ಷದಲ್ಲಿ ಐರೋಪ್ಯ ದೇಶಗಳಿಂದ 100 ಬಿಲಿಯನ್ ಡಾಲರ್ ಹೂಡಿಕೆಗಳು ಭಾರತಕ್ಕೆ ಹರಿದುಬರಬಹುದು. ಹತ್ತು ಲಕ್ಷ ನೇರ ಉದ್ಯೋಗ ಸೃಷ್ಟಿಯಾಗಬಹುದು ಎನ್ನಲಾಗಿದೆ. ಭಾರತ ಮತ್ತು ಯೂರೋಪ್ ನಡುವಿನ ಈ ಮುಕ್ತ ವ್ಯಾಪಾರ ಒಪ್ಪಂದಕ್ಕೆ 2024ರ ಮಾರ್ಚ್ 10ರಂದು ಸಹಿಹಾಕಲಾಗಿದೆಯಾದರೂ, 2025ರ ಅಕ್ಟೋಬರ್ 1ರಂದು ಜಾರಿಗೆ ಬಂದಿದೆ.
ಇಎಫ್ಟಿಎ ಎಂದರೆ ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್. ಐಸ್ಲ್ಯಾಂಡ್, ಲಿಕ್ಟನ್ಸ್ಟೇನ್, ನಾರ್ವೇ ಮತ್ತು ಸ್ವಿಟ್ಜರ್ಲ್ಯಾಂಡ್ ದೇಶಗಳ ಅಂತರಸರ್ಕಾರೀ ಸಂಘಟನೆ ಅದು. ಯೂರೋಪ್ನ ಈ ನಾಲ್ಕು ಮುಂದುವರಿದ ದೇಶಗಳೊಂದಿಗೆ ಭಾರತ ಮೊದಲ ಬಾರಿಗೆ ಫ್ರೀ ಟ್ರೇಡ್ ಅಗ್ರೀಮೆಂಟ್ ಮಾಡಿಕೊಂಡಿದೆ.
ಇದನ್ನೂ ಓದಿ: ಜಿಡಿಪಿ ಸಾಲ ಅನುಪಾತ 10 ವರ್ಷದಲ್ಲಿ ಶೇ. 81ರಿಂದ 71ಕ್ಕೆ ಇಳಿಕೆ: ಕೇರ್ಎಡ್ಜ್ ರೇಟಿಂಗ್ಸ್ ವರದಿ
ಭಾರತವು ಈ ನಾಲ್ಕು ಇಎಫ್ಟಿಎ ದೇಶಗಳಿಗೆ 2024-25ರಲ್ಲಿ ಮಾಡಿದ ರಫ್ತಿನ ಒಟ್ಟು ಮೌಲ್ಯ 72.37 ಮಿಲಿಯನ್ ಡಾಲರ್ನಷ್ಟಿದೆ. ಇದರಲ್ಲಿ ಅತಿಹೆಚ್ಚು ರಫ್ತಾದ ಸರಕುಗಳೆಂದರೆ ಗೋರಿಕಾಯಿ, ಸಂಸ್ಕರಿಸಿದ ತರಕಾರಿಗಳು, ಬಾಸ್ಮತಿ ಅಕ್ಕಿ, ಬೇಳೆ ಕಾಳುಗಳು, ಹಣ್ಣು, ದ್ರಾಕ್ಷಿ.
ಇಎಫ್ಟಿಎ ಜೊತೆಗಿನ ಈ ಎಫ್ಟಿಎಯಿಂದ ಭಾರತಕ್ಕೆ ಲಾಭ ಹೆಚ್ಚಿದೆ. ಭಾರತದ ಶೇ. 92.2 ಸರಕುಗಳಿಗೆ ಟ್ಯಾರಿಫ್ ವಿನಾಯಿತಿ ನೀಡಲಾಗುತ್ತದೆ. ಇಎಫ್ಟಿಎಗೆ ಭಾರತ ಶೇ. 99.6ರಷ್ಟು ರಫ್ತಿಗೆ ಟ್ಯಾರಿಫ್ ರಿಯಾಯಿತಿ ಸಿಗುತ್ತದೆ. ಸಂಸ್ಕರಿತ ಕೃಷಿ ಉತ್ಪನ್ನಗಳು, ಕೃಷಿಯೇತರ ಉತ್ಪನ್ನಗಳೂ ಇದರಲ್ಲಿ ಸೇರಿವೆ.
ಇದಕ್ಕೆ ಬದಲಾಗಿ ಭಾರತವೂ ಕೂಡ ಇಎಫ್ಟಿಎ ರಫ್ತುಗಳಿಗೆ ಒಂದಷ್ಟು ಟ್ಯಾರಿಫ್ ರಿಯಾಯಿತಿ ಕೊಟ್ಟಿದೆ. ಇಎಫ್ಟಿಎನ ಶೇ. 82.7ರಷ್ಟು ಸರಕುಗಳಿಗೆ ಕನ್ಸಿಶನ್ ಕೊಡಲಾಗಿದೆ. ಅಲ್ಲಿನ ಶೇ. 95.3ರಷ್ಟು ರಫ್ತಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: ವಿಶ್ವದ ಐದು ಅತಿಪುರಾತನ ಕಂಪನಿಗಳು ಒಂದೇ ದೇಶದಲ್ಲಿ… ಭಾರತದ ಅತಿಹಳೆಯ 10 ಕಂಪನಿಗಳ ಪಟ್ಟಿ
ಭಾರತದಲ್ಲಿ ಬಹಳ ಸೂಕ್ಷ್ಮ ಕ್ಷೇತ್ರಗಳೆಂದು ಪರಿಗಣಿಸಲಾಗಿರುವ ಡೈರಿ, ಸೋಯಾ, ಕಲ್ಲಿದ್ದಲು, ಫಾರ್ಮಾ, ಮೆಡಿಕಲ್ ಡಿವೈಸ್ ಮೊದಲಾದವುಗಳನ್ನು ಈ ಮುಕ್ತ ವ್ಯಾಪಾರದಿಂದ ಹೊರಗಿಡಲಾಗಿದೆ. ಅಂದರೆ, ಇಎಫ್ಟಿಎಯಿಂದ ರಫ್ತಾಗಿ ಬರುವ ಈ ಮೇಲಿನ ಸರಕುಗಳಿಗೆ ಭಾರತ ಅಧಿಕ ಟ್ಯಾರಿಫ್ ವಿಧಿಸುವುದನ್ನು ಮುಂದುವರಿಸಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ