ನವದೆಹಲಿ, ಜೂನ್ 16: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಈಗ 655.817 ಬಿಲಿಯನ್ ಡಾಲರ್ನಷ್ಟಾಗಿದೆ. ಇದು ಜೂನ್ 7ರಂದು ದಾಖಲಾದ ಸಂಗ್ರಹವಾಗಿದೆ. ಆರ್ಬಿಐ ಮೊನ್ನೆ ಬಿಡುಗಡೆ ಮಾಡಿದ ದತ್ತಾಂಶದಲ್ಲಿ, ಜೂನ್ 7ರಂದು ಅಂತ್ಯಗೊಂಡ ವಾರದಲ್ಲಿ 4.307 ಬಿಲಿಯನ್ ಡಾಲರ್ನಷ್ಟು ಏರಿಕೆ ಆಗಿದೆ. ಮೇ 31ರಂದು 651.51 ಬಿಲಿಯನ್ ಡಾಲರ್ ಇದ್ದ ಫಾರೆಕ್ಸ್ ರಿಸರ್ವ್ಸ್ ಸಂಗ್ರಹ (Forex reserves) 655.817 ಬಿಲಿಯನ್ ಡಾಲರ್ಗೆ ಏರಿದೆ. ಇದು ಭಾರತದ ಫಾರೆಕ್ಸ್ ಇತಿಹಾಸದಲ್ಲೇ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಹಿಂದಿನ ವಾರದ ದಾಖಲೆಯನ್ನು ಮುರಿದಿದೆ.
ಜೂನ್ ಏಳರ ವಾರದಲ್ಲಿ ಹೆಚ್ಚಳವಾಗಿರುವ 4.307 ಬಿಲಿಯನ್ ಡಾಲರ್ ಫಾರೆಕ್ಸ್ ಸಂಪತ್ತಿನಲ್ಲಿ ಎಲ್ಲಾ ನಾಲ್ಕು ಆಸ್ತಿಗಳೂ ಹೆಚ್ಚಾಗಿವೆ. ವಿದೇಶೀ ಕರೆನ್ಸಿ, ಚಿನ್ನ, ಎಸ್ಡಿಆರ್, ಐಎಂಎಫ್ ರಿಸರ್ವ್ ಇವೆಲ್ಲವೂ ಹೆಚ್ಚಿವೆ. ವಿದೇಶೀ ಕರೆನ್ಸಿ ಆಸ್ತಿಯಲ್ಲಿ 3.777 ಬಿಲಿಯನ್ ಡಾಲರ್ನಷ್ಟು ಏರಿಕೆ ಆಗಿದೆ. ಗೋಲ್ಡ್ ರಿಸರ್ವ್ಸ್ 481 ಮಿಲಿಯನ್ ಡಾಲರ್ ಹೆಚ್ಚಳವಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಅಥವಾ ಎಸ್ಡಿಆರ್ಗಳು 43 ಮಿಲಿಯನ್ ಡಾಲರ್ನಷ್ಟು ಅಧಿಕಗೊಂಡಿವೆ. ಇನ್ನು, ಐಎಂಎಫ್ನೊಂದಿಗಿನ ಮೀಸಲು ನಿಧಿಯಲ್ಲಿ 10 ಮಿಲಿಯನ್ ಡಾಲರ್ ಹೆಚ್ಚಾಗಿದೆ.
ಇದನ್ನೂ ಓದಿ: ಗಂಭೀರ ಎಚ್ಚರಿಕೆ! ಉದ್ಭವಿಸಲಿದೆ ನೀರನ್ನು ಸ್ಟಾಕ್ ಮಾರ್ಕೆಟ್ನಲ್ಲಿ ಸರಕಾಗಿಸಿ ಟ್ರೇಡಿಂಗ್ ಮಾಡುವ ಪರಿಸ್ಥಿತಿ
ಒಟ್ಟು ಫಾರೆಕ್ಸ್ ನಿಧಿ: 655.817 ಬಿಲಿಯನ್ ಡಾಲರ್
ಇದು ವಿದೇಶಗಳ ಜೊತೆ ನಡೆಯುವ ವ್ಯಾಪಾರ ವಹಿವಾಟುಗಳಿಗೆ ಸಹಾಯವಾಗುತ್ತದೆ. ದೇಶದ ಹೊರಗಿನ ಬಿಕ್ಕಟ್ಟು ಅಥವಾ ಸಮಸ್ಯೆಗಳಿಂದ ವ್ಯಾಪಾರ ವಹಿವಾಟಿಗೆ ತೊಂದರೆ ಆಗದಂತೆ ಇದು ಶಾಕ್ ಅಬ್ಸಾರ್ಬರ್ ರೀತಿ ಕೆಲಸ ಮಾಡುತ್ತದೆ. ಹೆಚ್ಚು ವಿದೇಶೀ ಕರೆನ್ಸಿ ಸಂಪತ್ತು ಇದ್ದಷ್ಟೂ ಆರ್ಥಿಕತೆಗೆ ರಕ್ಷಣೆ ಗಟ್ಟಿಯಾಗಿರುತ್ತದೆ.
ಇದನ್ನೂ ಓದಿ: ಓಪನ್ ಮಾರ್ಕೆಟ್ನಲ್ಲಿ ಅದಾನಿ ಎಂಟರ್ಪ್ರೈಸಸ್ನ ಷೇರುಗಳನ್ನು ಖರೀದಿಸಿದ ಗೌತಮ್ ಅದಾನಿ
ಚೀನಾ ಅತಿಹೆಚ್ಚು ಫಾರೆಕ್ಸ್ ನಿಧಿ ಹೊಂದಿದೆ. ಜಪಾನ್, ಸ್ವಿಟ್ಜರ್ಲ್ಯಾಂಡ್ ದೇಶಗಳು ಭಾರತದಕ್ಕಿಂತ ಹೆಚ್ಚು ಫಾರೆಕ್ಸ್ ರಿಸರ್ವ್ಸ್ ಸಂಪತ್ತು ಹೊಂದಿವೆ. ಆದರೆ, ವಿಶ್ವದಲ್ಲೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಅಮೆರಿಕದಲ್ಲಿರುವ ಫಾರೆಕ್ಸ್ ರಿಸರ್ವ್ಸ್ 250 ಬಿಲಿಯನ್ ಡಾಲರ್ಗಿಂತಲೂ ಕಡಿಮೆ. ಅದಕ್ಕಿಂತ ಭಾರತದ ಬಳಿ ಎರಡು ಪಟ್ಟಿಗೂ ಹೆಚ್ಚು ವಿದೇಶೀ ಕರೆನ್ಸಿ ಸಂಗ್ರಹ ಇದೆ. ಹೆಚ್ಚಿನ ವಿದೇಶೀ ವಹಿವಾಟುಗಳು ಡಾಲರ್ ಕರೆನ್ಸಿಯಲ್ಲೇ ನಡೆಯುವುದರಿಂದ ಅಮೆರಿಕಕ್ಕೆ ವಿದೇಶೀ ಕರೆನ್ಸಿ ಆಸ್ತಿಗಳ ಅವಶ್ಯಕತೆ ತೀರಾ ಇರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ