ಓಪನ್ ಮಾರ್ಕೆಟ್ನಲ್ಲಿ ಅದಾನಿ ಎಂಟರ್ಪ್ರೈಸಸ್ನ ಷೇರುಗಳನ್ನು ಖರೀದಿಸಿದ ಗೌತಮ್ ಅದಾನಿ
Gautam Adani increases stake in Adani Enterprises: ಭಾರತದ ಎರಡನೇ ಅತಿ ಶ್ರೀಮಂತ ಎನಿಸಿರುವ ಗೌತಮ್ ಅದಾನಿ ತಮ್ಮ ಮಾಲಕತ್ವದ ಅದಾನಿ ಎಂಟರ್ಪ್ರೈಸಸ್ನಲ್ಲಿ ಷೇರುಪಾಲನ್ನು ಹೆಚ್ಚಿಸಿಕೊಂಡಿದ್ದಾರೆ. ಅದಾನಿ ಎಂಟರ್ಪ್ರೈಸಸ್ನ ಪ್ರೊಮೋಟರ್ಸ್ ಆಗಿರುವ ಅವರು, ತಮ್ಮ ಬೇರೆ ಬೇರೆ ಮೂರು ಕಂಪನಿಗಳ ಮೂಲಕ ವಿವಿಧ ಸಂದರ್ಭಗಳಲ್ಲಿ ಶೇ. 2.02ರಷ್ಟು ಷೇರುಗಳನ್ನು ಖರೀದಿ ಮಾಡಿದ್ದಾರೆ. ಇದರೊಂದಿಗೆ ಅದಾನಿ ಎಂಟರ್ಪ್ರೈಸಸ್ ಸಂಸ್ಥೆಯಲ್ಲಿ ಪ್ರೊಮೋಟರ್ಸ್ ಗ್ರೂಪ್ನ ಷೇರು ಪಾಲು ಶೇ. 73.95ಕ್ಕೆ ಏರಿದೆ.
ನವದೆಹಲಿ, ಜೂನ್ 14: ಗೌತಮ್ ಅದಾನಿ ಅವರು ತಮ್ಮ ಮಾಲಕತ್ವದ ವಿವಿಧ ಕಂಪನಿಗಳ ಮೂಲಕ ವಿವಿಧ ದಿನಗಳಲ್ಲಿ ಅದಾನಿ ಎಂಟರ್ಪ್ರೈಸಸ್ (Adani Enterprises) ಸಂಸ್ಥೆಯಲ್ಲಿನ ಹೆಚ್ಚಿನ ಷೇರುಪಾಲನ್ನು ಖರೀದಿಸಿರುವ ಸಂಗತಿ ಬಹಿರಂಗವಾಗಿದೆ. 2023ರ ಸೆಪ್ಟಂಬರ್ನಿಂದ ಆರಂಭವಾಗಿ 2024ರ ಜೂನ್ ತಿಂಗಳವರೆ ಬೇರೆ ಬೇರೆ ಸಂದರ್ಭಗಳಲ್ಲಿ ಗೌತಮ್ ಅದಾನಿ ಅವರು ಒಟ್ಟು ಶೇ. 2ರಷ್ಟು ಅದಾನಿ ಎಂಟರ್ಪ್ರೈಸಸ್ ಷೇರುಗಳನ್ನು ಖರೀದಿಸಿದ್ದಾರೆ. ಇಂದು ಶುಕ್ರವಾರ (ಜೂನ್ 14) ಷೇರು ವಿನಿಮಯ ಕೇಂದ್ರಗಳಿಗೆ ಬಿಡುಗಡೆ ಮಾಡಿದ ಹೇಳೀಕೆಯಲ್ಲಿ ಈ ವಿಚಾರವನ್ನು ತಿಳಿಸಲಾಗಿದೆ.
ಅದಾನಿ ಗ್ರೂಪ್ಗೆ ಸೇರಿದ ಇನ್ಫಿನಿಟಿ ಟ್ರೇಡ್ ಅಂಡ್ ಇನ್ವೆಸ್ಟ್ಮೆಂಟ್, ಕೆಂಪಾಸ್ ಟ್ರೇಡ್ ಅಂಡ್ ಇನ್ವೆಸ್ಟ್ಮೆಂಟ್, ಎಮರ್ಜಿಂಗ್ ಮಾರ್ಕೆಟ್ ಇನ್ವೆಸ್ಟ್ಮೆಂಟ್ ಡಿಎಂಸಿಸಿ ಕಂಪನಿಗಳ ಮೂಲಕ ಅದಾನಿ ಈ ಷೇರುಗಳನ್ನು ಖರೀದಿಸಿದ್ದಾರೆ.
ಇದನ್ನೂ ಓದಿ: ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್ನ ಲಾಕ್ ಇನ್ ಅವಧಿ ಐದರಿಂದ ಮೂರು ವರ್ಷಕ್ಕೆ ಇಳಿಸಲು ಬ್ಯಾಂಕುಗಳು ಸಜ್ಜು
2023ರ ಸೆಪ್ಟಂಬರ್ 8ರಿಂದ 12ರವರೆಗೆ ಇನ್ಫಿನಿಟಿ ಟ್ರೇಡ್ ಅಂಡ್ ಇನ್ವೆಸ್ಟ್ಮೆಂಟ್ ಶೇ. 0.68ರಷ್ಟು ಷೇರುಗಳನ್ನು ಖರೀದಿ ಮಾಡಿದೆ. 2024ರ ಮೇ 10ರಿಂದ 14ರವರೆಗೆ ಶೇ. 0.42ರಷ್ಟು ಷೇರುಗಳನ್ನು ಕೆಂಪಾಸ್ ಟ್ರೇಡ್ ಅಂಡ್ ಇನ್ವೆಸ್ಟ್ಮೆಂಟ್ ಖರೀದಿಸಿದೆ. 2024ರ ಮೇ 21ರಿಂದ ಜೂನ್ 12ರವರೆಗೆ ಎಮರ್ಜಿಂಗ್ ಮಾರ್ಕೆಟ್ ಇನ್ವೆಸ್ಟ್ಮೆಂಟ್ ಕಂಪನಿ ಶೇ. 0.92ರಷ್ಟು ಷೇರುಗಳನ್ನು ಕೊಂಡುಕೊಂಡಿದೆ. ಒಟ್ಟಾರೆ ಶೇ. 2.02ರಷ್ಟು ಷೇರುಗಳನ್ನು ಅದಾನಿ ಗಿಟ್ಟಿಸಿಕೊಂಡಿದ್ದಾರೆ.
ಮೂರು ಬಾರಿ ನಡೆದ ಈ ಖರೀದಿ ಬಳಿಕ ಅದಾನಿ ಎಂಟರ್ಪ್ರೈಸಸ್ ಸಂಸ್ಥೆಯಲ್ಲಿ ಪ್ರೊಮೋಟರ್ಸ್ ಗ್ರೂಪ್ನವರಿಗೆ ಇರುವ ವೋಟಿಂಗ್ ಕ್ಯಾಪಿಟಲ್ ಶೇ. 73.95ಕ್ಕೆ ಏರಿದೆ. ಇಲ್ಲಿ ವೋಟಿಂಗ್ ಕ್ಯಾಪಿಟಲ್ ಎಂದರೆ ವೋಟಿಂಗ್ ಹಕ್ಕು ಇರುವ ಷೇರುಗಳ ಪ್ರಮಾಣವಾಗಿದೆ.
ಇದನ್ನೂ ಓದಿ: 10,422 ಕೋಟಿ ರೂಗೆ ಪೆನ್ನಾ ಸಿಮೆಂಟ್ಸ್ ಖರೀದಿಸಲಿರುವ ಅಂಬುಜಾ ಸಿಮೆಂಟ್ಸ್; ಅದಾನಿ ಕಂಪನಿ ಷೇರು ಏರುಗತಿಯಲ್ಲಿ
ಕುತೂಹಲ ಎಂದರೆ, 2022ರ ಜನವರಿಯಲ್ಲಿ ಹಿಂಡನ್ಬರ್ಗ್ ರಿಸರ್ಚ್ ವರದಿ ಬಂದ ಬಳಿಕ ಅದಾನಿ ಎಂಟರ್ಪ್ರೈಸಸ್ ಅನ್ನೂ ಒಳಗೊಂಡಂತೆ ಅದಾನಿ ಗ್ರೂಪ್ನ ಎಲ್ಲಾ ಕಂಪನಿಗಳ ಷೇರುಬೆಲೆ ಪಾತಾಳಕ್ಕೆ ಬಿದ್ದಿದ್ದವು. ನಂತರದ ದಿನಗಳಲ್ಲಿ ಅದಾನಿ ಗ್ರೂಪ್ ಪ್ರಯಾಸಕರ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದೆ. ಅದಾನಿ ಉದ್ಯಮ ಸಾಮ್ರಾಜ್ಯ ವಿಸ್ತರಿಸುತ್ತಲೇ ಇರುವುದು ಷೇರುಗಳ ಬೇಡಿಕೆ ಇಳಿಯದಂತೆ ನೋಡಿಕೊಳ್ಳಲು ಸಾಧ್ಯವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ