AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10,422 ಕೋಟಿ ರೂಗೆ ಪೆನ್ನಾ ಸಿಮೆಂಟ್ಸ್ ಖರೀದಿಸಲಿರುವ ಅಂಬುಜಾ ಸಿಮೆಂಟ್ಸ್; ಅದಾನಿ ಕಂಪನಿ ಷೇರು ಏರುಗತಿಯಲ್ಲಿ

Ambuja cements to acquire Penna Cements: ಅದಾನಿ ಗ್ರೂಪ್​ನ ಅಂಬುಜಾ ಸಿಮೆಂಟ್ಸ್ ಹೈದರಾಬಾದ್ ಮೂಲದ ಪೆನ್ನಾ ಸಿಮೆಂಟ್ಸ್ ಕಂಪನಿಯನ್ನು ಖರೀದಿಸಲಿದೆ. 10,422 ಕೋಟಿ ರೂಗೆ ಬೈಂಡಿಂಗ್ ಅಗ್ರೀಮೆಂಟ್ ಆಗಿದೆ. ಪೆನ್ನಾ ಸಿಮೆಂಟ್ಸ್ ಖರೀದಿ ಬಳಿಕ ಅದಾನಿ ಗ್ರೂಪ್​ನ ಸಿಮೆಂಟ್ ಉತ್ಪಾದನಾ ಸಮಾರ್ಥ್ಯ ವರ್ಷಕ್ಕೆ 89 ಮಿಲಿಯನ್ ಟನ್​ಗೆ ಏರುತ್ತದೆ. ಸಿಮೆಂಟ್ ಕ್ಷೇತ್ರದಲ್ಲಿ ಅದಾನಿ ಗ್ರೂಪ್ ಹಿಡಿತ ಕ್ರಮೇಣ ಹೆಚ್ಚುತ್ತಿದೆ. ಪೆನ್ನಾ ಸಿಮೆಂಟ್ಸ್ ಸಂಸ್ಥೆ ಪಿ ಪ್ರತಾಪ್ ರೆಡ್ಡಿ ಅವರಿಗೆ ಸೇರಿದ್ದಾಗಿದೆ.

10,422 ಕೋಟಿ ರೂಗೆ ಪೆನ್ನಾ ಸಿಮೆಂಟ್ಸ್ ಖರೀದಿಸಲಿರುವ ಅಂಬುಜಾ ಸಿಮೆಂಟ್ಸ್; ಅದಾನಿ ಕಂಪನಿ ಷೇರು ಏರುಗತಿಯಲ್ಲಿ
ಅಂಬುಜಾ ಸಿಮೆಂಟ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 14, 2024 | 11:04 AM

Share

ಮುಂಬೈ, ಜೂನ್ 14: ಅದಾನಿ ಗ್ರೂಪ್​ಗೆ ಸೇರಿದ ಅಂಬುಜಾ ಸಿಮೆಂಟ್ಸ್ ಮಹತ್ತರ ಡೀಲ್ ಮಾಡಿಕೊಳ್ಳುತ್ತಿದೆ. ಹೈದರಾಬಾದ್ ಮೂಲದ ಪೆನ್ನಾ ಸಿಮೆಂಟ್ ಇಂಡಸ್ಟ್ರೀಸ್ ಸಂಸ್ಥೆಯನ್ನು (PCIL) ಅಂಬುಜಾ ಸಿಮೆಂಟ್ಸ್ ಖರೀದಿಸಲಿದೆ. ವರದಿಗಳ ಪ್ರಕಾರ 10,422 ಕೋಟಿ ರೂಗೆ ಖರೀದಿಸಲು ಒಪ್ಪಂದ ಆಗಿದೆ. ಪೆನ್ನಾ ಸಿಮೆಂಟ್ಸ್​ನ ಎಲ್ಲಾ ಷೇರುಗಳನ್ನು ಈ ಬೆಲೆಗೆ ಖರೀದಿಸಲಾಗುತ್ತಿದೆ. ಇದರೊಂದಿಗೆ ಅದಾನಿ ಗ್ರೂಪ್​ನ ಒಟ್ಟಾರೆ ಸಿಮೆಂಟ್ ಉತ್ಪಾದನೆ ಸಾಮರ್ಥ್ಯ ವರ್ಷಕ್ಕೆ 89 ಮಿಲಿಯನ್ ಟನ್​ಗೆ ಏರಿದಂತಾಗುತ್ತದೆ.

ಪಿ ಪ್ರತಾಪ್ ರೆಡ್ಡಿ ಮತ್ತು ಕುಟುಂಬದ (P Pratap Reddy and family) ಒಡೆತನ ಇರುವ ಪೆನ್ನಾ ಸಿಮೆಂಟ್ಸ್ ಸಂಸ್ಥೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ಸಿಮೆಂಟ್ ತಯಾರಕಾ ಘಟಕಗಳನ್ನು ಹೊಂದಿದೆ. ಇಲ್ಲಿ ಒಟ್ಟು 14 ಎಂಟಿಪಿಎ ಉತ್ಪಾದನಾ ಸಾಮರ್ಥ್ಯ ಇದೆ. ರಾಜಸ್ಥಾನದ ಜೋಧಪುರ್​ನಲ್ಲಿನ ಘಟಕದಲ್ಲಿ ಹೆಚ್ಚುವರಿ ಸಿಮೆಂಟ್ ಕ್ಲಿಂಕರ್​ಗಳಿವೆ. ಇದರಿಂದ ಇನ್ನಷ್ಟು ಹೆಚ್ಚುವರಿ 3 ಮಿಲಿಯನ್ ಟನ್ ಸಿಮೆಂಟ್ ಉತ್ಪಾದನೆ ಸಾಧ್ಯವಾಗುತ್ತದೆ.

ಪೆನ್ನಾ ಸಿಮೆಂಟ್ಸ್ ಅನ್ನು ಅಂಬುಜಾ ಸಿಮೆಂಟ್ಸ್ ಖರೀದಿಸುತ್ತಿರುವುದು ಅದಾನಿ ಗ್ರೂಪ್​ನ ಒಟ್ಟಾರೆ ಬಿಸಿನೆಸ್​ಗೆ ಒಳ್ಳೆಯ ಅನುಕೂಲವಾಗಲಿದೆ. ಕೋಲ್ಕತಾ, ಗೋಪಾಲಪುರ್, ಕಾರೈಕಲ್, ಕೊಚ್ಚಿ ಮತ್ತು ಕೊಲಂಬೋದಲ್ಲಿ ಒಟ್ಟು ಐದು ಬೃಹತ್ ಸಿಮೆಂಟ್ ಟರ್ಮಿನಲ್ ಅಥವಾ ಸಂಗ್ರಹಾಗಾರ ಹೊಂದಿದೆ. ಪೆನ್ನಾ ಸಿಮೆಂಟ್ಸ್ ಖರೀದಿ ಬಳಿಕ ಸಿಮೆಂಟ್ ಮಾರುಕಟ್ಟೆ ಮತ್ತು ಸಾಗಣೆ ಕ್ಷೇತ್ರದಲ್ಲಿ ಅದಾನಿ ಗ್ರೂಪ್​ನ ಹಿಡಿತ ಹೆಚ್ಚಲಿದೆ. ಭಾರತದ ಸಿಮೆಂಟ್ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಪಾಲು ಶೇ. 2ರಷ್ಟು ಹೆಚ್ಚಾಗಲಿದೆ.

ಇದನ್ನೂ ಓದಿ: 2023-24ರಲ್ಲಿ ಸರ್ಕಾರಿ ಉದ್ದಿಮೆಗಳ ಒಟ್ಟು ಲಾಭ 5 ಲಕ್ಷ ಕೋಟಿ ರೂ; ಹೊಸ ಮೈಲಿಗಲ್ಲು

ಅಂಬುಜಾ ಸಿಮೆಂಟ್ಸ್ ಮೂಲತಃ ಅದಾನಿ ಗ್ರೂಪ್​ನಿಂದ ಆರಂಭಿಸಿದ್ದಲ್ಲ. 1983ರಲ್ಲಿ ಸುರೇಶ್ ಕುಮಾರ್ ನೇಯೋತಿಯಾ ಮತ್ತು ನರೋತ್ತಮ್ ಶೇಖಸರಿಯಾ ಎಂಬುವವರು ಇದರ ಸಂಸ್ಥಾಪಕರು. 2006ರಲ್ಲಿ ವಿಶ್ವದ ಎರಡನೇ ಅತಿದೊಡ್ಡ ಸಿಮೆಂಟ್ ಉತ್ಪಾದಕ ಸಂಸ್ಥೆಯಾದ ಸ್ವಿಟ್ಜರ್​ಲ್ಯಾಂಡ್ ಮೂಲದ ಹೋಲ್​ಸಿಮ್ ಮತ್ತು ಅಂಬುಜಾ ಸಿಮೆಂಟ್ಸ್ ಮಧ್ಯೆ ಒಪ್ಪಂದವಾಯಿತು. 2022ರಷ್ಟರಲ್ಲಿ ಅಂಬುಜಾ ಸಿಮೆಂಟ್ಸ್​ನಲ್ಲಿ ಹೋಲ್​ಸಿಮ್ ಪಾಲು ಶೇ. 61.62ರಷ್ಟಿತ್ತು. ಬಳಿಕ ಭಾರತದ ಸಿಮೆಂಟ್ ಮಾರುಕಟ್ಟೆಯಿಂದ ಹೊರಬೀಳಲು ಸ್ವಿಸ್ ಕಂಪನಿ ನಿರ್ಧರಿಸಿತು. ಈ ವೇಳೆ ಹೋಲ್​ಸಿಮ್​ನಿಂದ ಎಲ್ಲಾ ಪಾಲನ್ನು ಅದಾನಿ ಗ್ರೂಪ್ ಖರೀದಿಸಿತು. ಈ ಮೂಲಕ ಅಂಬುಜಾ ಸಿಮೆಂಟ್ಸ್ ಅದಾನಿ ಗ್ರೂಪ್​ನ ಪಾಲಾಯಿತು.

ಈಗ ಪೆನ್ನಾ ಸಿಮೆಂಟ್ಸ್ ಖರೀದಿ ಬಳಿಕ ಅಂಬುಜಾ ಸಿಮೆಂಟ್ಸ್​ನ ಷೇರುಬೆಲೆ ಏರತೊಡಗಿದೆ. ಕಳೆದ ಆರೇಳು ತಿಂಗಳಲ್ಲಿ ಅದರ ಷೇರುಬೆಲೆ ಶೇ. 50ಕ್ಕೂ ಹೆಚ್ಚಾಗಿರುವುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ