ನವದೆಹಲಿ, ನವೆಂಬರ್ 30: ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ ಆದ ಜುಲೈನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ಭಾರತದ ಆರ್ಥಿಕತೆ (Indian economy) ಶೇ. 7.6ರಷ್ಟು ಬೆಳೆದಿದೆ. ಸರ್ಕಾರ ಇಂದು ಗುರುವಾರ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದಲ್ಲಿ (NSO report) ಇದು ಬಹಿರಂಗವಾಗಿದೆ. ಕಳೆದ ವರ್ಷದ ಎರಡನೇ ಕ್ವಾರ್ಟರ್ನಲ್ಲಿ (Q2 24FY ಜಿಡಿಪಿ ಶೇ. 6.2ರಷ್ಟು ಬೆಳೆದಿತ್ತು. ಈ ವರ್ಷ ಇಷ್ಟು ಮಟ್ಟಕ್ಕೆ ಜಿಡಿಪಿ ಬೆಳೆಯುತ್ತದೆ ಎಂದು ಯಾವ ಆರ್ಥಿಕ ತಜ್ಞರೂ ನಿರೀಕ್ಷಿಸಿರಲಿಲ್ಲ. ಆರ್ಬಿಐ ಮತ್ತು ಸರ್ಕಾರ ಕೂಡ ಇದನ್ನು ನಿರೀಕ್ಷಿಸಿರಲಿಲ್ಲ.
ಕೆಲ ದಿನಗಳ ಹಿಂದೆ ರಾಯ್ಟರ್ಸ್ ನಡೆಸಿದ ಸಮೀಕ್ಷೆಯಲ್ಲಿ ವಿವಿಧ ಆರ್ಥಿಕ ತಜ್ಞರು ಎರಡನೇ ಕ್ವಾರ್ಟರ್ನಲ್ಲಿ ಭಾರತದ ಜಿಡಿಪಿ ಬೆಳೆಯಬಹುದು ಎಂದು ಮಾಡಿದ್ದ ಅಂದಾಜು ಶೇ. 6.5ರಿಂದ ಶೇ. 7.1ರವರೆಗೆ ಇತ್ತು. ಆದರೆ ಎಲ್ಲರ ಲೆಕ್ಕಾಚಾರ ಮೀರಿಸುವಂತೆ ಎರಡನೇ ಕ್ವಾರ್ಟರ್ನಲ್ಲಿ ಆರ್ಥಿಕತೆ ಬೆಳೆದಿದೆ. ಸತತ ಎರಡು ಕ್ವಾರ್ಟರ್ ಅವಧಿಯಲ್ಲಿ ಜಿಡಿಪಿ ಶೇ. 7ಕ್ಕಿಂತಲೂ ಮೇಲಿದ್ದಂತಾಗಿದೆ. ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಭಾರತದ ಜಿಡಿಪಿ ಶೇ. 7.8ರಷ್ಟು ಬೆಳೆದಿತ್ತು.
ಇದನ್ನೂ ಓದಿ: ಯಾವುದನ್ನೂ ಕೂಡ ಉಚಿತವಾಗಿ ಕೊಡಬಾರದು; ಸಬ್ಸಿಡಿ ಪಡೆಯುವವರಿಗೂ ಹೊಣೆಗಾರಿಕೆ ಬೇಕು: ನಾರಾಯಣಮೂರ್ತಿ
ಇನ್ನು ಬೇರೆ ದೇಶಗಳಿಗೆ ತುಲನೆ ಮಾಡುವುದಾದರೆ, ಜುಲೈನಿಂದ ಸೆಪ್ಟೆಂಬರ್ವರೆಗಿನ ಕ್ವಾರ್ಟರ್ನಲ್ಲಿ ಅಮೆರಿಕದ ಆರ್ಥಿಕತೆ ಶೇ. 5.2ರಷ್ಟು ಬೆಳೆದರೆ, ಚೀನಾದ ಜಿಡಿಪಿ ಬೆಳೆದಿರುವುದು ಶೇ. 4.9ರಷ್ಟು ಮಾತ್ರ. ಪ್ರಮುಖ ಆರ್ಥಿಕತೆಯ ದೇಶಗಳ ಪೈಕಿ ಭಾರತದ ಬೆಳವಣಿಗೆಯೇ ಅಧಿಕವಾಗಿದೆ.
ಭಾರತದ ಜಿಡಿಪಿ ವೃದ್ಧಿಯಲ್ಲಿ ಉತ್ಪಾದನಾ ವಲಯ ಪ್ರಮುಖ ಪಾತ್ರ ವಹಿಸಿದೆ. ಈ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಎರಡನೇ ಕ್ವಾರ್ಟರ್ನಲ್ಲಿ ಶೇ. 13.9ರಷ್ಟು ವೃದ್ಧಿ ಕಂಡಿದೆ. ಕಳೆದ ವರ್ಷದ ಇದೇ ಕ್ವಾರ್ಟರ್ನಲ್ಲಿ ಈ ಕ್ಷೇತ್ರದ ಬೆಳವಣಿಗೆ ಶೇ. 3.8ರಷ್ಟು ಕುಂಠಿತಗೊಂಡಿತ್ತು. ಅಂದರೆ, ಮೈನಸ್ ಶೇ. 3.8ರಷ್ಟಿತ್ತು. ಈಗ ಒಂದು ರೀತಿಯಲ್ಲಿ ಹೈಜಂಪ್ ಆಗಿದೆ. ಸರ್ಕಾರ ಪಿಎಲ್ಐ ಸ್ಕೀಮ್ ಅನ್ನು ಆಕ್ರಮಣಕಾರಿಯಾಗಿ ನಡೆಸುತ್ತಿರುವುದು ಇದಕ್ಕೆ ಕಾರಣ ಇರಬಹುದು.
ಇದನ್ನೂ ಓದಿ: ಬೈಜುಸ್ ಗಾಯಕ್ಕೆ ಬರೆ; 22 ಬಿಲಿಯನ್ ಡಾಲರ್ ಇದ್ದ ಮೌಲ್ಯ ಈಗ 3 ಬಿಲಿಯನ್ ಮಟ್ಟಕ್ಕಿಂತಲೂ ಕಡಿಮೆ
ಆದರೆ, ಸೆಪ್ಟೆಂಬರ್ ಅಂತ್ಯದ ಈ ಎರಡನೇ ಕ್ವಾರ್ಟರ್ನಲ್ಲಿ ಹಿನ್ನಡೆ ಕಂಡಿದ್ದು ಕೃಷಿ ವಲಯ. ಕಳೆದ ವರ್ಷದ ಎರಡನೇ ಕ್ವಾರ್ಟರ್ನಲ್ಲಿ ಶೇ. 2.5ರಷ್ಟು ಬೆಳೆದಿದ್ದ ಕೃಷಿ ಸೆಕ್ಟರ್ ಈ ಬಾರಿ ಬೆಳೆದಿರುವುದು ಶೇ. 1.2ರಷ್ಟು ಮಾತ್ರವೇ.
ಭಾರತದ ಎಂಟು ಪ್ರಮುಖ ಇನ್ಫ್ರಾಸ್ಟ್ರಕ್ಚರ್ ಸೆಕ್ಟರ್ಗಳ ಉತ್ಪಾದನೆ ಅಕ್ಟೋಬರ್ ತಿಂಗಳಲ್ಲಿ ಶೇ. 12.1ರಷ್ಟು ಹೆಚ್ಚಿದೆ. 2022ರ ಅಕ್ಟೋಬರ್ನಲ್ಲಿ ಈ 8 ಸೆಕ್ಟರ್ಗಳ ಸರಾಸರಿ ಬೆಳವಣಿಗೆ ಶೇ. 0.7ರಷ್ಟು ಮಾತ್ರ ಇತ್ತು. ಕಲ್ಲಿದ್ದಲು, ಕಚ್ಛಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್, ಇವುಗಳು ಎಂಟು ಕೋರ್ ಸೆಕ್ಟರ್ಗಳೆಂದು ಪರಿಗಣಿತವಾಗಿವೆ. ಇವುಗಳು ಸೆಪ್ಟೆಂಬರ್ ತಿಂಗಳಲ್ಲಿ ಶೇ. 9.2ರಷ್ಟು ಬೆಳೆದಿದ್ದವು. ಅಕ್ಟೋಬರ್ನಲ್ಲಿ ಇವು ಇನ್ನೂ ಹೆಚ್ಚು ಬೆಳೆದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ