ವಿಶ್ವಕ್ಕೆ ಫ್ಯಾಕ್ಟರಿಯಾಗಲು ಭಾರತಕ್ಕೆ ಅಪೂರ್ವ ಅವಕಾಶ; ಆದರೆ, ಚೀನಾ ವಿಚಾರದಲ್ಲಿ ಈ ತಪ್ಪು ಬೇಡ ಎಂದ ಜಾನ್ಸನ್
Supply Chain strategist Cameron Johnson on manufacturing in India: ಮ್ಯಾನುಫ್ಯಾಕ್ಚರಿಂಗ್ ಅನ್ನು ದೊಡ್ಡ ಮಟ್ಟದಲ್ಲಿ ಮಾಡುವ ಸಾಮರ್ಥ್ಯ ಚೀನಾ ಬಿಟ್ಟರೆ ಇರುವುದು ಭಾರತಕ್ಕೆ ಮಾತ್ರವೇ. ವಿಶ್ವದ ಫ್ಯಾಕ್ಟರಿಯಾಗುವ ಯೋಗ ಭಾರತಕ್ಕೆ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶ ಎಂದು ಕ್ಯಾಮರಾನ್ ಜಾನ್ಸನ್ ಹೇಳಿದ್ದಾರೆ. ಅಸೆಂಬ್ಲಿಂಗ್ ಮಾತ್ರವೇ ಮಾಡದೆ ಇಡೀ ಉತ್ಪಾದನಾ ಇಕೋಸಿಸ್ಟಂ ಅನ್ನು ದೇಶದೊಳಗೇ ನಿರ್ಮಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 2: ಭಾರತ ಈ ವಿಶ್ವದ ಮುಂದಿನ ದೊಡ್ಡ ಮ್ಯಾನುಫ್ಯಾಕ್ಚರಿಂಗ್ ಕೇಂದ್ರವಾಗಿ ಹೊರಹೊಮ್ಮದು. ಅಂತದ್ದೊಂದು ಸಂದರ್ಭ ಬಂದಿದೆ. ಇದು ಜೀವಿತಾವಧಿಯಲ್ಲಿ ಒಮ್ಮೆ ಸಿಗುವ ಅಪೂರ್ವ ಅವಕಾಶ ಎಂದು ಜಾಗತಿಕ ಸರಬರಾಜು ಸರಪಳಿ (global supply chain) ವಿಚಾರದ ಪರಿಣಿತರಾದ ಕ್ಯಾಮರಾನ್ ಜಾನ್ಸನ್ (Cameron Johnson) ಹೇಳಿದ್ದಾರೆ. ಹಾಗೆಯೇ, ಭಾರತವು ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿ ರೂಪುಗೊಳ್ಳಬೇಕಾದರೆ ಚೀನಾ (China) ಜೊತೆ ಬೆಲೆ ಸಮರದಲ್ಲಿ ಸ್ಪರ್ಧೆ ಮಾಡುವ ಪ್ರಯತ್ನದಿಂದ ದೂರ ಉಳಿಯಬೇಕು ಎಂದೂ ಎಚ್ಚರಿಸಿದ್ದಾರೆ.
ಎಲಾರಾ ಇಂಡಿಯಾ ಸಂವಾದ- ಅಶ್ವಮೇಧ 2025 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕ್ಯಾಮರಾನ್ ಜಾನ್ಸನ್, ಭಾರತದಲ್ಲಿ ಪ್ರಬಲವಾದ ಸರಬರಾಜು ಸರಪಳಿ ವ್ಯವಸ್ಥೆ ರೂಪಿಸುವ ಅವಶ್ಯಕತೆಯನ್ನು ಮನವರಿಕೆ ಮಾಡಲು ಯತ್ನಿಸಿದ್ದಾರೆ.
‘ನೀವು ಚೀನಾವನ್ನು ಸ್ಪರ್ಧೆಯಲ್ಲಿ ಸೋಲಿಸಲು ಯತ್ನಿಸಬೇಕಿಲ್ಲ. ಉತ್ಪನ್ನಗಳನ್ನು ಅಸೆಂಬಲ್ ಮಾತ್ರ ಮಾಡದೆ, ಇಡೀ ಇಕೋಸಿಸ್ಟಂಗಳನ್ನೇ ನಿರ್ಮಿಸುವ ಅಗತ್ಯವಿದೆ’ ಎಂದು ಹೇಳಿದ ಅವರು, ಪ್ರಬಲ ಸಪ್ಲೈ ಚೈನ್ ವ್ಯವಸ್ಥೆ ನಿರ್ಮಿಸಲು ಐದು ಅಂಶಗಳ ಫ್ರೇಮ್ವರ್ಕ್ನ ಸಲಹೆ ನೀಡಿದ್ದಾರೆ. ಅವುಗಳು ಈ ಕೆಳಕಂಡಂತಿವೆ:
- ಸುಧಾರಿತ ಮೂಲ ಸೌಕರ್ಯ
- ಕೌಶಲ್ಯವಂತ ಪ್ರತಿಭೆ ಮತ್ತು ಶಿಕ್ಷಣ
- ಸರ್ಕಾರದ ಬೆಂಬಲ
- ಕಚ್ಚಾ ಸಾಮಗ್ರಿ ಸಂಸ್ಕರಣೆ
- ತಂತ್ರಜ್ಞಾನ ಅಳವಡಿಕೆ
ಇದನ್ನೂ ಓದಿ: ಅಮೆರಿಕದಿಂದ ಭಾರತಕ್ಕೆ ಜಾಸ್ತಿ ಲಾಭವಾ? ಭಾರತದಿಂದ ಅಮೆರಿಕಕ್ಕೆ ಹೆಚ್ಚು ಲಾಭವಾ? ಇಲ್ಲಿದೆ ಕಣ್ಣಿಗೆ ಕಾಣದ ಸತ್ಯ
ಕಳೆದ ಐದು ವರ್ಷದಲ್ಲಿ ಜಾಗತಿಕ ಸಪ್ಲೈ ಚೈನ್ಗಳು ಮರು ರಚನೆಯಾಗುತ್ತಿವೆ. ಚೀನಾದಿಂದ ಹೊರಗೆ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಂ ವಿಸ್ತರಿಸುವುದು, ರಾಷ್ಟ್ರೀಯ ಭದ್ರತೆಗಿರುವ ಅಪಾಯ, ಎರಡನೇ ವಿಶ್ವ ಮಹಾಯುದ್ಧದ ನಂತರದ ವ್ಯಾಪಾರ ಕ್ರಮದ ಅವನತಿ, ಈ ಅಂಶಗಳು ಸರಬರಾಜು ಸರಪಳಿ ವ್ಯವಸ್ಥೆಯಲ್ಲಿನ ಬದಲಾವಣೆಗೆ ಕಾರಣವಾಗಿವೆ. ಕ್ಯಾಮರಾನ್ ಜಾನ್ಸನ್ ಪ್ರಕಾರ ಈ ಸಪ್ಲೈ ಚೈನ್ ಇಕೋಸಿಸ್ಟಂ ಬದಲಾವಣೆಯು ಭಾರತಕ್ಕೆ ಹೊಸ ಅವಕಾಶ ಕಲ್ಪಿಸುತ್ತಿವೆ. ಹಾಗೆಯೇ, ಪ್ರಬಲ ಸವಾಲುಗಳೂ ಇವೆ.
ಅಮೆರಿಕ ವಿಧಿಸಿರುವ ಟ್ಯಾರಿಫ್ಗಳು ಭಾರತದ ರಫ್ತನ್ನು ಕುಂಠಿತಗೊಳಿಸಬಹುದು. 2030ರೊಳಗೆ ಭಾರತ ರಫ್ತಿನಲ್ಲಿ 30-40 ಬಿಲಿಯನ್ ಡಾಲರ್ನಷ್ಟು ಇಳಿಕೆ ಆಗಬಹುದು. ಅಮೆರಿಕಕ್ಕೆ ಭಾರತದಿಂದ ಸರಬರಾಜಾಗುವ ಅರ್ಧದಷ್ಟು ರಫ್ತುಗಳಿಗೆ ಟ್ಯಾರಿಫ್ ಕಂಟಕ ಇದೆ ಎಂದು ಜಾನ್ಸನ್ ಎಚ್ಚರಿಸಿದ್ಧಾರೆ.
ಇದನ್ನೂ ಓದಿ: ಟ್ಯಾರಿಫ್ ಗದ್ದಲಗಳ ಮಧ್ಯೆ ಅಮೆರಿಕದೊಂದಿಗೆ ಟ್ರೇಡ್ ಡೀಲ್ಗೆ ಮಾತುಕತೆ ಪುನಾರಂಭಿಸಿದ ಭಾರತ
ಇದೇ ವೇಳೆ, ಭಾರತಕ್ಕೆ ರಚನಾತ್ಮಕವಾದ ಅನುಕೂಲಗಳಿವೆ ಎಂದು ಜಾನ್ಸನ್ ಅಭಿಪ್ರಾಯಪಟ್ಟಿದ್ದಾರೆ. ಎಂಜಿನಿಯರುಗಳ ಸಂಖ್ಯೆ ಹೆಚ್ಚಿರುವುದು, ಇಂಗ್ಲೀಷ್ ಬಲ್ಲಂತಹ ಮಾನವ ಸಂಪನ್ಮೂಲಗಳು, ಸ್ಪರ್ಧಾತ್ಮಕ ಬೆಲೆ, ಪಾಶ್ಚಿಮಾತ್ಯ ದೇಶಗಳ ರೀತಿಯ ಕಾನೂನು ವ್ಯವಸ್ಥೆ, ಸರ್ಕಾರದಿಂದ ಉತ್ತೇಜನ, ಈ ಅಂಶಗಳು ಇತರ ಹಲವು ದೇಶಗಳಿಗೆ ಇಲ್ಲ ಎನ್ನುತ್ತಾರೆ ಜಾನ್ಸನ್.
‘ಹಳೆಯ ನಾಯಕರಾದ ಜಪಾನ್, ಕೊರಿಯಾ, ಅಮೆರಿಕ, ಯೂರೋಪ್ನದ್ದು ಗತ ವೈಭವ. ಚೀನಾ ಬಿಟ್ಟರೆ ಉತ್ಪಾದನೆಯನ್ನು ದೊಡ್ಡ ಮಟ್ಟದಲ್ಲಿ ಮಾಡಬಲ್ಲ ಸಾಮರ್ಥ್ಯ ಇರುವುದು ಭಾರತಕ್ಕೆ ಮಾತ್ರ. ಈ ಅವಕಾಶ ತೆರೆದಿದೆಯಾದರೂ ಇದು ಖಾಯಂ ಆಗಿ ಇರುವುದಿಲ್ಲ’ ಎಂದು ಟೈಡಲ್ವೇವ್ ಸಲ್ಯೂಶನ್ಸ್ನ ಪಾರ್ಟ್ನರ್ ಕೂಡ ಆಗಿರುವ ಕ್ಯಾಮರಾನ್ ಜಾನ್ಸನ್ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




