India vs China: ಎಮರ್ಜಿಂಗ್ ದೇಶಗಳ ಪೈಕಿ ಇಂಡಿಯಾ ಮಿಂಚು; ಹೂಡಿಕೆ ಆಕರ್ಷಣೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ

|

Updated on: Jul 10, 2023 | 4:41 PM

Invesco Global Sovereign Asset Management Study: 85 ಸಾವರೀನ್ ವೆಲ್ತ್ ಫಂಡ್ ಮತ್ತು 57 ಸೆಂಟ್ರಲ್ ಬ್ಯಾಂಕ್​ಗಳ ಅಭಿಪ್ರಾಯ ಬಳಸಿ ಇನ್ವೆಸ್ಕೋ ನಡೆಸಿದ ಅಧ್ಯಯನವೊಂದರ ಪ್ರಕಾರ ಎಮರ್ಜಿಂಗ್ ದೇಶಗಳ ಪೈಕಿ ಚೀನಾಗಿಂತ ಭಾರತದಲ್ಲಿ ಹೂಡಿಕೆ ಮಾಡಲು ಹೆಚ್ಚಿನವರು ಒಲವು ತೋರಿದ್ದಾರೆ.

India vs China: ಎಮರ್ಜಿಂಗ್ ದೇಶಗಳ ಪೈಕಿ ಇಂಡಿಯಾ ಮಿಂಚು; ಹೂಡಿಕೆ ಆಕರ್ಷಣೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ
ಭಾರತದ ಆರ್ಥಿಕತೆ
Follow us on

ನವದೆಹಲಿ: ಬದಲಾಗತ್ತಿರುವ ಜಾಗತಿಕ ಆರ್ಥಿಕ ವಾತಾವರಣದಲ್ಲಿ ಭಾರತ ಕಮಲದ ರೀತಿಯಲ್ಲಿ ಅರಳುತ್ತಿದೆ. ಎಮರ್ಜಿಂಗ್ ಮಾರುಕಟ್ಟೆಯಲ್ಲಿ, ಅಂದರೆ ಉದಯೋನ್ಮುಖ ಆರ್ಥಿಕತೆಯ ದೇಶಗಳ ಪೈಕಿ ಹೂಡಿಕೆದಾರರಿಗೆ ಭಾರತವೇ ನೆಚ್ಚಿನ ಸ್ಥಳವಾಗಿದೆ. ಇನ್ವೆಸ್ಕೋ ಗ್ಲೋಬಲ್ ಸಾವರೀನ್ ಅಸೆಟ್ ಮ್ಯಾನೇಜ್ಮೆಂಟ್ ಸ್ಟಡಿ (Invesco Global Sovereign Asset Management Study) ಬಿಡುಗಡೆ ಮಾಡಿದ ವರದಿಯಲ್ಲಿ ಎಮರ್ಜಿಂಗ್ ಮಾರುಕಟ್ಟೆಯಲ್ಲಿ ಭಾರತಕ್ಕಿರುವ ಪ್ರಾಶಸ್ತ್ಯ ವ್ಯಕ್ತವಾಗಿದೆ. 85 ಸಾವರೀನ್ ವೆಲ್ತ್ ಫಂಡ್ ಮತ್ತು 57 ಸೆಂಟ್ರಲ್ ಬ್ಯಾಂಕ್​ಗಳ ಅಭಿಪ್ರಾಯಗಳನ್ನು ಈ ಅಧ್ಯಯನದಲ್ಲಿ ಕಲೆ ಹಾಕಲಾಗಿದ್ದು, ಎಮರ್ಜಿಂಗ್ ಮಾರುಕಟ್ಟೆಗಳಲ್ಲಿ ಭಾರತ ಮೊದಲ ಸ್ಥಾನ ಪಡೆದಿದೆ. ಹಿಂದಿನ ವರ್ಷದಲ್ಲಿ (2022) ಶೇ. 66ರಷ್ಟು ಪ್ರಾಶಸ್ತ್ಯ ಹೊಂದಿದ್ದ ಭಾರತಕ್ಕೆ ಅದರ ಪ್ರಮಾಣ ಈ ಬಾರಿ ಶೇ. 76ಕ್ಕೆ ಏರಿದೆ. ಕಳೆದ ವರ್ಷ ಶೇ. ಚೀನಾದ ಪ್ರಾಶಸ್ತ್ಯ ಶೇ. 71ರಿಂದ ಶೇ. 51ಕ್ಕೆ ಇಳಿದಿದೆ. ರಷ್ಯಾಗೂ ಇದ್ದ ಪ್ರಾಶಸ್ತ್ಯ ಒಂದಂಕಿ ಪ್ರತಿಶತಕ್ಕೆ ಇಳಿದಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ (2023) ಹೂಡಿಕೆದಾರರ ಆದ್ಯತೆ ಹೆಚ್ಚಿಸಿಕೊಂಡಿರುವ ಅಭಿವೃದ್ಧಿಶೀಲ ದೇಶಗಳಲ್ಲಿ ಭಾರತ, ಇಂಡೋನೇಷ್ಯಾ, ಮೆಕ್ಸಿಕೋ, ಬ್ರೆಜಿಲ್ ಮತ್ತು ಸೌತ್ ಆಫ್ರಿಕಾ ಇವೆ. ಇಂಡೋನೇಷ್ಯಾ ಅತಿಹೆಚ್ಚಳ ಕಂಡಿದೆ.

ಇನ್ವೆಸ್ಕೋ ಅಧ್ಯಯನದ ಪ್ರಕಾರ ಎಮರ್ಜಿಂಗ್ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಒಲವು ಯಾರತ್ತ?

  1. ಭಾರತ: ಶೇ. 76
  2. ಸೌತ್ ಕೊರಿಯಾ: ಶೇ. 56
  3. ಚೀನಾ: ಶೇ. 51
  4. ಮೆಕ್ಸಿಕೋ: ಶೇ. 51
  5. ಬ್ರೆಜಿಲ್: ಶೇ. 49
  6. ಇಂಡೋನೇಷ್ಯಾ: ಶೇ. 44
  7. ಸೌತ್ ಆಫ್ರಿಕಾ: ಶೇ. 41

ಇದನ್ನೂ ಓದಿZee vs SEBI: ಝೀ ಸಂಸ್ಥೆಯ ಸುಭಾಷ್ ಚಂದ್ರಗೆ ಮುಗಿದಿಲ್ಲ ಸಂಕಷ್ಟ; ಸೆಬಿ ಆದೇಶಕ್ಕೆ ತಡೆ ಕೊಡಲು ಎಸ್​ಎಟಿ ನಿರಾಕರಣೆ; ಏನಿದು ಪ್ರಕರಣ?

ಸಾವರೀನ್ ವೆಲ್ತ್ ಫಂಡ್​ಗಳೆಂದರೆ ಏನು?

ಸಾವರೀನ್ ವೆಲ್ತ್ ಫಂಡ್ ಎಂಬುದು ಒಂದು ದೇಶದ ಸರ್ಕಾರದಿಂದ ನಿರ್ವಹಿಸಲ್ಪಡುವ ನಿಧಿ. ದೇಶದ ಹೆಚ್ಚುವರಿ ಆದಾಯವು ಈ ನಿಧಿಯಲ್ಲಿರುತ್ತದೆ. ಭಾರತದಲ್ಲಿ ನ್ಯಾಷನಲ್ ಇನ್ವೆಸ್ಟ್​ಮೆಂಟ್ ಅಂಡ್ ಇನ್​ಫ್ರಾಸ್ಟ್ರಕ್ಚರ್ ಫಂಡ್ (ಎನ್​ಐಐಎಫ್) ಇದಕ್ಕೆ ಒಂದು ಉದಾಹರಣೆ. ಚೀನಾ ಇನ್ವೆಸ್ಟ್​ಮೆಂಟ್ ಕಾರ್ಪೊರೇಶನ್ (ಸಿಐಸಿ) ವಿಶ್ವದ ಅತಿದೊಡ್ಡ ಎಸ್​ಡಬ್ಲ್ಯುಎಫ್ ಆಗಿದೆ. ಇದೊಂದೇ ಸಂಸ್ಥೆ ಬಳಿ 1.35 ಟ್ರಿಲಿಯನ್ ಡಾಲರ್ ಇದೆ. ಈಗ ಇನ್ವೆಸ್ಕೋದ ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ 85 ಸಾವರೀನ್ ವೆಲ್ತ್ ಫಂಡ್​ಗಳೆಲ್ಲವನ್ನು ಒಟ್ಟಿಗೆ ಸೇರಿಸಿದರೆ ಒಟ್ಟು 21 ಟ್ರಿಲಿಯನ್ ಡಾಲರ್​ನಷ್ಟು ಫಂಡಿಂಗ್ ಅನ್ನು ನಿಭಾಯಿಸುತ್ತವೆ. ಅಂದರೆ, 1734 ಲಕ್ಷ ಕೋಟಿ ರೂಪಾಯಿಯಷ್ಟು ಮೌಲ್ಯದ ಆಸ್ತಿಗಳನ್ನು ಇವು ನಿರ್ವಹಿಸುತ್ತವೆ. ಹೀಗಾಗಿ, ಇವುಗಳ ಅಭಿಪ್ರಾಯ ಬಹಳ ಗಮನಾರ್ಹವಾದುದು ಮತ್ತು ಮೌಲ್ಯಯುತವಾದುದು. ಈ ಸಂಸ್ಥೆಗಳಿಗೆ ಭಾರತ ಅಚ್ಚುಮೆಚ್ಚಿನ ಹೂಡಿಕೆ ಸ್ಥಳವಾಗಿರುವುದು ಸಣ್ಣ ವಿಷಯವೇನಲ್ಲ.

‘ಭಾರತದಲ್ಲಾಗಲಿ ಅಥವಾ ಚೀನಾದಲ್ಲಾಗಲೀ ಹೂಡಿಕೆ ಮಾಡಿದ ಅನುಭವ ನಮಗೆ ಹೆಚ್ಚಿಲ್ಲ. ಆದರೆ ವ್ಯವಹಾರ ಮತ್ತು ರಾಜಕೀಯ ಸ್ಥಿರತೆ ವಿಚಾರಕ್ಕೆ ಬಂದರೆ ಭಾರತ ಉತ್ತಮ ಎನಿಸುತ್ತದೆ. ಅಲ್ಲಿ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಕುತೂಹಲಕಾರಿ ಕಂಪನಿಗಳಿವೆ, ಉತ್ತಮ ಕಾನೂನುಗಳಿವೆ, ಸರ್ಕಾರೀ ಹೂಡಿಕೆದಾರರಿಗೆ ಅನುಕೂಲಕರ ವಾತಾವರಣ ಇದೆ,’ ಎಂದು ಮಧ್ಯಪ್ರಾಚ್ಯದ ಸಾವರೀನ್ ವೆಲ್ತ್ ಫಂಡ್​ನ ಮುಖ್ಯಸ್ಥರೊಬ್ಬರು ಹೇಳಿರುವುದನ್ನು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿTomato: ಈ ಸೀಸನ್​ನ ಟೊಮೆಟೋ ಕಥೆ; ಹಿಮಾಚಲ ದುರ್ಗತಿ, ಇಡೀ ಭಾರತಕ್ಕೀಗ ಬೆಂಗಳೂರೇ ಗತಿ

ಡಾಲರ್, ಯೂರೋಗೆ ಪರ್ಯಾಯ ಕರೆನ್ಸಿ ಹುಡುಕುತ್ತಿರುವ ಜಗತ್ತು?

ಇನ್ವೆಸ್ಕೋದ ಈ ಅಧ್ಯಯನ ವರದಿಯಲ್ಲಿರುವ ಹಲವು ಗಮನಾರ್ಹ ಸಂಗತಿಗಳಲ್ಲಿ ಡಾಲರ್ ಬಳಕೆ ವಿಚಾರವೂ ಒಂದು. ಡಾಲರ್ ಮತ್ತು ಯೂರೋಗೆ ಪರ್ಯಾಯವಾದ ಕರೆನ್ಸಿ ಇದ್ದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಡಾಲರ್ ರೂಪದಲ್ಲಿದ್ದ ರಷ್ಯಾದ ಆಸ್ತಿಗಳನ್ನು ಪಾಶ್ಚಿಮಾತ್ಯ ದೇಶಗಳು ಮುಟ್ಟುಗೋಲು ಹಾಕಿಕೊಂಡ ಬಳಿಕ ಡಾಲರ್ ಕರೆನ್ಸಿಗೆ ಅಷ್ಟೊಂದು ಪ್ರಾಶಸ್ತ್ಯ ಬೇಕಾಗಿಲ್ಲ ಎಂದು ಹೇಳುವವರು ಹಲವರಿದ್ದಾರೆ. ಈ ಅಧ್ಯಯನದ ಪ್ರಕಾರ ಡಾಲರ್ ಮತ್ತು ಯೂರೋಗೆ ಪರ್ಯಾಯವಾಗಿರುವ ಒಂದು ಪ್ರಬಲ ಕರೆನ್ಸಿ ಇದ್ದಿದ್ದರೆ ಇಷ್ಟರಲ್ಲಾಗಲೇ ಬಹಳ ದೇಶಗಳು ಅದನ್ನು ಅಪ್ಪುತ್ತಿದ್ದವಂತೆ. ಚೀನಾದ ಕರೆನ್ಸಿ ಬಗ್ಗೆ ಇದ್ದ ಒಲವು ಕಡಿಮೆ ಆಗುತ್ತಿದೆ.

ಇದೇ ಹೊತ್ತಿನಲ್ಲಿ ಭಾರತದ ರುಪಾಯಿ ಕರೆನ್ಸಿಗೆ ಮಾರುಕಟ್ಟೆ ಕುದುರಿಸಿಕೊಳ್ಳುವ ಅವಕಾಶ ಇದೆಯಾ ಎಂಬ ಪ್ರಶ್ನೆ ಬರುತ್ತದೆ. ಭಾರತ ಈಗಾಗಲೇ ರುಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿಯಾಗಿ ಮಾಡಲು ಬಹಳ ಪ್ರಯತ್ನ ಹಾಕುತ್ತಿದೆ. ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗುತ್ತದಾ ಎಂದು ಕಾದುನೋಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ