ಭಾರತಕ್ಕೇನು ಕಾದಿದೆ? ಒಪ್ಪಂದ ಮಾಡಿಕೊಂಡರೆ ಶೇ 10, ಇಲ್ಲದಿದ್ದರೆ ಶೇ. 27 ಟ್ಯಾರಿಫ್? ಟ್ರಂಪ್ ನಿಲುವೇನಾಗಬಹುದು?
India and US trade deal and possible tariffs: ಅಮೆರಿಕದೊಂದಿಗೆ ಭಾರತ ಜುಲೈ 31ರೊಳಗೆ ಒಪ್ಪಂದ ಕುದುರಿಸಿಕೊಳ್ಳದಿದ್ದರೆ ಶೇ. 27ರ ಟ್ಯಾರಿಫ್ ಹೇರಿಕೆ ಆಗಬಹುದು. ಒಪ್ಪಂದ ಮಾಡಿಕೊಂಡರೆ ಭಾರತಕ್ಕೆ ವಿಧಿಸುವ ಸುಂಕ ಶೇ. 10-15ಕ್ಕೆ ಸೀಮಿತಗೊಳ್ಳಬಹುದು ಎನ್ನಲಾಗುತ್ತಿದೆ. ಇತ್ತೀಚೆಗೆ ಇಂಡೋನೇಷ್ಯ, ವಿಯೆಟ್ನಾಂ ದೇಶಗಳು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡು ಟ್ಯಾರಿಫ್ ಅನ್ನು ಶೇ. 19-20ಕ್ಕೆ ಸೀಮಿತಗೊಳ್ಳುವಂತೆ ನೋಡಿಕೊಂಡಿವೆ.

ನವದೆಹಲಿ, ಜುಲೈ 18: ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ (India US trade deal) ಇನ್ನೂ ಅಂತಿಮಗೊಂಡಿಲ್ಲ. ಕೃಷಿ ಮತ್ತಿತರ ಅಂಶಗಳ ಬಗ್ಗೆ ಮಾತುಕತೆ ತೀವ್ರವಾಗಿ ನಡೆಯುತ್ತಿದೆ. ಆಗಸ್ಟ್ 1ರೊಳಗೆ ಒಪ್ಪಂದ ಅಂತಿಮಗೊಳ್ಳಬೇಕಿದೆ. ಡೊನಾಲ್ಡ್ ಟ್ರಂಪ್ (Donald Trump) ಅವರು ಭಾರತದ ಸರಕುಗಳ ಮೇಲೆ ಶೇ. 27ರಷ್ಟು ಟ್ಯಾರಿಫ್ (tariffs) ಹಾಕುವುದಾಗಿ ಈ ಮುಂಚೆಯೇ ಹೇಳಿದ್ದಾರೆ. ಜುಲೈ 31ರೊಳಗೆ ಒಪ್ಪಂದ ಮಾಡಿಕೊಳ್ಳದಿದ್ದರೆ ಆಗಸ್ಟ್ 1ರಿಂದ ಭಾರತಕ್ಕೆ ಶೇ. 27ರ ಸುಂಕ ವಿಧಿಸಲಾಗುತ್ತದೆ. ಒಂದು ವೇಳೆ ಒಪ್ಪಂದ ಏರ್ಪಟ್ಟರೆ ಸುಂಕ ಶೇ. 10-15ರಷ್ಟಕ್ಕೆ ಸೀಮಿತಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಈಗಾಗಲೇ ಕೆಲ ದೇಶಗಳು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಒಪ್ಪಂದ ಮಾಡಿಕೊಂಡಿರುವ ವಿಯೆಟ್ನಾಂ ಮತ್ತು ಇಂಡೋನೇಷ್ಯಾ ದೇಶಗಳಿಗೆ ಅಮೆರಿಕ ಟ್ಯಾರಿಫ್ ಅನ್ನು ಶೇ. 19-20 ಕ್ಕೆ ಸೀಮಿತಗೊಳಿಸಲು ನಿರ್ಧರಿಸಿದೆ. ಭಾರತಕ್ಕೆ ಇದಕ್ಕಿಂತಲೂ ಕಡಿಮೆ ಪ್ರಮಾಣದ ಟ್ಯಾರಿಫ್ ಹೊರೆ ಬೀಳಬಹುದು.
ಇದನ್ನೂ ಓದಿ: ಭಾರತ ಮತ್ತು ಅಮೆರಿಕ ಮಧ್ಯೆ ದೊಡ್ಡ ವ್ಯಾಪಾರ ಒಪ್ಪಂದ? ಸುಳಿವು ನೀಡಿದ ಡೊನಾಲ್ಡ್ ಟ್ರಂಪ್
ಇಂಡೋನೇಷ್ಯಾ ಮಾದರಿಯಲ್ಲಿ ಭಾರತದ ಜೊತೆ ಒಪ್ಪಂದ ಎಂದ ಟ್ರಂಪ್
ಅಮೆರಿಕ ಮತ್ತು ಇಂಡೋನೇಷ್ಯಾ ಮಧ್ಯೆ ಏರ್ಪಟ್ಟ ಒಪ್ಪಂದದ ಪ್ರಕಾರ ಅಮೆರಿಕದ ಸರಕುಗಳಿಗೆ ಇಂಡೋನೇಷ್ಯಾ ಮುಕ್ತಾವಕಾಶ ಕೊಡಬೇಕು. ಯಾವುದೇ ಸುಂಕ ಇರಬಾರದು. ಆದರೆ, ಇಂಡೋನೇಷ್ಯಾದ ಉತ್ಪನ್ನಗಳು ಅಮೆರಿಕ ಪ್ರವೇಶಿಸಲು ಶೇ. 19-20ರಷ್ಟು ಟ್ಯಾರಿಫ್ ಕಟ್ಟಬೇಕು. ಇದು ಆಗಿರುವ ಒಪ್ಪಂದ. ಇದೇ ಮಾದರಿಯಲ್ಲಿ ಭಾರತದ ಜೊತೆಗಿನ ಒಪ್ಪಂದವೂ ಇರುತ್ತದೆ ಎಂದಿದ್ದಾರೆ ಅಮೆರಿಕ ಅಧ್ಯಕ್ಷ.
ಸರಿಸಮಾನ ತೆರಿಗೆ ಬದಲು ಅಮೆರಿಕ ಯಾಕೆ ಹೆಚ್ಚು ಟ್ಯಾರಿಫ್ ಹಾಕುತ್ತಿದೆ?
ಅಮೆರಿಕ ಅತಿಯಾಗಿರುವ ತನ್ನ ಟ್ರೇಡ್ ಡೆಫಿಸಿಟ್ ಅನ್ನು ಕಡಿಮೆ ಮಾಡಿಕೊಳ್ಳಲು ಹವಣಿಸುತ್ತಿದೆ. ಭಾರತ, ಚೀನಾ, ಇಂಡೋನೇಷ್ಯಾ, ವಿಯೆಟ್ನಾಂ ಮೊದಲಾದ ಹಲವು ದೇಶಗಳು ಅಮೆರಿಕದಿಂದ ಆಮದು ಮಾಡಿಕೊಳ್ಳುವುದರಿಂದ ರಫ್ತು ಮಾಡುವ ಪ್ರಮಾಣ ಹೆಚ್ಚು. ಈ ರೀತಿ ಟ್ರೇಡ್ ಡೆಫಿಸಿಟ್ ಇರುವ ದೇಶಗಳೊಂದಿಗೆ ಅಮೆರಿಕ ಟ್ಯಾರಿಫ್ ಕ್ರಮ ಅನುಸರಿಸುತ್ತಿದೆ.
ಅಂದರೆ, ಈ ವ್ಯಾಪಾರ ಕೊರತೆ ನೀಗುವ ರೀತಿಯಲ್ಲಿ ವಿವಿಧ ಆಮದುಗಳ ಮೇಲೆ ಅಮೆರಿಕ ಟ್ಯಾರಿಫ್ ಹಾಕುತ್ತದೆ. ಒಂದು ವೇಳೆ, ತನ್ನ ಟ್ಯಾರಿಫ್ ಕ್ರಮಕ್ಕೆ ಪ್ರತಿಯಾಗಿ ಆ ದೇಶವು ಪ್ರತಿಸುಂಕ ಕ್ರಮಕ್ಕೆ ಮುಂದಾದರೆ ಅಮೆರಿಕ ಇನ್ನೂ ಹೆಚ್ಚಿನ ಸುಂಕ ಹಾಕುತ್ತದೆ. ಅಮೆರಿಕದಂಥ ಬೃಹತ್ ಮಾರುಕಟ್ಟೆಯನ್ನು ಕಳೆದುಕೊಳ್ಳಲು ಹೆಚ್ಚಿನ ರಾಷ್ಟ್ರಗಳಿಗೆ ಧೈರ್ಯ ಇಲ್ಲ ಎನ್ನುವುದು ಹೌದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ