ಮುಂದುವರಿದ ಟ್ರಂಪ್ ಬೆದರಿಕೆ; ತಾಮ್ರಕ್ಕೆ ಶೇ. 50, ಫಾರ್ಮಾಗೆ ಶೇ. 200; ಬ್ರಿಕ್ಸ್ ರಾಷ್ಟ್ರಗಳಿಗೆ ಹೆಚ್ಚುವರಿ ಶೇ. 10 ಸುಂಕದ ಎಚ್ಚರಿಕೆ
Donald Trump warns of big tariffs on Copper, Pharma imports: ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳದ ದೇಶಗಳಿಗೆ ಪ್ರತಿಸುಂಕ ಹಾಕುವುದಾಗಿ ಹೇಳಿರುವ ಡೊನಾಲ್ಡ್ ಟ್ರಂಪ್ ಅವರು ತಾಮ್ರಕ್ಕೆ ಶೇ 50 ಟ್ಯಾರಿಫ್ ಪ್ರಕಟಿಸಿದ್ದಾರೆ. ಸೆಮಿಕಂಡಕ್ಟರ್ ಮತ್ತು ಫಾರ್ಮಾ ಆಮದುಗಳ ಮೇಲೂ ಸುಂಕ ವಿಧಿಸುವ ಪ್ರಸ್ತಾಪವನ್ನು ಪರಿಗಣಿಸುತ್ತಿರುವುದಾಗಿ ಹೇಳಿದ್ದಾರೆ. ಭಾರತದ ತಾಮ್ರ ಮತ್ತು ಫಾರ್ಮಾ ರಫ್ತುಗಳ ಮೇಲೆ ಇದರಿಂದ ಎಷ್ಟು ಪರಿಣಾಮವಾಗಬಹುದು?

ನವದೆಹಲಿ, ಜುಲೈ 9: ಡೊನಾಲ್ಡ್ ಟ್ರಂಪ್ ಅವರು ತಾಮ್ರದ ಆಮದು (copper import) ಮೇಲೆ ಶೇ. 50ರಷ್ಟು ಸುಂಕ (Tariff) ವಿಧಿಸುವುದಾಗಿ ಘೋಷಿಸಿದ್ದಾರೆ. ಒಂದು ವರ್ಷದ ಬಳಿಕ ಫಾರ್ಮ ಉತ್ಪನ್ನಗಳ (Pharmaceuticals) ಮೇಲೆ ಬರೋಬ್ಬರಿ ಶೇ. 200ರಷ್ಟು ಟ್ಯಾರಿಫ್ ಹಾಕುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಟ್ರಂಪ್, ಬ್ರಿಕ್ಸ್ ದೇಶಗಳ ಉತ್ಪನ್ನಗಳ ಮೇಲೆ ಹೆಚ್ಚುವರಿ ಶೇ. 10ರಷ್ಟು ಬೇಸ್ಲೈನ್ ಟ್ಯಾಕ್ಸ್ (baseline tax) ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಭಾರತ ಮತ್ತು ಅಮೆರಿಕ ನಡುವೆ ಟ್ರೇಡ್ ಡೀಲ್ ಇನ್ನೂ ಅಂತಿಮಗೊಂಡಿಲ್ಲ. ಹೀಗಾಗಿ ತಾಮ್ರ ಮತ್ತು ಫಾರ್ಮಾ ಉತ್ಪನ್ನಗಳ ಮೇಲೆ ಟ್ರಂಪ್ ಹಾಕುವ ಆಮದು ಸುಂಕಗಳು ಭಾರತಕ್ಕೂ ಅನ್ವಯ ಆಗಬಹುದು. ಬ್ರೆಜಿಲ್, ಚೀನಾ, ಭಾರತ, ರಷ್ಯಾ, ದಕ್ಷಿಣ ಆಫ್ರಿಕಾ ಮೊದಲಾದ ದೇಶಗಳಿರುವ ಬ್ರಿಕ್ಸ್ ಗುಂಪಿನಲ್ಲಿ ಭಾರತವೂ ಇರುವುದರಿಂದ ಹೆಚ್ಚುವರಿ ತೆರಿಗೆ ಸಾಧ್ಯತೆಯನ್ನು ಭಾರತ ಎದುರಿಸಬೇಕಾಗಿದೆ. ತಾಮ್ರದ ಮೇಲಿನ ಆಮದು ಸುಂಕವು ಜುಲೈ 31 ಅಥವಾ ಆಗಸ್ಟ್ 1ರಿಂದ ಚಾಲನೆಗೆ ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ: ತಡಬಡಾಯಿಸುತ್ತಿರುವ ಬಾಂಗ್ಲಾದೇಶ; ಟ್ರಂಪ್ ಟ್ಯಾರಿಫ್ನಿಂದ ಬಾಂಗ್ಲಾಗೆ ಭಾರೀ ಹೊಡೆತ; ಭಾರತಕ್ಕೆ ಎಷ್ಟು ಲಾಭ?
ಕಾಪರ್ ಮೇಲೆ ಟ್ಯಾರಿಫ್ ಹಾಕಿದರೆ ಭಾರತಕ್ಕೆ ಎಷ್ಟು ನಷ್ಟ?
ಭಾರತ 2024-25ರಲ್ಲಿ ಜಾಗತಿಕವಾಗಿ 2 ಬಿಲಿಯನ್ ಡಾಲರ್ ಮೌಲ್ಯದ ತಾಮ್ರ ಮತ್ತು ತಾಮ್ರ ಉತ್ಪನ್ನಗಳನ್ನು ರಫ್ತು ಮಾಡಿತ್ತು. ಇದರಲ್ಲಿ ಅಮೆರಿಕಕ್ಕೆ ಹೋಗಿದ್ದು ಶೇ. 17ರಷ್ಟು. ಅಂದರೆ, ಸುಮಾರು 360 ಮಿಲಿಯನ್ ಡಾಲರ್ನಷ್ಟು ಕಾಪರ್ ಉತ್ಪನ್ನಗಳನ್ನು ಭಾರತವು ಒಂದು ವರ್ಷದಲ್ಲಿ ಅಮೆರಿಕಕ್ಕೆ ರಫ್ತು ಮಾಡಿದೆ.
ಭಾರತದ ತಾಮ್ರದ ಉದ್ಯಮದಿಂದ ಅತಿಹೆಚ್ಚು ರಫ್ತಾಗುವ ದೇಶವೆಂದರೆ ಸೌದಿ ಅರೇಬಿಯಾ ಮತ್ತು ಚೀನಾ. ಆ ನಂತರದ ಸ್ಥಾನ ಅಮೆರಿಕದ್ದು. ತಜ್ಞರ ಪ್ರಕಾರ, ಅಮೆರಿಕ ತಾಮ್ರದ ಮೇಲೆ ಟ್ಯಾರಿಫ್ ವಿಧಿಸಿದರೆ ಭಾರತಕ್ಕೆ ದೊಡ್ಡ ಹೊಡೆತ ಕೊಡುವುದಿಲ್ಲ.
ಭಾರತದ ಫಾರ್ಮಾ ಸೆಕ್ಟರ್ಗೆ ಪೆಟ್ಟಾಗಬಹುದು
ಅಮೆರಿಕವು ಫಾರ್ಮಾ ಉತ್ಪನ್ನಗಳ ಮೇಲೆ ಟ್ಯಾರಿಫ್ ಹಾಕಿದರೆ ಭಾರತಕ್ಕೆ ಹೆಚ್ಚಿನ ಪರಿಣಾಮ ಆಗುತ್ತದೆ. ಭಾರತದ ಫಾರ್ಮಾ ರಫ್ತಿಗೆ ಅಮೆರಿಕವೇ ಅತಿದೊಡ್ಡ ಮಾರುಕಟ್ಟೆ. 2024-25ರಲ್ಲಿ 9 ಬಿಲಿಯನ್ ಡಾಲರ್ ಮೌಲ್ಯದಷ್ಟು ಔಷಧಗಳು ಭಾರತದಿಂದ ಅಮೆರಿಕಕ್ಕೆ ರಫ್ತಾಗಿದ್ದುವು. ಭಾರತದ ಒಟ್ಟಾರೆ ಫಾರ್ಮಾ ರಫ್ತಿನಲ್ಲಿ ಇದು ಶೇ. 40ರಷ್ಟಾಗುತ್ತದೆ. ಆದರೆ, ಭಾರತದಿಂದ ಫಾರ್ಮಾ ಉತ್ಪನ್ನಗಳು ಸರಬರಾಜಾಗುವುದು ನಿಂತು ಹೋದರೆ ಅಮೆರಿಕಕ್ಕೂ ಕಷ್ಟವೇ ಆಗುತ್ತದೆ. ಔಷಧಗಳ ಬೆಲೆ ದುಬಾರಿಯಾಗುತ್ತದೆ.
ಇದನ್ನೂ ಓದಿ: ಚೀನಾದ ಗೊಡವೆ ಸಾಕು; ವಿರಳ ಭೂಖನಿಜಗಳಿಗಾಗಿ ಆಸ್ಟ್ರೇಲಿಯಾ ಜೊತೆ ಭಾರತ ಮಾತುಕತೆ
ಭಾರತಕ್ಕೆ ಒಟ್ಟಾರೆ ಎಷ್ಟು ನಷ್ಟವಾಗಬಹುದು?
ಭಾರತವು ಜಾಗತಿಕವಾಗಿ 2024-25ರಲ್ಲಿ 825 ಬಿಲಿಯನ್ ಡಾಲರ್ ಮೌಲ್ಯದಷ್ಟು ರಫ್ತು ಮಾಡಿದೆ. ಇದರಲ್ಲಿ ಅಮೆರಿಕಕ್ಕೆ 60-70 ಬಿಲಿಯನ್ ಡಾಲರ್ ರಫ್ತಾಗಿದೆ. ಅಂದರೆ, ಭಾರತದ ಶೇ. 7-10ರಷ್ಟು ಅಮೆರಿಕಕ್ಕೆ ಹೋಗುತ್ತದೆ. ಭಾರತದ ಉತ್ಪನ್ನಗಳಿಗೆ ಅಮೆರಿಕ ಪೂರ್ಣ ಬಾಗಿಲು ಮುಚ್ಚಿದರೆ ಭಾರತದ ರಫ್ತು ಶೇ. 10ರಷ್ಟು ತಗ್ಗಬಹುದು. ಸದ್ಯದ ಮಟ್ಟಿಗೆ ತಾಮ್ರ ಮತ್ತು ಔಷಧಗಳ ಮೇಲೆ ಟ್ಯಾರಿಫ್ ಹೇರಿದರೆ ಭಾರತದ ರಫ್ತು ಶೇ. 3-4ರಷ್ಟು ಕಡಿಮೆ ಆಗಬಹುದು ಎನ್ನುವುದು ಕೆಲ ತಜ್ಞರ ಲೆಕ್ಕಾಚಾರ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








