ತಡಬಡಾಯಿಸುತ್ತಿರುವ ಬಾಂಗ್ಲಾದೇಶ; ಟ್ರಂಪ್ ಟ್ಯಾರಿಫ್ನಿಂದ ಬಾಂಗ್ಲಾಗೆ ಭಾರೀ ಹೊಡೆತ; ಭಾರತಕ್ಕೆ ಎಷ್ಟು ಲಾಭ?
Trump tariffs; Bangladesh loss could be India's gain: ಅಮೆರಿಕ ಸರ್ಕಾರವು ಬಾಂಗ್ಲಾದೇಶ ಸೇರಿದಂತೆ 14 ದೇಶಗಳ ಮೇಲೆ ಟ್ಯಾರಿಫ್ ಪ್ರಕಟಿಸಿದೆ. ಬಾಂಗ್ಲಾದೇಶಕ್ಕೆ ಶೇ. 35ರಷ್ಟು ಸುಂಕ ಹಾಕಿದೆ. ಬಾಂಗ್ಲಾದೇಶದ ರಫ್ತಿಗೆ ಸಂಚಕಾರ ಬಂದಿದೆ. ಅಮೆರಿಕಕ್ಕೆ ಅದು ವರ್ಷಕ್ಕೆ ಸುಮಾರು 8.4 ಬಿಲಿಯನ್ ಡಾಲರ್ನಷ್ಟು ಮೌಲ್ಯದ ಸರಕುಗಳನ್ನು ರಫ್ತು ಮಾಡುತ್ತದೆ. ಅದರಲ್ಲಿ ಜವಳಿ ಪಾಲು ಶೇ. 80ರಷ್ಟಿದೆ. ಟ್ರಂಪ್ ತೆರಿಗೆಯಿಂದ ಬಾಂಗ್ಲಾ ಜವಳಿ ಉದ್ಯಮ ಸಂಕಷ್ಟಕ್ಕೆ ಸಿಲುಕಬಹುದು.

ನವದೆಹಲಿ, ಜುಲೈ 8: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು 14 ದೇಶಗಳಿಗೆ ಶೇ. 25ರಿಂದ 40ರಷ್ಟು ಆಮದು ಸುಂಕ (Tariffs) ವಿಧಿಸಿದ್ದಾರೆ. ಬಾಂಗ್ಲಾದೇಶಕ್ಕೆ ಶೇ. 35ರಷ್ಟು ಟ್ಯಾರಿಫ್ ಪ್ರಕಟಿಸಿದ್ದಾರೆ. ಅಮೆರಿಕದ ಈ ಕ್ರಮದಿಂದ ಬಾಂಗ್ಲಾದೇಶ (Bangladesh) ತತ್ತರಿಸಿಹೋಗಿದೆ. ಒಪ್ಪಂದ ಮಾಡಿಕೊಳ್ಳಲು ಅವಕಾಶ ಕೊಡಿ ಎಂದು ಅಮೆರಿಕವನ್ನು ಬೇಡಿಕೊಳ್ಳಲು ಶುರು ಮಾಡಿದೆ. ಅಮೆರಿಕದ ಟ್ಯಾರಿಫ್ ಪ್ರಕಟವಾದ ಬೆನ್ನಲ್ಲೇ ಭಾರತದ ಜವಳಿ ಉದ್ಯಮದ ಸ್ಟಾಕುಗಳು ಷೇರುಪೇಟೆಯಲ್ಲಿ ಬೇಡಿಕೆ ಪಡೆದಿವೆ.
ಅಮೆರಿಕದ ಟ್ಯಾರಿಫ್ನಿಂದ ಬಾಂಗ್ಲಾದೇಶಕ್ಕೆ ಆಗುವ ಅನಾಹುತವೇನು?
ಬಾಂಗ್ಲಾದೇಶದ ಆರ್ಥಿಕತೆ ನಿಂತಿರುವುದೇ ಅದರ ಜವಳಿ ಉದ್ಯಮದಿಂದ. ಸ್ವಾತಂತ್ರ್ಯ ಪೂರ್ವದಿಂದಲೇ ಆ ದೇಶದಲ್ಲಿ ಜವಳಿ ಉದ್ಯಮ ಗಟ್ಟಿಯಾಗಿ ತಳವೂರಿದೆ. ಬಾಂಗ್ಲಾದೇಶದ ಶೇ. 80ರಷ್ಟು ರಫ್ತು ಗಾರ್ಮೆಂಟ್ಸ್ ಉದ್ಯಮ ದಿಂದಲೇ ಆಗುವುದು.
ಬಾಂಗ್ಲಾದೇಶದಿಂದ ಅಮೆರಿಕಕ್ಕೆ ಆಗುವ ಸರಕು ರಫ್ತು (goods export) 8.4 ಬಿಲಿಯನ್ ಡಾಲರ್ ಇದೆ. ಇದರಲ್ಲಿ ಜವಳಿ ಉದ್ಯಮದ ಪಾಲು 7.34 ಬಿಲಿಯನ್ ಡಾಲರ್ ಇದೆ. ಅಮೆರಿಕವೇನಾದರೂ ಆಗಸ್ಟ್ 1ರಿಂದ ಬಾಂಗ್ಲಾದೇಶಕ್ಕೆ ಶೇ. 35ರಷ್ಟು ಟ್ಯಾರಿಫ್ ಹಾಕಿದಲ್ಲಿ, ಇದರ ಜವಳಿ ಉದ್ಯಮ ಹಾಗೂ ದೇಶದ ಒಟ್ಟಾರೆ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕುವುದು ಖಚಿತ.
ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ನಿಂದ ಸದ್ಯ ಬಚಾವಾದ ಭಾರತ; ಅಮೆರಿಕದಿಂದ 14 ದೇಶಗಳ ಮೇಲೆ ಆಮದು ಸುಂಕ ಹೇರಿಕೆ
ಬಾಂಗ್ಲಾದೇಶಕ್ಕೆ ಅಮೆರಿಕ ಟ್ಯಾರಿಫ್ ಹಾಕಿದರೆ ಭಾರತಕ್ಕೆ ಆಗುವ ಲಾಭ ಎಷ್ಟು?
ಭಾರತದ ಜವಳಿ ಉದ್ಯಮ ವರ್ಷಕ್ಕೆ ಸುಮಾರು 36 ಬಿಲಿಯನ್ ಡಾಲರ್ನಷ್ಟು ರಫ್ತು ಮಾಡುತ್ತದೆ. ಇದರಲ್ಲಿ ಅಮೆರಿಕಕ್ಕೆ ಶೇ. 28.5ರಷ್ಟು ರಫ್ತಾಗುತ್ತದೆ. 2024ರಲ್ಲಿ ಭಾರತ 10.4 ಬಿಲಿಯನ್ ಡಾಲರ್ ಮೌಲ್ಯದ ಗಾರ್ಮೆಂಟ್ಸ್ ಅನ್ನು ಅಮೆರಿಕಕ್ಕೆ ರಫ್ತು ಮಾಡಿತ್ತು.
ಭಾರತದಕ್ಕೆ ಹೋಲಿಸಿದರೆ ಬಾಂಗ್ಲಾದೇಶದ ಜವಳಿ ಉದ್ಯಮ ಹೆಚ್ಚು ಬಲಯುತವಾಗಿದೆ. ಚೀನಾದಿಂದ ಅಗ್ಗದ ದರದಲ್ಲಿ ಕಚ್ಛಾ ವಸ್ತು ಸಿಗುತ್ತದೆ. ಕಾರ್ಮಿಕ ವೆಚ್ಚವೂ ಕಡಿಮೆ. ಜವಳಿ ಮೂಲಸೌಕರ್ಯ ಉತ್ತಮವಾಗಿದೆ. ಇದರಿಂದ ಬಾಂಗ್ಲಾದೇಶದ ಜವಳಿ ಉತ್ಪಾದನಾ ಸಾಮರ್ಥ್ಯ ಬಹಳ ಹೆಚ್ಚಿದೆ. ದೊಡ್ಡ ಪ್ರಮಾಣದ ಆರ್ಡರ್ಗಳನ್ನು ಅದು ನಿರ್ವಹಿಸಬಲ್ಲುದು.
ಇದನ್ನೂ ಓದಿ: Adani Power: ವಿಐಪಿಎಲ್ ಖರೀದಿ ಬಳಿಕ ಅದಾನಿ ಪವರ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 18,150 ಮೆ.ವ್ಯಾ.ಗೆ ಏರಿಕೆ
ಭಾರತದಲ್ಲಿರುವ ಜವಳಿ ಉದ್ದಿಮೆಗಳು ಇನ್ನೂ ಚಿಕ್ಕವು. ದೊಡ್ಡ ಆರ್ಡರ್ಗಳನ್ನು ಪಡೆದು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಆಗುವುದಿಲ್ಲ ಎನ್ನುವ ಮಾತಿದೆ. ಬಾಂಗ್ಲಾದೇಶದಷ್ಟು ಕಡಿಮೆ ಬೆಲೆಗೆ ಉತ್ಪನ್ನಗಳನ್ನು ನೀಡಲು ಸಾಧ್ಯವಾಗುವುದಿಲ್ಲ.
ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಮೇಲೆ ಅಮೆರಿಕ ಶೇ. 35ರಷ್ಟು ಟ್ಯಾರಿಫ್ ವಿಧಿಸಿದರೆ, ಬಾಂಗ್ಲಾಗೆ ಹೋಗಬೇಕಾದ ಅರ್ಧದಷ್ಟಾದರೂ ಆರ್ಡರ್ಗಳು ಭಾರತೀಯ ಕಂಪನಿಗಳಿಗೆ ವರ್ಗವಾಗಬಹುದು. ಇದು ಬಾಂಗ್ಲಾದೇಶಕ್ಕೆ ಎಚ್ಚರಿಕೆಯ ಕರೆಗಂಟೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








