ಗೃಹಸಾಲ, ಬಹಳ ಕಡಿಮೆ ಆಗಿದೆ ಬಡ್ಡಿದರ; ಶೇ. 7.35ರಿಂದ ಇಂಟರೆಸ್ಟ್ ರೇಟ್ ಶುರು
Home Loan Rates in India: ಭಾರತೀಯ ರಿಸರ್ವ್ ಬ್ಯಾಂಕ್ನ ರಿಪೋ ದರ ಶೇ. 5.50ಕ್ಕೆ ಇಳಿದಿದೆ. ವಿವಿಧ ಬ್ಯಾಂಕುಗಳ ಸಾಲದರವೂ ಕಡಿಮೆ ಆಗಿದೆ. ಸದ್ಯ ಗೃಹ ಸಾಲಗಳ ದರ ಕನಿಷ್ಠ ಶೇ. 7.35ರಿಂದ ಆರಂಭವಾಗುತ್ತದೆ. ಎಸ್ಬಿಐ, ಬ್ಯಾಂಕ್ ಆಫ್ ಬರೋಡಾ ಇತ್ಯಾದಿ ಬ್ಯಾಂಕುಗಳಲ್ಲಿ ಶೇ. 7.50ರಿಂದ ಶೇ. 10ರವರೆಗೂ ಬಡ್ಡಿದರ ಇದೆ.

ಆರ್ಬಿಐನ ರಿಪೋ ದರ (Repo Rate) ಸತತ ಮೂರು ಬಾರಿ ಇಳಿಕೆಯಾದ ಬಳಿಕ ಬಹುತೇಕ ಎಲ್ಲಾ ಬ್ಯಾಂಕುಗಳೂ ಕೂಡ ಬಡ್ಡಿದರ (Bank interest rates) ಇಳಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ಸಾಲಗಳಿಗೆ ಬಡ್ಡಿದರ ಗಣನೀಯವಾಗಿ ಕಡಿಮೆ ಆಗಿದೆ. ಗೃಹಸಾಲಗಳ ದರವೂ (home loan rates) ತಗ್ಗಿದೆ. ಒಂದು ಸಾಧಾರಣ ಮನೆ ನಿರ್ಮಿಸಲು ಇವತ್ತಿನ ಸಂದರ್ಭದಲ್ಲಿ ಕನಿಷ್ಠವೆಂದರೂ 25 ಲಕ್ಷ ರೂ ಆಗುತ್ತದೆ.
ಬೆಂಗಳೂರಿನಂತಹ ಪ್ರದೇಶದಲ್ಲಿ ಒಂದು ಮನೆ ನಿರ್ಮಾಣಕ್ಕೆ ಸರಾಸರಿ 60 ಲಕ್ಷ ರೂ ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತಿದೆ. ಪ್ರತಿ ಚದರಡಿ ಕಟ್ಟಡ ನಿರ್ಮಾಣ ವೆಚ್ಚ 1,500 ರೂನಿಂದ 6,000 ರೂವರೆಗೆ ಆಗಬಹುದು. ಮನೆ ನಿರ್ಮಿಸಲು ಸಾಲ ಮಾಡುವುದು ಅನಿವಾರ್ಯ. ಹೀಗಾಗಿ, ಗೃಹಸಾಲ ದರ ಗಮನಾರ್ಹ ಎನಿಸುತ್ತದೆ. ಬ್ಯಾಂಕ್ ಆಫ್ ಇಂಡಿಯಾದಿಂದ ಹಿಡಿದು ಕೆನರಾ ಬ್ಯಾಂಕ್ವರೆಗೆ ಗೃಹ ಸಾಲಕ್ಕೆ ಬಡ್ಡಿದರ ಎಷ್ಟಿದೆ ಎನ್ನುವ ಮಾಹಿತಿ ಕೆಳಕಂಡಂತೆ ಇದೆ.
ಇದನ್ನೂ ಓದಿ: 20-35 ವರ್ಷ ವಯಸ್ಸಿನಲ್ಲಿ ಜನರು ಮಾಡುವ ಪ್ರಮುಖ ಹಣಕಾಸು ತಪ್ಪುಗಳಿವು…
ವಿವಿಧ ಬ್ಯಾಂಕುಗಳಲ್ಲಿ ಇತ್ತೀಚಿನ ಗೃಹಸಾಲ ದರ
- ಕೋಟಕ್ ಮಹೀಂದ್ರ ಬ್ಯಾಂಕ್: ಈ ಖಾಸಗಿ ಬ್ಯಾಂಕು 75 ಲಕ್ಷ ರೂಗೂ ಅಧಿಕ ಮೊತ್ತದ ಸಾಲಗಳಿಗೆ ವಿಧಿಸುವ ಬಡ್ಡಿ ಶೇ. 8.20ರಿಂದ ಆರಂಭವಾಗುತ್ತದೆ. ಪ್ರೋಸಸಿಂಗ್ ಫೀ ಶೇ. 2ರಷ್ಟು ಇರುತ್ತದೆ.
- ಎಚ್ಡಿಎಫ್ಸಿ ಬ್ಯಾಂಕ್: ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್ಡಿಎಫ್ಸಿಯಲ್ಲಿ ಗೃಹ ಸಾಲದರ ಶೇ. 8.15ರಿಂದ ಆರಂಭವಾಗುತ್ತದೆ. ಪ್ರೋಸಸಿಂಗ್ ಫೀ ಆಗಿ ಶೇ. 0.50ರಿಂದ ಶೇ. 1.50ರವರೆಗೆ ಇರುತ್ತದೆ.
- ಪಂಜಾಬ್ ನ್ಯಾಷನಲ್ ಬ್ಯಾಂಕ್: ಭಾರತದ ಎರಡನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿದ ಪಿಎನ್ಬಿಯಲ್ಲಿ ಗೃಹಸಾಲ ದರ ಶೇ. 7.50ರಿಂದ ಶುರುವಾಗುತ್ತದೆ. ಇದರ ಜೊತೆಗೆ ಪ್ರೋಸಸಿಂಗ್ ಫೀ ಆಗಿ ಶೇ. 0.35ರಷ್ಟನ್ನು ನೀಡಬೇಕಾಗುತ್ತದೆ.
- ಬ್ಯಾಂಕ್ ಆಫ್ ಬರೋಡಾ: ಈ ಸರ್ಕಾರಿ ಬ್ಯಾಂಕ್ ಆಫ್ ಬರೋಡಾದಲ್ಲಿ ಹೋಮ್ ಲೋನ್ ದರ ಶೇ. 7.50ರಿಂದ ಆರಂಭವಾಗುತ್ತದೆ. ಪ್ರೋಸಸಿಂಗ್ ಶುಲ್ಕ 5,000 ರೂನಿಂದ ಶುರುವಾಗುತ್ತದೆ.
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿದ ಎಸ್ಬಿಐನಲ್ಲಿ ಗೃಹಸಾಲ ದರ ಶೇ. 7.50ರಿಂದ ಶೇ. 10.50ರವರೆಗೂ ಇದೆ. ಪ್ರೋಸಸಿಂಗ್ ಫೀ ಶೇ. 0.35ರಷ್ಟಿದೆ. ಈ ಶುಲ್ಕವು 2,000 ರೂನಿಂದ 10,000 ರೂವರೆಗೆ ಇರಬಹುದು.
- ಕೆನರಾ ಬ್ಯಾಂಕ್: ಈ ಸರ್ಕಾರಿ ಬ್ಯಾಂಕ್ನಲ್ಲಿ 75 ಲಕ್ಷ ರೂಗೂ ಅಧಿಕ ಮೊತ್ತದ ಗೃಹಸಾಲಗಳಿಗೆ ಬಡ್ಡಿದರ ಶೇ 7.40ರಿಂದ ಆರಂಭವಾಗುತ್ತದೆ. ಪ್ರೋಸಸಿಂಗ್ ಫೀ 1,500 ರೂನಿಂದ 10,000 ರೂವರೆಗೆ ಇದೆ.
- ಬ್ಯಾಂಕ್ ಆಫ್ ಇಂಡಿಯಾ: ಈ ಸರ್ಕಾರಿ ಬ್ಯಾಂಕ್ನಲ್ಲಿ ಹೋಮ್ ಲೋನ್ಗೆ ಬಡ್ಡಿದರ ಶೇ. 7.35ರಿಂದ ಆರಂಭವಾಗುತ್ತದೆ. ಭಾರತದ ಬ್ಯಾಂಕುಗಳ ಪೈಕಿ ಇದರಲ್ಲೇ ಅತ್ಯಂತ ಕಡಿಮೆ ಗೃಹಸಾಲ ದರ ಸದ್ಯಕ್ಕೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಅಪ್ಡೇಟ್; ಆರ್ಬಿಐ ದರ ಇಳಿಸಿದರೂ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿಯಲ್ಲಿ ಇಲ್ಲ ಇಳಿಕೆ
ಬ್ಯಾಂಕುಗಳು ಗೃಹಸಾಲಗಳಿಗೂ ಕೂಡ ಕ್ರೆಡಿಟ್ ಸ್ಕೋರ್ ಪರಿಶೀಲಿಸುತ್ತವೆ. ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ ಬಡ್ಡಿದರ ಕನಿಷ್ಠ ಇರುತ್ತದೆ. ಕ್ರೆಡಿಟ್ ಸ್ಕೋರ್ ಸಾಧಾರಣ ಇದ್ದರೆ ಬಡ್ಡಿದರ ತುಸು ಹೆಚ್ಚಿಗೆ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








