ಭಾರತ ಮತ್ತು ಅಮೆರಿಕ ಮಧ್ಯೆ ದೊಡ್ಡ ವ್ಯಾಪಾರ ಒಪ್ಪಂದ? ಸುಳಿವು ನೀಡಿದ ಡೊನಾಲ್ಡ್ ಟ್ರಂಪ್
Donald Trump hints at big deal with India: ಭಾರತದ ಜೊತೆ ಸದ್ಯದಲ್ಲೇ ದೊಡ್ಡ ಟ್ರೇಡ್ ಡೀಲ್ ಮಾಡಿಕೊಳ್ಳಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಜೂನ್ 27, ಶುಕ್ರವಾರ ವಾಷಿಂಗ್ಟನ್ನಲ್ಲಿರುವ ತಮ್ಮ ಅಧ್ಯಕ್ಷೀಯ ಗೃಹಕಚೇರಿಯಾದ ಶ್ವೇತಭವನದಲ್ಲಿ ನಡೆದ ‘ಬಿಗ್ ಬ್ಯೂಟಿಫುಲ್ ಬಿಲ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಚೀನಾವನ್ನು ಓಪನ್ ಅಪ್ ಮಾಡಿದ್ದೇವೆ. ಭಾರತವನ್ನೂ ಓಪನ್ ಅಪ್ ಮಾಡುತ್ತೇವೆ ಎಂದಿದ್ದಾರೆ. ಅಂದರೆ, ಟ್ಯಾರಿಫ್ ರಹಿತ ವ್ಯಾಪಾರ ಒಪ್ಪಂದ ಏರ್ಪಡುವ ಸುಳಿವನ್ನು ಟ್ರಂಪ್ ನೀಡಿದ್ದಾರೆ.

ನವದೆಹಲಿ, ಜೂನ್ 27: ಅಮೆರಿಕ ಮತ್ತು ಚೀನಾ ಮಧ್ಯೆ ವ್ಯಾಪಾರ ಒಪ್ಪಂದ ಕುದುರಿದ ಬೆನ್ನಲ್ಲೇ ಈಗ ಡೊನಾಲ್ಡ್ ಟ್ರಂಪ್ (Donald Trump) ಅವರು ಭಾರತದ ಜೊತೆ ದೊಡ್ಡ ಟ್ರೇಡ್ ಡೀಲ್ ಬರಲಿರುವುದರ ಸುಳಿವು ನೀಡಿದ್ದಾರೆ. ಅಮೆರಿಕ ಅಧ್ಯಕ್ಷರ ಗೃಹ ಕಚೇರಿಯಾದ ವೈಟ್ಹೌಸ್ನಲ್ಲಿ ನಡೆದ ‘ಬಿಗ್ ಬ್ಯೂಟಿಫುಲ್ ಬಿಲ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಡೊನಾಲ್ಡ್ ಟ್ರಂಪ್, ತಮ್ಮ ದೇಶವು ಬಹಳ ದೊಡ್ಡ ಒಪ್ಪಂದಗಳನ್ನು ಕುದುರಿಸುತ್ತಿದೆ ಎಂದಿದ್ದಾರೆ.
‘ಕೆಲ ದೊಡ್ಡ ಒಪ್ಪಂದಗಳು ಆಗುತ್ತಿವೆ. ಮುಂದೆ ಒಂದು ಒಪ್ಪಂದ ಬರುತ್ತಿದೆ. ಬಹುಶಃ ಭಾರತದ ಜೊತೆ ಆ ಒಪ್ಪಂದ ಇದೆ. ಬಹಳ ದೊಡ್ಡ ಡೀಲ್ ಅದು. ಭಾರತವನ್ನು ಮುಕ್ತ ವ್ಯಾಪಾರಕ್ಕೆ ತೆರೆಯುತ್ತಿದ್ದೇವೆ. ಚೀನಾ ಡೀಲ್ನಲ್ಲಿ ಚೀನಾವನ್ನು ವ್ಯಾಪಾರಕ್ಕೆ ತೆರೆಯಲು ಆರಂಭಿಸಿದ್ದೇವೆ’ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಎಂದಿನ ಮಾತಿನ ವರಸೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಇಷ್ಟು ದೊಡ್ಡ ಆರ್ಥಿಕತೆ ಇಷ್ಟು ವೇಗದಲ್ಲಿ ಬೆಳೆಯುವುದು ಅಪರೂಪ: ಭಾರತವನ್ನು ಪ್ರಶಂಸಿಸಿದ ವಾಲ್ಮಾರ್ಟ್ ಸಿಇಒ
ಭಾರತ ಮತ್ತು ಚೀನಾ ದೇಶಗಳು ವಿಧಿಸುವ ಆಮದು ಸುಂಕದ ಬಗ್ಗೆ ಡೊನಾಲ್ಡ್ ಟ್ರಂಪ್ ಮೊದಲಿಂದಲೂ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಎಲ್ಲಾ ದೇಶಗಳ ಮೇಲೆ ತಾವೂ ಕೂಡ ಟ್ಯಾರಿಫ್ ಏರಿಕೆ ಮಾಡಿ, ಈಗ ಟ್ರಂಪ್ ಟ್ಯಾರಿಫ್ ಸಂಧಾನದಲ್ಲಿ ತೊಡಗಿದ್ದಾರೆ. ಬಹಳ ದೊಡ್ಡ ಮಾರುಕಟ್ಟೆಗಳೆನಿಸಿದ ಚೀನಾ ಮತ್ತು ಭಾರತ ದೇಶಗಳು ಅಮೆರಿಕನ್ ಉತ್ಪನ್ನಗಳ ಹರಿವಿಗೆ ಮುಕ್ತ ಅವಕಾಶ ಕೊಡುವಂತಾಗಬೇಕು ಎಂಬುದು ಟ್ರಂಪ್ ಅವರ ಇಂಗಿತ ಎಂದು ವಿಶ್ಲೇಷಿಸಲಾಗುತ್ತಿದೆ.
ಇದೇ ವೇಳೆ, ಬ್ರಿಟನ್ ಜೊತೆ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿರುವ ಭಾರತವು ಅಮೆರಿಕದ ಜೊತೆ ಉತ್ತಮ ವ್ಯಾಪಾರ ಒಪ್ಪಂದ ಏರ್ಪಡಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಮಾತುಕತೆಗಳು ನಡೆಯುತ್ತಿದೆ. ಭಾರತದ ಸಂಧಾನಕಾರರ ತಂಡವು ಅಮೆರಿಕದಲ್ಲಿದ್ದು ಒಪ್ಪಂದದ ವಿಚಾರವಾಗಿ ಸಂಧಾನದಲ್ಲಿ ನಿರತವಾಗಿದೆ. ಕೇಂದ್ರ ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿರುವ ರಾಜೇಶ್ ಅಗರ್ವಾಲ್ ಅವರು ಭಾರತದ ಈ ತಂಡದ ಮುಖ್ಯ ಸಂಧಾನಕಾರರಾಗಿ ನೇತೃತ್ವ ವಹಿಸಿದ್ದಾರೆ.
ಇದನ್ನೂ ಓದಿ: ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿ ಸೂಚ್ಯಂಕ: ಟಾಪ್-100 ಪಟ್ಟಿಗೆ ಸೇರಿದ ಭಾರತ
ವರದಿಗಳ ಪ್ರಕಾರ, ಜುಲೈ 9ರೊಳಗೆ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಯಾವ್ಯಾವುದಕ್ಕೆ ಆಮದು ಸುಂಕ ಕಡಿಮೆ ಮಾಡುವುದು, ಅಥವಾ ತೆಗೆದುಹಾಕುವುದು ಎಂಬುದರ ಚರ್ಚೆಗಳಾಗುತ್ತಿವೆ.
ಭಾರತವು ಕೃಷಿ ಮತ್ತು ಹೈನೋದ್ಯಮಗಳನ್ನು ರಕ್ಷಿಸಲು ಹಲವು ಆಮದು ನಿರ್ಬಂಧಗಳನ್ನು ಹಾಕಿದೆ. ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡರೂ ಈ ಎರಡು ಕ್ಷೇತ್ರಗಳನ್ನು ಮಾತ್ರ ಒಳಗೊಂಡಿಲ್ಲ. ಅಮೆರಿಕವು ಈ ಸೆಕ್ಟರ್ ಅನ್ನೂ ತೆರೆಯಬೇಕೆಂದು ಒತ್ತಾಯಿಸುತ್ತಿದೆ. ಆದರೆ, ಭಾರತ ಇದಕ್ಕೆ ಒಪ್ಪುವ ಸಾಧ್ಯತೆ ಕಡಿಮೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




