
ನವದೆಹಲಿ, ಜನವರಿ 25: ಐರೋಪ್ಯ ಒಕ್ಕೂಟದ ದೇಶಗಳಿಂದ ಆಮದು ಮಾಡಿಕೊಳ್ಳುವ ಕಾರುಗಳ ಮೇಲಿನ ಟ್ಯಾರಿಫ್ ಅನ್ನು ಶೇ. 40ಕ್ಕೆ ಇಳಿಸಲು ಭಾರತ ಯೋಜಿಸಿದೆ ಎಂದು ವರದಿಗಳು ಹೇಳುತ್ತಿವೆ. ಸದ್ಯ ಯಾವುದೇ ಆಮದಿತ ಕಾರುಗಳ ಮೇಲೆ ಭಾರತವು ಶೇ. 110ರಷ್ಟು ಸುಂಕ ವಿಧಿಸುತ್ತಿದೆ. ಯೂರೋಪಿಯನ್ ಯೂನಿಯನ್ ಜೊತೆ ವ್ಯಾಪಾರ ಒಪ್ಪಂದ (India EU trade deal) ಏರ್ಪಟ್ಟಲ್ಲಿ ಕಾರುಗಳ ಮೇಲಿನ ಆಮದು ಸುಂಕವನ್ನು (Tariffs on cars) ಭಾರತ ತಗ್ಗಿಸಬಹುದು ಎನ್ನಲಾಗಿದೆ.
ವರದಿಗಳ ಪ್ರಕಾರ ಟ್ಯಾರಿಫ್ ಅನ್ನು ಶೇ 40ಕ್ಕೆ ಇಳಿಸುವುದು ತತ್ಕ್ಷಣದ ಕ್ರಮವಾಗಿರುತ್ತದೆ. ನಂತರದ ದಿನಗಳಲ್ಲಿ ಆಮದು ಸುಂಕವನ್ನು ಶೇ. 10ಕ್ಕೆ ಇಳಿಸಲಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಸಾಮಾನ್ಯ ಹೂಡಿಕೆದಾರರು ಈ ಬಾರಿಯ ಬಜೆಟ್ನಲ್ಲಿ ಗಮನಿಸಬೇಕಾದ ಸಂಗತಿಗಳಿವು
ಟ್ಯಾರಿಫ್ ಇಳಿಕೆಯು ಪ್ರತೀ ಐರೋಪ್ಯ ಕಂಪನಿಯ ಆಮದಿತ ಕಾರುಗಳ ಸಂಖ್ಯಾ ಮಿತಿ ಮತ್ತು ಬೆಲೆ ಮೇಲೆ ಅವಲಂಬಿತವಾಗಿರುತ್ತದೆ. ಅಂದರೆ, 15,000 ಯೂರೋಗಳಿಗಿಂತ (ಸುಮಾರು 17 ಲಕ್ಷ ರೂ) ಹೆಚ್ಚು ಬೆಲೆ ಮತ್ತು ಸೀಮಿತ ಸಂಖ್ಯೆಯ ಕಾರುಗಳ ಮೇಲೆ ಟ್ಯಾರಿಫ್ ಇಳಿಕೆ ಮಾಡಲು ಸರ್ಕಾರ ಸದ್ಯಕ್ಕೆ ಒಪ್ಪಿದೆ ಎಂದು ಹೇಳಲಾಗುತ್ತಿದೆ.
ವಿಶ್ವದಲ್ಲಿ ಅತ್ಯಂತ ಜನಪ್ರಿಯವಾಗಿರುವ ಕಾರುಗಳಲ್ಲಿ ಹೆಚ್ಚಿನವು ಐರೋಪ್ಯ ದೇಶಗಳ ಕಂಪನಿಗಳದ್ದಾಗಿವೆ. ವೋಸ್ವ್ಯಾಗನ್, ಮರ್ಸಿಡೆಸ್ ಬೆಂಜ್, ಬಿಎಂಡಬ್ಲ್ಯು ಇತ್ಯಾದಿ ಪ್ರಸಿದ್ಧ ಕಾರ್ ಬ್ರ್ಯಾಂಡ್ಗಳು ಯೂರೋಪ್ ಮೂಲದ್ದಾಗಿವೆ. ಭಾರತವು ಟ್ಯಾರಿಫ್ ಇಳಿಸುವುದರಿಂದ ಈ ಪ್ರತಿಷ್ಠಿತ ಕಂಪನಿಗಳಿಗೆ ಭಾರತದ ಮಾರುಕಟ್ಟೆ ಪ್ರವೇಶ ಇನ್ನಷ್ಟು ಸಲೀಸಾಗಲಿದೆ. ದೇಶೀಯ ಕಾರ್ ಕಂಪನಿಗಳಾದ ಮಾರುತಿ ಸುಜುಕಿ, ಟಾಟಾ, ಮಹೀಂದ್ರಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಕಠಿಣ ಪೈಪೋಟಿ ನಡೆಯಬಹುದು.
ಇದನ್ನೂ ಓದಿ: ಭಾರತದಲ್ಲಿ ಆ್ಯಪಲ್ನಂತಹ ಮೊಬೈಲ್ ಕಂಪನಿ ಸದ್ಯದಲ್ಲೇ ಶುರುವಾಗುತ್ತಾ? ಡಾವೊಸ್ನಲ್ಲಿ ಸುಳಿವು ಕೊಟ್ಟ ಸಚಿವರು
ಅಮೆರಿಕ ಮತ್ತು ಚೀನಾ ಬಿಟ್ಟರೆ ವಿಶ್ವದಲ್ಲಿ ಭಾರತವೇ ಅತಿದೊಡ್ಡ ವಾಹನ ಮಾರುಕಟ್ಟೆ ಹೊಂದಿರುವುದು. ಸ್ಥಳೀಯ ಕಾರ್ ಕಂಪನಿಗಳನ್ನು ಉಳಿಸಲು ಸರ್ಕಾರ ಆಮದಿತ ಕಾರುಗಳ ಮೇಲೆ ಶೇ. 70ರಿಂದ ಶೇ. 110ರಷ್ಟು ಸುಂಕ ವಿಧಿಸುತ್ತದೆ. ಹೀಗಾಗಿ, ಕಾರುಗಳ ಮೇಲೆ ಟ್ಯಾರಿಫ್ ಇಳಿಸಲಿರುವುದು ಗಮನಾರ್ಹ ನಿರ್ಧಾರ ಎನಿಸಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ