AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಆ್ಯಪಲ್​ನಂತಹ ಮೊಬೈಲ್ ಕಂಪನಿ ಸದ್ಯದಲ್ಲೇ ಶುರುವಾಗುತ್ತಾ? ಡಾವೊಸ್​ನಲ್ಲಿ ಸುಳಿವು ಕೊಟ್ಟ ಸಚಿವರು

India will have its own mobile manufacturing unit in next one year, says Ashwini Vaishnaw: ಚೀನಾ ನಂತರ ಅತಿಹೆಚ್ಚು ಮೊಬೈಲ್ ಫೋನ್​ಗಳು ತಯಾರಾಗುವುದು ಭಾರತದಲ್ಲೇ. ಶೇ. 20ರಷ್ಟು ಐಫೋನ್​ಗಳು ಭಾರತದಲ್ಲಿ ತಯಾರಾಗುತ್ತಿವೆ. ಮೊಬೈಲ್ ಫೋನ್ ತಯಾರಿಕೆಗೆ ಬಿಡಿಭಾಗಗಳಿಂದ ಹಿಡಿದು ಅಸೆಂಬ್ಲಿಂಗ್​ವರೆಗೂ ಪೂರ್ಣ ಇಕೋಸಿಸ್ಟಂ ಭಾರತದಲ್ಲಿ ಸಿದ್ಧವಾಗುತ್ತಿದೆ. ಅಶ್ವಿನಿ ವೈಷ್ಣವ್ ಪ್ರಕಾರ ಇನ್ನೊಂದು ವರ್ಷದಲ್ಲಿ ಭಾರತೀಯ ಕಂಪನಿಯೊಂದು ಮೊಬೈಲ್ ಫೋನ್ ತಯಾರಿಕೆ ಆರಂಭಿಸಬಹುದು.

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 23, 2026 | 1:25 PM

Share

ಡಾವೊಸ್, ಜನವರಿ 23: ಭಾರತ ಮೊಬೈಲ್ ಫೋನ್ ತಯಾರಿಕೆಯಲ್ಲಿ ಚೀನಾ ನಂತರದ ಸ್ಥಾನ ಪಡೆದಿದೆ. ಅತಿಹೆಚ್ಚು ಮೊಬೈಲ್ ಫೋನ್ ತಯಾರಿಸುವ ದೇಶಗಳಲ್ಲಿ ಭಾರತದ್ದು ಎರಡನೇ ಸ್ಥಾನ. ಆ್ಯಪಲ್ ಕಂಪನಿಯ ಶೇ. 20ರಷ್ಟು ಐಫೋನ್​ಗಳು ಭಾರತದಲ್ಲೇ ತಯಾರಾಗುತ್ತಿವೆ. ಫೋನ್​ಗೆ ಬೇಕಾದ ಹೆಚ್ಚಿನ ಬಿಡಿಭಾಗಗಳೆಲ್ಲವೂ ಭಾರತದಲ್ಲೇ ಲಭ್ಯವಾಗುವಂತೆ ಪ್ರಬಲ ಇಕೋಸಿಸ್ಟಂ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಆ್ಯಪಲ್​ನಂತಹ ಮೊಬೈಲ್ ಫೋನ್ ಕಂಪನಿ ಭಾರತದಲ್ಲಿ ಶುರುವಾಗುತ್ತಾ, ಅಥವಾ ವಿದೇಶೀ ಕಂಪನಿಗಳಿಗೆ ಫೋನ್ ತಯಾರಿಸಿಕೊಡುವ ಕೆಲಸಗಳಿಗೆ ಮಾತ್ರ ಭಾರತ ಸೀಮಿತವಾಗಿರುತ್ತಾ? ಈ ಪ್ರಶ್ನೆಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಉತ್ತರಿಸಿದ್ದಾರೆ.

ಸ್ವಿಟ್ಜರ್​ಲ್ಯಾಂಡ್​ನ ಡಾವೊಸ್ ಸಮಿಟ್​ನಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ, ಅಶ್ವಿನಿ ವೈಷ್ಣವ್ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇನ್ನೊಂದು ವರ್ಷದಲ್ಲಿ ಭಾರತೀಯ ಬ್ರ್ಯಾಂಡ್ ಅನ್ನು ನೀವು ನೋಡಬಹುದು ಎಂದು ಎಲೆಕ್ಟ್ರಾನಿಕ್ಸ್ ಸಚಿವರೂ ಆದ ಅವರು ಹೇಳಿದ್ದಾರೆ

ಇದನ್ನೂ ಓದಿ: ಎಐ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳನ್ನು ಶ್ಲಾಘಿಸಿದ ಐಎಂಎಫ್ ಮುಖ್ಯಸ್ಥೆ

ಮೊಬೈಲ್ ಫೋನ್ ತಯಾರಿಕೆಗೆ ಬೇಕಾದ ಹೋಮ್​ವರ್ಕ್ ಮುಗಿಸಿದ್ದೇವೆ. ನಮ್ಮ ದೇಶದಲ್ಲಿ ಉತ್ತಮವಾದ ಎಲೆಕ್ಟ್ರಾನಿಕ್ಸ್ ಇಕೋಸಿಸ್ಟಂ ಅನ್ನು ಹೊಂದಿದ್ದೇವೆ. ನಮ್ಮದೇ ಭಾರತೀಯ ಬ್ರ್ಯಾಂಡ್ ಮತ್ತು ಸಾಧನಗಳನ್ನು ಹೊಂದುವ ಸಮಯ ಬಂದಿದೆ ಎಂದು ಅಶ್ವಿನಿ ವೈಷ್ಣವ್ ವಿವರಿಸಿದ್ದಾರೆ.

‘ಮೊಬೈಲ್ ಫೋನ್​ಗೆ ಬೇಕಾಗಿರುವ ಸಾವಿರಾರು ಸರಕುಗಳನ್ನು ತಯಾರಿಸುವಂತಹ ಇಡೀ ಇಕೋಸಿಸ್ಟಂ ಜೊತೆ ಇವತ್ತು ಮತ್ತು ನಿನ್ನೆ ಮಾತುಕತೆಗಳನ್ನು ನಡೆಸಿದ್ದೇವೆ. ಈ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆ ಆಶಾದಾಯಕವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಬ್ರ್ಯಾಂಡ್ ಯಾವಾಗ ನಿರೀಕ್ಷಿಸಬಹುದು ಎನ್ನುವ ಪ್ರಶ್ನೆಗೆ ಉತ್ತರಿಸಿದ ವೈಷ್ಣವ್, ‘ಬಹಳ ಶೀಘ್ರದಲ್ಲೇ, ಇನ್ನೊಂದು ವರ್ಷ ಅಥವಾ 18 ತಿಂಗಳೊಳಗೆ ನಮ್ಮದೇ ಭಾರತೀಯ ಬ್ರ್ಯಾಂಡ್ ಹೊಂದಿರುತ್ತೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಐ ಟೆಕ್ನಾಲಜಿಯಲ್ಲಿ ಅಮೆರಿಕ, ಚೀನಾ ಸಮಕ್ಕೆ ಭಾರತ ಬೆಳೆಯಬಲ್ಲುದೆ? ಡಾವೊಸ್ ಸಮಿಟ್​ನಲ್ಲಿ ಭಾರತದ ಎಐ ಪ್ಲಾನ್ ಬಿಚ್ಚಿಟ್ಟ ಎ ವೈಷ್ಣವ್

ಅಶ್ವಿನಿ ವೈಷ್ಣವ್ ಅವರು ವರ್ಲ್ಡ್ ಎಕನಾಮಿಕ್ ಫೋರಂ ಸಭೆಯಲ್ಲಿ ಭಾರತದ ಎಐ ಮತ್ತು ಆರ್ಥಿಕ ಅಭಿವೃದ್ಧಿ ಹಾಗೂ ಸರ್ಕಾರ ತಂದಿರುವ ಸುಧಾರಣಾ ಕ್ರಮಗಳ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ