
ನವದೆಹಲಿ, ಅಕ್ಟೋಬರ್ 13: ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಬೃಹತ್ ಅಣೆಕಟ್ಟೆ ಕಟ್ಟಲು ಅಣಿಗೊಂಡಿರುವ ಚೀನಾದ (China) ನಡೆಗೆ ಪ್ರತಿಯಾಗಿ ಭಾರತವೂ ಮೆಗಾ ಪ್ಲಾನ್ ಹಾಕಿದೆ. ಬ್ರಹ್ಮಪುತ್ರ ನದಿಪಾತ್ರದಾದ್ಯಂತ (Brahmaputra river basin) ವಿವಿಧ ಜಲವಿದ್ಯುತ್ ಯೋಜನೆಗಳನ್ನು (Hydro Power Projects) ಕೈಗೊಳ್ಳಲು ಹೊರಟಿರುವ ಭಾರತವು ಇವುಗಳಿಂದ 76 ಗಿ.ವ್ಯಾ. ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ. ಇದಕ್ಕಾಗಿ 6.4 ಲಕ್ಷ ಕೋಟಿ ರೂ ವೆಚ್ಚವಾಗುವ ನಿರೀಕ್ಷೆ ಇದೆ.
2047ರಷ್ಟರಲ್ಲಿ ಈ ಯೋಜನೆಗಳನ್ನು ಕಾರ್ಯಗತಗೊಳಿಸುವುದು, ಆ ವೇಳೆಗೆ ಸೃಷ್ಟಿಯಾಗುವ ವಿದ್ಯುತ್ ಬೇಡಿಕೆಯನ್ನು ತಣಿಸಲು ಇದು ನೆರವಾಗುವ ನಿರೀಕ್ಷೆ ಇದೆ. ಕೇಂದ್ರೀಯ ವಿದ್ಯುತ್ ಪ್ರಾಧಿಕಾರವಾದ ಸಿಇಎ ಇಂದು ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಈ ಮಹಾ ಯೋಜನೆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇದೆ. ಅದರ ಪ್ರಕಾರ ಬ್ರಹ್ಮಪುತ್ರ ನದಿ ಹರಿಯುವ ಪ್ರದೇಶಗಳಾದ್ಯಂತ ವಿವಿಧೆಡೆ 208 ದೊಡ್ಡ ಜಲವಿದ್ಯುತ್ ಘಟಕಗಳನ್ನು ನಿರ್ಮಿಸಲಾಗುತ್ತದೆ. ಇವುಗಳಿಂದ 64.9 ಗಿ.ವ್ಯಾ. ವಿದ್ಯುತ್ ತಯಾರಿಸುವ ಸಾಮರ್ಥ್ಯ ಇರಬಹುದು. ಇದರ ಜೊತೆಗೆ 11.1 ಗಿ.ವ್ಯಾ. ವಿದ್ಯುತ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಘಟಕಗಳನ್ನೂ ನಿರ್ಮಿಸುವುದು ಈ ಯೋಜನೆಯ ಆಶಯವಾಗಿದೆ.
ಇದನ್ನೂ ಓದಿ: ಸಾಲಕ್ಕೆ ಹೆದರಿ ಕವಡೆಕಾಸಿಗೆ ಆ್ಯಪಲ್ ಷೇರು ಮಾರಿದ್ದ ವಾಯ್ನೆ; ಇವತ್ತು ಷೇರುಮೌಲ್ಯ 26 ಲಕ್ಷ ಕೋಟಿ ರೂ
ಬ್ರಹ್ಮಪುತ್ರ ನದಿ ಹುಟ್ಟುವುದು ಚೀನಾದ ಟಿಬೆಟ್ ಪ್ರಾಂತ್ಯದಲ್ಲಿ. ಅಲ್ಲಿ ಆ ನದಿಗೆ ಯಾರ್ಲುಂಗ್ ಝಾಂಗ್ಬೋ (Yarlung Zhangbo) ಎನ್ನುವ ಹೆಸರಿದೆ. ಈ ಬ್ರಹ್ಮಪುತ್ರ ನದಿ ಚೀನಾ, ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹರಿದು ಸಮುದ್ರ ಸೇರುತ್ತದೆ. ಭಾರತದಲ್ಲಿ ಅತಿಹೆಚ್ಚು ದೂರ ಕ್ರಮಿಸಿ ಹೋಗುತ್ತದೆ.
ಭಾರತದಲ್ಲಿ ಈ ನದಿಯು ಅರುಣಾಚಲಪ್ರದೇಶ, ಅಸ್ಸಾಂ, ಸಿಕ್ಕಿಂ, ಮಿಝೋರಾಂ, ಮೇಘಾಲಯ, ಮಣಿಪುರ್, ನಾಗಾಲ್ಯಾಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಹರಿದು ಹೋಗುತ್ತದೆ. ಅದರಲ್ಲೂ ಮುಖ್ಯವಾಗಿ ಅರುಣಾಚಲಪ್ರದೇಶಕ್ಕೆ ಈ ನದಿ ಜೀವಾಳವಾಗಿದೆ. ಈ ಸುದೀರ್ಘ ನದಿಪಾತ್ರ ಇರುವ ಬ್ರಹ್ಮಪುತ್ರದ ನೀರನ್ನು ಜಲವಿದ್ಯುತ್ ಯೋಜನೆಗೆ ಬಳಸಿಕೊಳ್ಳುವ ಹೇರಳ ಅವಕಾಶ ಭಾರತಕ್ಕಿದೆ.
ಇದನ್ನೂ ಓದಿ: ಸೆಪ್ಟೆಂಬರ್ನಲ್ಲಿ ಹಣದುಬ್ಬರ ಕೇವಲ ಶೇ 1.54; ಎಂಟು ವರ್ಷದಲ್ಲೇ ಅತ್ಯಂತ ಕಡಿಮೆ ಬೆಲೆ ಏರಿಕೆ ಮಟ್ಟ
ಬ್ರಹ್ಮಪುತ್ರ ನದಿ ಅಥವಾ ಯಾರ್ಲುಂಗ್ ಝಾಂಗ್ಬೊ ನದಿಗೆ ಅಡ್ಡಲಾಗಿ ಚೀನಾ ಬೃಹತ್ ಅಣೆಕಟ್ಟೆಯನ್ನು ನಿರ್ಮಿಸಲು ಹೊರಟಿದೆ. ಇದು ವಿಶ್ವದ ಅತಿದೊಡ್ಡ ಡ್ಯಾಂಗಳಲ್ಲಿ ಒಂದೆನಿಸಲಿದೆ. ಇದರಿಂದ ಭಾರತಕ್ಕೆ ಹರಿದುಬರುವ ನೀರು ಇಳಿಕೆ ಆಗುವ ಭಯ ಇದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಭಾರತದೊಳಗೆ ಹರಿಯುವ ಬ್ರಹ್ಮಪುತ್ರ ನದಿ ನೀರು ಗಣನೀಯವಾಗಿ ತಗ್ಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ