
ನವದೆಹಲಿ, ಅಕ್ಟೋಬರ್ 16: ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವುದಾಗಿ ನರೇಂದ್ರ ಮೋದಿ ತಮಗೆ ಭರವಸೆ ನೀಡಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ (Donald Trump) ನೀಡಿರುವ ಹೇಳಿಕೆ ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಚಾರದ ಬಗ್ಗೆ ಭಾರತ ಅಧಿಕೃತವಾಗಿ ಪ್ರತಿಕ್ರಿಯಿಸಿದೆ. ಭಾರತೀಯ ಗ್ರಾಹಕನ ಹಿತಾಸಕ್ತಿಯ ರಕ್ಷಣೆಯೇ ಸರ್ಕಾರದ ಆದ್ಯತೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
‘ಭಾರತ ಸಾಕಷ್ಟು ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ. ಜಾಗತಿಕವಾಗಿ ಇಂಧನದ ಪರಿಸ್ಥಿತಿ ಪ್ರಕ್ಷುಬ್ದವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಗ್ರಾಹಕನ ಹಿತಾಸಕ್ತಿಗಳನ್ನು ರಕ್ಷಿಸುವುದು ನಮ್ಮ ನಿರಂತರ ಆದ್ಯತೆಯಾಗಿದೆ. ಇದೇ ಗುರಿಯು ನಮ್ಮ ಆಮದು ನೀತಿಗಳನ್ನು ಪ್ರಭಾವಿಸಿದೆ’ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆ ನೀಡಿದೆ.
ಇದನ್ನೂ ಓದಿ: ಭಾರತ ರಷ್ಯಾದ ತೈಲವನ್ನು ಖರೀದಿಸುವುದಿಲ್ಲ, ಮೋದಿ ಭರವಸೆ ಎಂದ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷರ ಗೃಹ ಕಚೇರಿಯಾದ ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿರುವಾಗ ಡೊನಾಲ್ಡ್ ಟ್ರಂಪ್ ಅವರು ರಷ್ಯನ್ ತೈಲ ವಿಚಾರ ಪ್ರಸ್ತಾಪಿಸಿದರು. ರಷ್ಯಾದಿಂದ ತೈಲ ಖರೀದಿಯನ್ನು ತಮ್ಮ ದೇಶ ನಿಲ್ಲಿಸುವುದಾಗಿ ನರೇಂದ್ರ ಮೋದಿ ತಮಗೆ ಭರವಸೆ ಕೊಟ್ಟರು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
‘ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವುದು ನನಗೆ ಇಷ್ಟ ಆಗುತ್ತಿಲ್ಲ. ರಷ್ಯಾದಿಂದ ತೈಲ ಪಡೆಯುವುದಿಲ್ಲ ಎಂದು ಇವತ್ತು ಅವರು ನನಗೆ ಭರವಸೆ ನೀಡಿದರು. ಕೂಡಲೇ ಅದನ್ನು ಮಾಡಲು ಆಗುವುದಿಲ್ಲ. ಸ್ವಲ್ಪ ಪ್ರಕ್ರಿಯೆಗಳು ಇರುತ್ತವೆ. ಆದರೆ, ಈ ಪ್ರಕ್ರಿಯೆ ಬಹಳ ಬೇಗ ಮುಗಿಯುತ್ತದೆ. ನಂತರ ಚೀನಾವನ್ನೂ ನಾವು ಒಪ್ಪಿಸುತ್ತೇವೆ’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ಈ ವರ್ಷ ಬಿಗ್ ಕ್ರ್ಯಾಷ್; ಕರೆನ್ಸಿಗೆ ಇರಲ್ಲ ಮೌಲ್ಯ; ಚಿನ್ನ, ಬೆಳ್ಳಿ, ಬಿಟ್ಕಾಯಿನ್ನಂತಹ ಆಸ್ತಿಗಳಿಗೆ ಉಳಿಗಾಲ: ಕಿಯೋಸಾಕಿ
ರಷ್ಯಾದಿಂದ ತೈಲ ಖರೀದಿ ವ್ಯವಹಾರದಲ್ಲಿ ತೊಡಗಿರುವ 90 ಸಂಸ್ಥೆಗಳುಮತ್ತು ವ್ಯಕ್ತಿಗಳ ಮೇಲೆ ಬ್ರಿಟನ್ ದೇಶ (ಯುಕೆ) ನಿಷೇಧ ಹಾಕಿದೆ. ಈ ನಿಷೇಧಿತ ಸಂಸ್ಥೆಗಳಲ್ಲಿ ಭಾರತದ ನಯಾರಾ ಎನರ್ಜಿ ಲಿಮಿಟೆಡ್ (Nayara Energy Ltd) ಕೂಡ ಸೇರಿದೆ.
ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ ಈಗ ಅದರ ಇಂಧನವೇ ಪ್ರಮುಖ ಆದಾಯ ಮೂಲವಾಗಿದೆ. ಈ ಆದಾಯ ಮೂಲವನ್ನು ಮೊಟಕುಗೊಳಿಸಲು ಅಮೆರಿಕ ಪ್ರಯತ್ನಿಸುತ್ತಿದ್ದು, ಐರೋಪ್ಯ ರಾಷ್ಟ್ರಗಳ ಮೇಲೂ ಒತ್ತಡ ಹಾಕುತ್ತಿದೆ. ಇದರ ಬೆನ್ನಲ್ಲೇ ಬ್ರಿಟನ್ ದೇಶವು ನಯಾರಾ ಎನರ್ಜಿ ಹಾಗೂ ಇತರ ಸಂಸ್ಥೆಗಳ ಮೇಲೆ ನಿಷೇಧ ಹಾಕಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ