ನವದೆಹಲಿ, ಜನವರಿ 12: ಡಿಸೆಂಬರ್ ತಿಂಗಳ ರೀಟೇಲ್ ಹಣದುಬ್ಬರದ (retail inflation) ದತ್ತಾಂಶವನ್ನು ಸರ್ಕಾರ ಬಿಡುಗಡೆ ಮಾಡಿದೆ. ಅದರ ಪ್ರಕಾರ ಭಾರತದ ರೀಟೇಲ್ ಹಣದುಬ್ಬರ ಡಿಸೆಂಬರ್ 2023ರಲ್ಲಿ ಶೇ. 5.69ಕ್ಕೆ ಏರಿದೆ. ನವೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 5.55ರಷ್ಟಿತ್ತು. ಕಳೆದ ವರ್ಷದ (2022) ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಈ ಬಾರಿ ಹಣದುಬ್ಬರ ಕಡಿಮೆ ಆಗಿದೆ. 2022ರ ಡಿಸೆಂಬರ್ನಲ್ಲಿ ರೀಟೇಲ್ ಇನ್ಫ್ಲೇಶನ್ ಶೇ. 5.72ರಷ್ಟಿತ್ತು. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಇಂದು ಶುಕ್ರವಾರ (ಜ. 12) ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಈ ವಿವರಗಳು ಇವೆ.
ನವೆಂಬರ್ಗೆ ಹೋಲಿಸಿದರೆ ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಹೆಚ್ಚಲು ಪ್ರಮುಖ ಕಾರಣವಾಗಿದ್ದು ಆಹಾರ ಬೆಲೆ ಹೆಚ್ಚಳ. ಕಳೆದ ವರ್ಷದ (2022) ಡಿಸೆಂಬರ್ನಲ್ಲಿ ಆಹಾರ ಹಣದುಬ್ಬರ ಶೇ. 4.9ರಷ್ಟಿತ್ತು. ಈ ಬಾರಿ ಅದು ಶೇ. 9.53ರಷ್ಟಾಗಿದೆ. ನವೆಂಬರ್ ತಿಂಗಳಲ್ಲಿ ಶೇ. 8.7ರಷ್ಟು ಇತ್ತು.
ಇದನ್ನೂ ಓದಿ: Byjus Valuation: ಬೈಜುಸ್ಗೆ ಬ್ಲ್ಯಾಕ್ರಾಕ್ ಹೊಡೆತ; ಶೇ. 95ರಷ್ಟು ಮೌಲ್ಯ ಕುಸಿತ; 22ರಿಂದ 1ಕ್ಕೆ ಕುಸಿದ ಬೈಜೂಸ್
ಮೊನ್ನೆ ಮನಿಕಂಟ್ರೋಲ್ ಸಂಸ್ಥೆ ನಡೆಸಿದ 18 ಆರ್ಥಿಕ ತಜ್ಞರ ಅಭಿಪ್ರಾಯ ಸಮೀಕ್ಷೆ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 6ಕ್ಕೆ ಸಮೀಪ ಇರಬಹುದು ಎಂದು ಅಂದಾಜಿಸಲಾಗಿತ್ತು. ಅದಕ್ಕಿಂತಲೂ ತುಸು ಕಡಿಮೆ ಹಣದುಬ್ಬರ ದಾಖಲಾಗಿದೆ.
ಭಾರತದಲ್ಲಿ ಹಣದುಬ್ಬರವನ್ನು ಶೇ. 4ಕ್ಕೆ ನಿಯಂತ್ರಿಸಬೇಕೆನ್ನುವುದು ಆರ್ಬಿಐನ ಮೂಲ ಗುರಿ. ಈ ಶೇ. 4ಕ್ಕೆ 2 ಪ್ರತಿಶತದಷ್ಟು ಆಸುಪಾಸಿನಲ್ಲಿ ಹಣದುಬ್ಬರವನ್ನು ಹಿಡಿದಿಡುವುದು ಆರ್ಬಿಐಗೆ ಸದ್ಯದ ಗುರಿ. ಅಂದರೆ, ಶೇ. 2ರಿಂದ 6 ಅನ್ನು ಆರ್ಬಿಐ ಹಣದುಬ್ಬರ ಗುರಿಯ ತಾಳಿಕೆ ಮಿತಿಯಾಗಿ ನಿಗದಿ ಮಾಡಿದೆ. ಅಂದರೆ, ಹಣದುಬ್ಬರ ಶೇ. 2ಕ್ಕಿಂತ ಕೆಳಗೆ ಕುಸಿಯದಂತೆ, ಮತ್ತು ಶೇ. 6ಕ್ಕಿಂತ ಮೇಲೆ ಏರದಂತೆ ನೋಡಿಕೊಳ್ಳುವುದು ಆರ್ಬಿಐಗೆ ಸವಾಲಾಗಿದೆ. ಸದ್ಯಕ್ಕೆ ಈ ತಾಳಿಕೆಯ ಮಿತಿಯಲ್ಲಿ ಹಣದುಬ್ಬರ ಇದೆ.
ಇದೇ ವೇಳೆ, 2023ರ ನವೆಂಬರ್ ತಿಂಗಳಲ್ಲಿ ಭಾರತದ ಔದ್ಯಮಿಕ ಉತ್ಪಾದನೆ (ಐಐಪಿ) ಶೇ. 2.4ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷದಲ್ಲಿ ಇದು ಶೇ. 7.6ರಷ್ಟು ಹೆಚ್ಚಾಗಿತ್ತು. ಉತ್ಪಾದನಾ ವಲಯದ ಔಟ್ಪುಟ್ ಶೇ 1.2ರಷ್ಟು ಹೆಚ್ಚಿರುವುದು ಈ ದತ್ತಾಂಶದಿಂದ ತಿಳಿದುಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ