ನವದೆಹಲಿ, ಆಗಸ್ಟ್ 12: ಜುಲೈ ತಿಂಗಳಲ್ಲಿ ಭಾರತದ ರೀಟೇಲ್ ಹಣದುಬ್ಬರ ದರ ಶೇ. 3.5ರಷ್ಟಿರುವುದು ತಿಳಿದಿಬಂದಿದೆ. ಜೂನ್ ತಿಂಗಳಲ್ಲಿ ಹಣದುಬ್ಬರ ಶೇ. 5.1ಕ್ಕೆ ಏರಿತ್ತು. ಈಗ ಆರ್ಬಿಐನ ಹಣದುಬ್ಬರ ಗುರಿಯಾದ ಶೇ. 4ಕ್ಕಿಂತ ಕಡಿಮೆ ಮಟ್ಟಕ್ಕೆ ಅದು ಇಳಿದಿದೆ. ಕಳೆದ 5 ವರ್ಷದಲ್ಲೇ ಇದು ಅತಿ ಕಡಿಮೆ ಹಣದುಬ್ಬರ ದರವಾಗಿದೆ. ಇಂದು (ಆ. 12) ಬಿಡುಗಡೆ ಮಾಡಲಾದ ದತ್ತಾಂಶದಲ್ಲಿ ಈ ವಿವರ ಇದೆ.
ದಿಢೀರನೇ ಇಷ್ಟೊಂದು ಹಣದುಬ್ಬರ ದರ ಇಳಿಕೆ ಆಗುವುದು ನಿರೀಕ್ಷಿತವೇ ಆಗಿತ್ತು. ಅದಕ್ಕೆ ಕಾರಣ ದರಕ್ಕೆ ನಿಗದಿ ಮಾಡಲಾದ ಬೇಸ್ನಲ್ಲಿ ಬದಲಾವಣೆ ಆಗಿದ್ದು. ಅಂದರೆ 2023ರ ಜುಲೈನಲ್ಲಿ ಹಣದುಬ್ಬರ ಶೇ. 7.4ರಷ್ಟಿತ್ತು. ಅದರ ಆಧಾರದ ಮೇಲೆ ಈ ಜುಲೈನ ಹಣದುಬ್ಬರ ದರ ಕಡಿಮೆ ಮಟ್ಟದಲ್ಲಿದೆ. ಹೆಚ್ಚಿನ ಸಮೀಕ್ಷೆಗಳಲ್ಲಿ ಆರ್ಥಿಕ ತಜ್ಞರು ಇದೇ ಕಾರಣಕ್ಕೆ ಜುಲೈನಲ್ಲಿ ಹಣದುಬ್ಬರ ಕಡಿಮೆ ಇರಬಹುದು ಎಂದು ಅಂದಾಜು ಮಾಡಿದ್ದರು. ಈ ಸಮೀಕ್ಷೆಗಳ ಪ್ರಕಾರ ಜುಲೈ ಹಣದುಬ್ಬರ ಶೆ. 3.24ರಿಂದ 4ರವರೆಗೆ ಇರಬಹುದು ಎಂದು ಹೇಳಲಾಗಿತ್ತು.
ಜುಲೈನಿಂದ ಸೆಪ್ಟಂಬರ್ವರೆಗಿನ ತ್ರೈಮಾಸಿಕದಲ್ಲಿ ಹಣದುಬ್ಬರ ಶೇ. 4.4ರಷ್ಟಿರಬಹುದು ಎಂದು ಆರ್ಬಿಐ ಅಂದಾಜು ಮಾಡಿತ್ತು. ಆದರೆ, ವಾಸ್ತವದಲ್ಲಿ ಹಣದುಬ್ಬರ ಈ ಅವಧಿಯಲ್ಲಿ ಇನ್ನೂ ಕಡಿಮೆ ಇರುವ ಸಂಭಾವ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ವಯಸ್ಸಾಗಿರುವ ಮನೆ ಮಾಲೀಕರಿಗೆ ಈ ಮೂರು ಕಷ್ಟಗಳು: ಸಿಇಒ ರಾಧಿಕಾ ಗುಪ್ತಾ ತೆರೆದಿಟ್ಟ ವಾಸ್ತವ ಸಂಗತಿ
ದೇಶದ ಜನರು ಬಳಸುವ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಆಗುವ ವ್ಯತ್ಯಯವನ್ನು ದಾಖಲಿಸುತ್ತದೆ ಈ ಹಣದುಬ್ಬರ. ಆಹಾರ ವಸ್ತುಗಳಿಂದ ಹಿಡಿದು ಪೆಟ್ರೋಲ್, ಡೀಸಲ್ವರೆಗೆ ವಿವಿಧ ಉತ್ಪನ್ನಗಳ ಬೆಲೆ ಏರಿಕೆ ಅಥವಾ ಇಳಿಕೆಯನ್ನು ಈ ಹಣದುಬ್ಬರ ಪ್ರತಿಫಲಿಸುತ್ತದೆ. ಕೆಲ ನಿರ್ದಿಷ್ಟ ಉತ್ಪನ್ನಗಳನ್ನು ಈ ಲೆಕ್ಕಾಚಾರಕ್ಕೆ ಬಳಸಲಾಗುತ್ತದೆ. ಅವುಗಳ ಅವಶ್ಯಕತೆಗೆ ಅನುಗುಣವಾಗಿ ತೂಕ ನೀಡಲಾಗುತ್ತದೆ. ಅಂದರೆ ಬಹಳ ಅಗತ್ಯವಾದ ಆಹಾರವಸ್ತುಗಳ ಬೆಲೆಗೆ ಹೆಚ್ಚು ಪ್ರಾಶಸ್ತ್ಯ ಕೊಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ