
ನವದೆಹಲಿ, ಡಿಸೆಂಬರ್ 5: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭೇಟಿಯಾದ ಬೆನ್ನಲ್ಲೇ ಎರಡೂ ದೇಶಗಳ ನಡುವೆ 2030ರವರೆಗೆ ಆರ್ಥಿಕ ಸಹಕಾರಕ್ಕೆ ಒಪ್ಪಂದ ಆಗಿದೆ. ಭಾರತ ರಷ್ಯಾ ಬ್ಯುಸಿನೆಸ್ ಫೋರಂ ಸಭೆ (India Russia Business Forum) ಆರಂಭಕ್ಕೆ ಮುನ್ನ ಈ ವಿಷನ್ 2030 ದಾಖಲೆಗೆ ಎರಡೂ ದೇಶಗಳು ಸಹಿ ಹಾಕಿವೆ.
‘ಆರ್ಥಿಕ ಸಹಕಾರವನ್ನು ಹೆಚ್ಚಿಸಲು ಇವತ್ತು ನಾವು ವಿಷನ್ 2030 ಡಾಕ್ಯುಮೆಂಟ್ಗೆ ಸಹಿ ಹಾಕಿದ್ದೇವೆ. ನಾವಿಬ್ಬರೂ ಇವತ್ತು ಭಾರತ ರಷ್ಯಾ ಬ್ಯುಸಿನೆಸ್ ಫೋರಂನಲ್ಲಿ ಭಾಗಿಯಾಗಲಿದ್ದೇವೆ. ಈ ಪ್ಲಾಟ್ಫಾರ್ಮ್ನಿಂದ ನಮ್ಮ ಬ್ಯುಸಿನೆಸ್ ಸಂಬಂಧಗಳು ಬಲಪಡಬಹುದು. ಪರಸ್ಪರ ಉತ್ಪಾದನೆ ಮತ್ತು ನಾವೀನ್ಯತೆಗಳಿಗೆ ಹೊಸ ದಾರಿಗಳು ಸಿಗಬಹುದು ಎಂದು ಭಾವಿಸಿದ್ದೇನೆ. ಎರಡೂ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಹೊಸ ಹೆಜ್ಜೆಗಳನ್ನು ಇಡುತ್ತಿವೆ’ ಎಂದು ಪುಟಿನ್ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ತೈಲ ಪೂರೈಕೆ ಮುಂದುವರೆಸುತ್ತೇವೆ; ದೆಹಲಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿಕೆ
2030ರ ವಿಷನ್ ಡಾಕ್ಯುಮೆಂಟ್ನಲ್ಲಿ ಆರ್ಥಿಕ ಸಹಕಾರ ಮುಂದುವರಿಕೆಗೆ ಒಂದು ರೋಡ್ಮ್ಯಾಪ್ ಸಿದ್ಧವಿದೆ. ಆದ್ಯತಾ ವಲಯಗಳಲ್ಲಿ ಬೆಳವಣಿಗೆಗೆ ಪುಷ್ಟಿ ಸಿಗಬಹುದು. ಎರಡೂ ದೇಶಗಳ ನಡುವೆ ದೀರ್ಘಕಾಲೀನ ಆರ್ಥಿಕ ಸಂಬಂಧವನ್ನು ಗಟ್ಟಿಗೊಳಿಸುವ ನಿರೀಕ್ಷೆ ಇದೆ.
ಜಂಟಿಯಾಗಿ ಯೂರಿಯಾ ಉತ್ಪಾದನೆ ಮಾಡಲು ಎರಡೂ ದೇಶಗಳು ಪ್ರಯತ್ನಿಸಲಿವೆ. ಇಂಟರ್ನ್ಯಾಷನಲ್ ನಾರ್ತ್ ಸೌತ್ ಟ್ರಾನ್ಸ್ಪೋರ್ಟ್ ಕಾರಿಡಾರ್, ದಿ ನಾರ್ತರ್ನ್ ಸೀ ರೂಟ್, ಚೆನ್ನೈ ವ್ಲಾದಿವೋಸ್ಟೋಕ್ ಮಾರಿಟೈಮ್ ಲಿಂಕ್ ಇತ್ಯಾದಿ ಕನೆಕ್ಟಿವಿಟಿ ಕಾರಿಡಾರ್ಗಳನ್ನು ನಿರ್ಮಿಸಲು ಯತ್ನಿಸಲಾಗುವುದು. ಇವುಗಳು ಸಪ್ಲೈ ಚೈನ್ಗಳನ್ನು ಬಲಪಡಿಸಲು ನೆರವಾಗಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ರಷ್ಯಾದ ಪ್ರವಾಸಿಗರಿಗೆ 30 ದಿನಗಳಲ್ಲಿ ಉಚಿತ ಇ-ವೀಸಾ; ಪುಟಿನ್ ಸಮ್ಮುಖದಲ್ಲಿ ಪ್ರಧಾನಿ ಮೋದಿ ಘೋಷಣೆ
ರಷ್ಯನ್ ನಾಗರಿಕರು ಭಾರತಕ್ಕೆ ಬರುವುದಿದ್ದರೆ ಉಚಿತವಾದ 30 ದಿನ ಇ-ಟೂರಿಸ್ಟ್ ವೀಸಾ ಹಾಗೂ 30 ದಿನ ಗ್ರೂಪ್ ಟೂರಿಸ್ಟ್ ವೀಸಾ ನೀಡುವ ಒಂದು ಸೌಕರ್ಯವನ್ನು ಶೀಘ್ರದಲ್ಲೇ ನೀಡಲಾಗುವುದು ಎಂದೂ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ