ರಫ್ತು ಮಾರುಕಟ್ಟೆಯಲ್ಲಿ ಭಾರತದ ವೃದ್ಧಿ; ಪೆಟ್ರೋಲಿಯಂ, ಹರಳು ಇತ್ಯಾದಿ ವಸ್ತುಗಳ ಭರ್ಜರಿ ರಫ್ತು

|

Updated on: Nov 03, 2024 | 7:14 PM

India's exports rise: ಭಾರತ ರಫ್ತು ವಲಯದಲ್ಲಿ ವರ್ಷದಿಂದ ವರ್ಷಕ್ಕೆ ಬಲ ಹೆಚ್ಚಿಸಿಕೊಳ್ಳುತ್ತಿದೆ. ಕಳೆದ ಐದು ವರ್ಷದಲ್ಲಿ ಭಾರತವು ಪೆಟ್ರೋಲಿಯಂ, ಹರಳು, ಕೃಷಿರಾಸಾಯನಿಕ, ಸಕ್ಕರೆ ಇತ್ಯಾದಿ ವಸ್ತುಗಳ ರಫ್ತು ಹೆಚ್ಚಳ ಕಂಡಿದೆ. ಹರಳಿನಲ್ಲಿ ಭಾರತ ವಿಶ್ವದ ಅಗ್ರಗಣ್ಯ ರಫ್ತುದಾರ ದೇಶವಾಗಿದೆ. ಪೆಟ್ರೋಲಿಯಂ, ಸಕ್ಕರೆ ರಫ್ತಿನಲ್ಲಿ ಎರಡನೇ ಅತಿದೊಡ್ಡ ರಫ್ತು ದೇಶವಾಗಿದೆ.

ರಫ್ತು ಮಾರುಕಟ್ಟೆಯಲ್ಲಿ ಭಾರತದ ವೃದ್ಧಿ; ಪೆಟ್ರೋಲಿಯಂ, ಹರಳು ಇತ್ಯಾದಿ ವಸ್ತುಗಳ ಭರ್ಜರಿ ರಫ್ತು
ರಫ್ತು
Follow us on

ನವದೆಹಲಿ, ನವೆಂಬರ್ 3: ಕಳೆದ ಐದು ವರ್ಷದಲ್ಲಿ ವಿವಿಧ ವಲಯಗಳಲ್ಲಿ ಭಾರತದ ರಫ್ತು ಸಾಮರ್ಥ್ಯ ಹೆಚ್ಚುತ್ತಿದೆ. ಅದರಲ್ಲೂ ಪೆಟ್ರೋಲಿಯಂ, ಜೆಮ್​ಸ್ಟೋನ್ (ಹರಳು), ಆಗ್ರೋಕೆಮಿಕಲ್ ಮತ್ತು ಸಕ್ಕರೆ ಕ್ಷೇತ್ರಗಳಲ್ಲಂತೂ ಭಾರತ ಜಾಗತಿಕ ಪ್ರಮುಖ ರಫ್ತು ದೇಶಗಳ ಸಾಲಿಗೆ ಸೇರಿದೆ. ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2018ರಿಂದ 2023ರವರೆಗೆ ಎಲೆಕ್ಟ್ರಿಕಲ್ ವಸ್ತು, ನ್ಯೂಮ್ಯಾಟಿಕ್ ಟಯರ್, ಟ್ಯಾಪ್, ವಾಲ್ವ್, ಸೆಮಿಕಂಡಕ್ಟರ್ ಸಾಧನ ಇತ್ಯಾದಿ ಹಲವು ಉತ್ಪನ್ನಗಳ ರಫ್ತು ಪ್ರಮಾಣ ಹೆಚ್ಚಾಗಿದೆ.

ಭಾರತವು ಕಚ್ಚಾ ತೈಲವನ್ನು ಆಮದು ಮಾಡಿಕೊಂಡು, ಅದನ್ನು ಸಂಸ್ಕರಿಸಿ ಪೆಟ್ರೋಲಿಯಂ ಉತ್ಪನ್ನಗಳಾಗಿ ಮಾಡಿ ಅದನ್ನು ರಫ್ತು ಮಾಡುತ್ತದೆ. 2023ರಲ್ಲಿ ಭಾರತವು ಮಾಡಿದ ಪೆಟ್ರೋಲಿಯಂ ರಫ್ತು 84.96 ಬಿಲಿಯನ್ ಡಾಲರ್ ಮೊತ್ತವಿದೆ. ಜಾಗತಿಕವಾಗಿ ಆಗುವ ಒಟ್ಟಾರೆ ಪೆಟ್ರೋಲಿಯಂ ರಫ್ತು ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇ. 12.59ರಷ್ಟಿದೆ. ವಿಶ್ವದ ಎರಡನೇ ಅತಿದೊಡ್ಡ ಪೆಟ್ರೋಲಿಯಂ ರಫ್ತುದಾರ ದೇಶವಾಗಿದೆ ಭಾರತ. 2018ರಲ್ಲಿ ಭಾರತದ ರಫ್ತು ಪಾಲು ಶೇ. 6.45 ಮಾತ್ರ ಇತ್ತು.

ಇದನ್ನೂ ಓದಿ: ಇದು ‘ಬೋಸ್’ ಕಥೆ..! ಬ್ರಿಟಿಷರಿಂದ ತಪ್ಪಿಸಿಕೊಂಡು ಅಮೆರಿಕಕ್ಕೆ ಎಸ್ಕೇಪ್ ಆಗಿದ್ದ ಅಪ್ಪ; 30,000 ಕೋಟಿ ರೂ ಉದ್ಯಮ ಕಟ್ಟಿದ ಮಗ

ಹರಳು ರಫ್ತಿನಲ್ಲಿ ಭಾರತ ನಂಬರ್ ಒನ್

ಅಮೂಲ್ಯ ಹರಳುಗಳ ಮಾರುಕಟ್ಟೆಯಲ್ಲಿ ಭಾರತ ವಿಶ್ವದ ನಂಬರ್ ಒನ್ ದೇಶವಾಗಿದೆ. ಜಾಗತಿಕ ರಫ್ತಿನಲ್ಲಿ ಭಾರತದ ಪಾಲು 2018ರಲ್ಲಿ ಶೇ. 16.27 ಇತ್ತು. 2023ರಲ್ಲಿ ಅದು ಶೇ. 36.53ಕ್ಕೆ ಏರಿದೆ. 1.52 ಬಿಲಿಯನ್ ಡಾಲರ್ ಮೌಲ್ಯದ ಹರಳುಗಳ ರಫ್ತು ಮಾಡಿದೆ.

ಸಕ್ಕರೆ ರಫ್ತಿನಲ್ಲಿ ನಾಲ್ಕು ಪಟ್ಟು ಹೆಚ್ಚಳ

ಭಾರತವು ಸಕ್ಕರೆ ರಫ್ತಿನಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನ ಹೊಂದಿದೆ. 2018ರಲ್ಲಿ ಭಾರತದ ಸಕ್ಕರೆ ರಫ್ತು 930 ಮಿಲಿಯನ್ ಡಾಲರ್ ಇತ್ತು. ಸಕ್ಕರೆ ರಫ್ತು ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇ. 4.17 ಇತ್ತು. ಐದು ವರ್ಷದ ಬಳಿಕ (2023) ಸಕ್ಕರೆ ರಫ್ತು 3.72 ಬಿಲಿಯನ್ ಡಾಲರ್ ಆಗಿದೆ. ಭಾರತದ ರಫ್ತು ಪಾಲು ಶೇ. 12.21ಕ್ಕೆ ಏರಿದೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ಕಾರುಗಳ ಮಾರಾಟದಲ್ಲಿ ಹೆಚ್ಚಳ; ಗರಿಗೆದರಿದ ಆಟೊಮೊಬೈಲ್ ಉದ್ಯಮ

ಕೀಟನಾಶಕ ಇತ್ಯಾದಿ ಆಗ್ರೋಕೆಮಿಕಲ್ ಉತ್ಪನ್ನಗಳ ರಫ್ತು ಕೂಡ ಐದು ವರ್ಷದಲ್ಲಿ ಗಣನೀಯವಾಗಿ ಹೆಚ್ಚಿರುವುದು ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬರುತ್ತದೆ. ರಬ್ಬರ್ ನ್ಯೂಮಾಟಿಕ್ ಟಯರ್ ಮಾರುಕಟ್ಟೆಯಲ್ಲಿ ಭಾರತದ ರಫ್ತು ಪಾಲು ಶೇ 3.3ರಷ್ಟಿದೆ. ಈ ರಫ್ತಿನಲ್ಲಿ ಐದು ವರ್ಷದಲ್ಲಿ ಭಾರತ 13ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಜಿಗಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ