ಇದು ‘ಬೋಸ್’ ಕಥೆ..! ಬ್ರಿಟಿಷರಿಂದ ತಪ್ಪಿಸಿಕೊಂಡು ಅಮೆರಿಕಕ್ಕೆ ಎಸ್ಕೇಪ್ ಆಗಿದ್ದ ಅಪ್ಪ; 30,000 ಕೋಟಿ ರೂ ಉದ್ಯಮ ಕಟ್ಟಿದ ಮಗ
Amar Gopal Bose birth anniversary: ಅತ್ಯುತ್ಕೃಷ್ಟ ಹೆಡ್ಫೋನ್, ಸ್ಪೀಕರ್ಗಳನ್ನು ತಯಾರಿಸುವ ಬೋಸ್ ಕಾರ್ಪೊರೇಶನ್ ಎನ್ನುವ ಸಂಸ್ಥೆಯ ಸಂಸ್ಥಾಪಕ ಅಮರ್ ಗೋಪಾಲ್ ಬೋಸ್ ಅವರ 96ನೇ ಜಯಂತಿ ನಿನ್ನೆ (ನ. 2) ಇತ್ತು. 30,000 ಕೋಟಿ ರೂ ಮೌಲ್ಯದ ತಮ್ಮ ಕಂಪನಿಯನ್ನು ಇವರು ಸಾಯುವ ಮುನ್ನ ಎಂಐಟಿಗೆ ಧಾರೆ ಎರೆದು ಕೊಟ್ಟಿದ್ದರು. ಅಮರ್ ಬೋಸ್ ಓದಿದ್ದು ಇದೇ ಎಂಐಟಿಯಲ್ಲೇ.
ನವದೆಹಲಿ, ನವೆಂಬರ್ 3: ಬೋಸ್ ಬ್ರ್ಯಾಂಡ್ನ ಹೆಡ್ಫೋನ್, ಸ್ಪೀಕರ್ ನೀವು ನೋಡಿರಬಹುದು, ಅಥವಾ ಬಳಸಿರಬಹುದು. ಈ ಬ್ರ್ಯಾಂಡ್ನ ಹಿಂದೆ ಬಹಳ ರೋಚಕ ಮತ್ತು ಕುತೂಹಲಕಾರಿ ಕಥೆ ಇದೆ. ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಮಗ, ಹಾಗೂ ಭಾರತೀಯ ಅಮೆರಿಕನ್ ವ್ಯಕ್ತಿಯಾದ ಅಮರ್ ಗೋಪಾಲ್ ಬೋಸ್ ಈ ಕಂಪನಿಯ ಸಂಸ್ಥಾಪಕ. ತಾನು ಸಾಯುವ ಮುನ್ನ ಸಂಸ್ಥೆಯ ತನ್ನ ಎಲ್ಲಾ ಷೇರುಪಾಲನ್ನು ತಾನು ಓದಿದ ಶಿಕ್ಷಣ ಸಂಸ್ಥೆಗೆ ಧಾರೆ ಎರೆದುಕೊಟ್ಟ ವ್ಯಕ್ತಿ ಇವರು. ನಿನ್ನೆ (ನ. 2) ಇವರ 96ನೇ ಜಯಂತಿ ದಿನ.
ಅಮರ್ ಗೋಪಾಲ್ ಬೋಸ್ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರ ನೋನಿ ಗೋಪಾಲ್ ಬೋಸ್. ಸ್ವಾತಂತ್ರ್ಯ ಪೂರ್ವದಲ್ಲಿ ಇಪ್ಪತ್ತರ ದಶಕದಲ್ಲಿ ಮಹಾತ್ಮ ಗಾಂಧಿ ಅವರ ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡಿದ್ದ ನೋನಿ, ಬ್ರಿಟಿಷರ ವಿರುದ್ಧ ಪಾಂಪ್ಲೆಟ್ಗಳನ್ನು ಬರೆದು ಜನರನ್ನು ಪ್ರೇರೇಪಿಸುವ ಕೆಲಸ ಮಾಡುತ್ತಿದ್ದರು. ಬ್ರಿಟಿಷ್ ಪೊಲೀಸರು ಇವರನ್ನು ಬಂಧಿಸಿ ಜೈಲಲ್ಲಿಟ್ಟರು. ಅಂಡಮಾನ್ ಜೈಲಿನಲ್ಲಿ ಇದ್ದ ಸಹಖೈದಿಗಳಲ್ಲಿ ಸಾವರ್ಕರ್ ಕೂಡ ಒಬ್ಬರು. ಇತರ ಹಲವು ಕೈದಿಗಳಂತೆ ನೋನಿ ಬೋಸ್ ಜೈಲಿಂದ ತಪ್ಪಿಸಿಕೊಂಡು ಮದ್ರಾಸ್ಗೆ ಹೋಗಿ ಅಲ್ಲಿಂದ ಹಡಗು ಹತ್ತಿ ಅಮೆರಿಕಕ್ಕೆ ಹೋಗುತ್ತಾರೆ.
ಜೇಬಲ್ಲಿ ಐದು ಡಾಲರ್ ಇಟ್ಟುಕೊಂಡು ಹೋಗಿದ್ದ ಬೋಸ್
ನೋನಿ ಬೋಸ್ ಅವರು ಅಮೆರಿಕಕ್ಕೆ ಹಡಗು ಹತ್ತಿದಾಗ ಜೇಬಲ್ಲಿ ಇದ್ದದ್ದು ಐದು ಡಾಲರ್ ಮಾತ್ರ. ತನ್ನ ಹೆಸರಿನ ಗುರುತಿಗೂ ಯಾವ ದಾಖಲೆ ಇಲ್ಲದೇ ನ್ಯೂಯಾರ್ಕ್ಗೆ ಕಾಲಿಟ್ಟಿದ್ದ ನೋನಿಗೆ ನೆರವಾಗಿದ್ದು ಗದ್ದರ್ ಪಕ್ಷದ ಸದಸ್ಯರು. ಫಿಲಡೆಲ್ಫಿಯಾದಲ್ಲಿ ನೋನಿ ರೇಡಿಯೋ ರಿಪೇರಿ ಬಿಸಿನೆಸ್ ಶುರು ಮಾಡುತ್ತಾರೆ. ಫ್ರೆಂಚ್ ಮತ್ತು ಜರ್ಮನ್ ಮೂಲದ ಅಮೆರಿಕನ್ ಯುವತಿ ಚಾರ್ಲೊಟ್ಟೆ ಅವರನ್ನು ಮದುವೆಯಾಗುತ್ತಾರೆ. 1929ರ ನವೆಂಬರ್ 2ರಂದು ಹುಟ್ಟಿದವರೇ ಅಮರ್ ಗೋಪಾಲ್ ಬೋಸ್.
ಇದನ್ನೂ ಓದಿ: ಭಾರತದಲ್ಲಿ ಕಲ್ಲಿದ್ದಲು, ಕಬ್ಬಿಣ ಅದಿರು ಉತ್ಪಾದನೆ, ವಿದ್ಯುತ್ ಬಳಕೆ ಹೆಚ್ಚಳ; ಪ್ರಬಲ ಆರ್ಥಿಕತೆಯ ಸೂಚಕ
ರೇಡಿಯೋ ರಿಪೇರಿ ಬಿಸಿನೆಸ್ ಮತ್ತು ಅಮರ್ ಬೋಸ್
ಅಪ್ಪನ ರೇಡಿಯೋ ರಿಪೇರಿ ಕೆಲಸವನ್ನು ಚಿಕ್ಕಂದಿನಿಂದಲೂ ನೋಡಿಕೊಂಡು ಬಂದಿದ್ದ ಅಮರ್ ಗೋಪಾಲ್ ಬೋಸ್ಗೆ ಆ ಕೆಲಸ ಬಹಳ ಸಹಜವಾಗಿ ಮೈಗೂಡಿತ್ತು. ಓದುವುದರ ಜೊತೆಗೆ ರೇಡಿಯೋ ರಿಪೇರಿ ಕೂಡ ಮಾಡುತ್ತಿದ್ದರು. ವಾರದಲ್ಲಿ ಎರಡು ದಿನ ಶಾಲೆಗೆ ರಜೆ ಹಾಕಿ ರೇಡಿಯೋ ರಿಪೇರಿ ಕೆಲಸ ಮಾಡುತ್ತಿದ್ದರು.
ಓದಿನಲ್ಲಿ ಚಾಣಾಕ್ಷ್ಯರಾಗಿದ್ದ ಅಮರ್ ಬೋಸ್ ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಮಾಡಿದರು. ಆಗಲೇ ಅವರು ಎಲೆಕ್ಟ್ರಾನಿಕ್ಸ್ ಸಂಸ್ಥೆ ಸ್ಥಾಪಿಸಿದರು. 1964ರಲ್ಲಿ ಬೋಸ್ ಕಾರ್ಪೊರೇಶನ್ ಸ್ಥಾಪನೆಯಾಯಿತು. ಮಿಲಿಟರಿಗಳಿಗಾಗಿ ಸ್ಪಷ್ಟವಾಗಿ ಕೇಳುವಂತಹ ಉತ್ಕೃಷ್ಟ ಗುಣಮಟ್ಟದ ಹೆಡ್ಫೋನ್ಗಳನ್ನು ಇವರ ಕಂಪನಿ ತಯಾರಿಸುತ್ತಿತ್ತು.
Nani Gopal, a revolutionary in Bengal in the 1902s had to flee Calcutta to avoid the British police and came to the US, where he took a job as a salesman & married an American schoolteacher His son, young Amar supplemented his family income by repairing radios. pic.twitter.com/MZZHBQkQhF
— Joy Bhattacharjya (@joybhattacharj) November 2, 2024
2013ರಲ್ಲಿ ಇವರು ನಿಧನರಾದಾಗ ಬೋಸ್ ಕಾರ್ಪೊರೇಶನ್ನಲ್ಲಿ ಉದ್ಯೋಗಿಗಳ ಸಂಖ್ಯೆ 8,000 ಇತ್ತು. ವಾರ್ಷಿಕ ಆದಾಯ 3.5 ಬಿಲಿಯನ್ ಡಾಲರ್ ಇತ್ತು. ಅಂದರೆ ಸುಮಾರು 30,000 ಕೋಟಿ ರೂ ಮೌಲ್ಯದ ಕಂಪನಿಯನ್ನು ಬಿಟ್ಟು ಹೋಗಿದ್ದರು. ಸಾಯುವ ಎರಡು ವರ್ಷ ಮುನ್ನ ಅಮರ್ ಗೋಪಾಲ್ ತಮ್ಮ ಕಂಪನಿಯನ್ನು ಎಂಐಟಿ ಸಂಸ್ಥೆಗೆ ದಾನ ಮಾಡಿ ಹೋಗಿದ್ದರು. ಇವತ್ತು ಬೋಸ್ ಸಂಸ್ಥೆಯನ್ನು ಎಂಐಟಿ ಕಡೆಯವರೇ ನಿರ್ವಹಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಖರ್ಗೆ ಕಣ್ಣಿಗೆ ‘ಕಾಲ್ತುಳಿತ’ ಕಾಣುತ್ತೆ ಹೊರತು ಕಾರ್ಮಿಕ ಸಂಖ್ಯೆ ಹೆಚ್ಚಾಗಿದ್ದು ಕಾಣಲ್ಲ: ಸಚಿವ ಹರ್ದೀಪ್ ಸಿಂಗ್
ಅಮರ್ ಗೋಪಾಲ್ ಬೋಸ್ ಅವರಿಗೆ ಇದ್ದ ಒಬ್ಬ ಮಗ ವನು ಬೋಸ್ 2019ರಲ್ಲಿ ನಿಧನ ಹೊಂದಿದ್ದಾರೆ. ಜುಡಿತ್ ಹಿಲ್ ಎಂಬಾಕೆಯನ್ನು ಮದುವೆಯಾಗಿದ್ದ ಇವರಿಗೆ ಒಬ್ಬ ಹೆಣ್ಮಗಳಿದ್ದಾಳೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:20 pm, Sun, 3 November 24