
ನವದೆಹಲಿ, ಅಕ್ಟೋಬರ್ 9: ಬ್ರಿಟನ್ನ ಅತ್ಯಾಧುನಿಕ ಮಾರ್ಟ್ಲೆಟ್ ಕ್ಷಿಪಣಿಗಳನ್ನು ಪಡೆಯಲು ಭಾರತ (Indian Army) 350 ಮಿಲಿಯನ್ ಪೌಂಡ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಇತ್ತೀಚೆಗಷ್ಟೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಎರಡೂ ದೇಶಗಳು ಪರಸ್ಪರ ರಕ್ಷಣಾ ಕ್ಷೇತ್ರದಲ್ಲಿ ಕೊಡುಕೊಳ್ಳುವಿಕೆ ಹೆಚ್ಚಿಸುತ್ತಿವೆ. ಭಾರತದ ರಕ್ಷಣಾ ಕ್ಷೇತ್ರದ ಈಗಿನ ಅವಶ್ಯಕತೆ ಮತ್ತು ಭವಿಷ್ಯದ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಬ್ರಿಟನ್ನ ಕ್ಷಿಪಣಿಗಳನ್ನು ಭಾರತ ಖರೀದಿಸಲು ಹೊರಟಿದೆ.
ಬ್ರಿಟನ್ ದೇಶದ ಆರ್ಥಿಕತೆಗೂ ಈ ಡೀಲ್ ಪುಷ್ಟಿ ಕೊಡಲಿದೆ. ಯುನೈಟೆಡ್ ಕಿಂಗ್ಡಂನಲ್ಲಿರುವ ನಾಲ್ಕು ಸಂಸ್ಥಾನಗಳಲ್ಲಿ ಒಂದಾದ ಉತ್ತರ ಐರ್ಲೆಂಡ್ನಲ್ಲಿ ಕ್ಷಿಪಣಿ ತಯಾರಾಗಲಿದೆ. ಅಲ್ಲಿ 700ಕ್ಕೂ ಅಧಿಕ ನೇರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಪಾಕಿಸ್ತಾನ ಗಡಿಯಲ್ಲಿ ಭಾರತದ ಸೂಪರ್ ಗನ್; ಎಕೆ-47ಗಿಂತ 10 ಪಟ್ಟು ದೂರ ಬುಲೆಟ್ ಫೈರ್ ಮಾಡಬಲ್ಲ ಎಕೆ-630 ನಿಯೋಜನೆಗೆ ತಯಾರಿ
ಯುಕೆ ರಾಷ್ಟ್ರದ ಮಾರ್ಟ್ಲೆಟ್ಗಳು ಹಗುರ ತೂಕದ ಮಲ್ಟಿರೋಲ್ ಕ್ಷಿಪಣಿಗಳಾಗಿವೆ. ಮೇಲಿನಿಂದ ನೆಲಕ್ಕೆ ಬಡಿಯಬಲ್ಲುದು; ನೆಲದಿಂದ ಆಕಾಶದಲ್ಲಿರುವ ಗುರಿಗೆ ಹೊಡೆಯಬಲ್ಲುದು; ನೆಲದಿಂದ ನೆಲಕ್ಕೆ ಹೊಡೆಯಬಲ್ಲುದು ಹೀಗೆ ಸರ್ವವಿಧದ ಗುರಿಗಳ ನಾಶಕ್ಕೆ ಈ ಕ್ಷಿಪಣಿಗಳು ತಕ್ಕುದಾಗಿವೆ.
ಇಂಗ್ಲೀಷ್ ನಾಡಿನ ಪುರಾಣದಲ್ಲಿ ಬರುವ ಮಾರ್ಟ್ಲೆಟ್ ಎನ್ನುವ ಕಾಲ್ಪನಿಕ ಹಕ್ಕಿಯ ಹೆಸರನ್ನು ಈ ಕ್ಷಿಪಣಿಗೆ ಇಡಲಾಗಿದೆ. ದಂತಕಥೆಯ ಪ್ರಕಾರ ಈ ಹಕ್ಕಿ ಎಂದಿಗೂ ವಿರಮಿಸುವುದಿಲ್ಲ.
ಬ್ರಿಟನ್ ಸೇನೆಯ ಬತ್ತಳಿಕೆಯಲ್ಲಿರುವ ಪ್ರಧಾನ ಅಸ್ತ್ರಗಳಲ್ಲಿ ಮಾರ್ಟ್ಲೆಟ್ ಒಂದು. ಪ್ರಸಕ್ತ ಉಕ್ರೇನ್ ದೇಶಕ್ಕೆ ಈ ಕ್ಷಿಪಣಿಗಳನ್ನು ಬ್ರಿಟನ್ ನೀಡಿದೆ. ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ಈ ಮಿಸೈಲ್ಗಳನ್ನು ಬಳಸುತ್ತಿದೆ.
ಇದನ್ನೂ ಓದಿ: ಅಮೆರಿಕದ್ದೂ ಬೇಡ ರಷ್ಯದ್ದೂ ಬೇಡ, ನಮ್ಮದೇ ಯುದ್ಧವಿಮಾನ ತಯಾರಿಸೋಣ: ಕೋಟ ಹರಿನಾರಾಯಣ ಕಿವಿಮಾತು
ನಾರ್ತರ್ನ್ ಐರ್ಲೆಂಡ್ನ ಬೆಲ್ಫಾಸ್ಟ್ನಲ್ಲಿ ಮಾರ್ಟ್ಲೆಟ್ ಕ್ಷಿಪಣಿಗಳು ಮತ್ತು ಲಾಂಚರ್ಗಳನ್ನು ತಯಾರಿಸಲಾಗುತ್ತಿದೆ. ಉಕ್ರೇನ್ಗಾಗಿ ಈ ಕ್ಷಿಪಣಿಗಳನ್ನು ಇಲ್ಲಿರುವ ಘಟಕದಲ್ಲಿ ನಿರ್ಮಿಸಲಾಗುತ್ತಿದೆ. ಭಾರತಕ್ಕೂ ಕೂಡ ಉಕ್ರೇನ್ನಷ್ಟೇ ಪ್ರಮಾಣದಲ್ಲಿ ಕ್ಷಿಪಣಿಗಳನ್ನು ಬ್ರಿಟನ್ ನಿರ್ಮಿಸಿ ಕೊಡಲಿದೆ. ಮಂದಗೊಂಡಿರುವ ಯುಕೆ ಆರ್ಥಿಕತೆಗೆ ಈ ಯೋಜನೆಗಳು ಪುಷ್ಟಿ ಕೊಡುವ ನಿರೀಕ್ಷೆ ಇದೆ.
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಭಾರತಕ್ಕೆ ಮೊದಲ ಅಧಿಕೃತ ಭೇಟಿಗೆ ಬಂದಿದ್ದಾರೆ. ಅವರ ಜೊತೆ ಆ ದೇಶದ 125 ಉದ್ಯಮಿಗಳ ನಿಯೋಗವೊಂದೂ ಬಂದಿದೆ. ಮುಂಬೈನಲ್ಲಿ ಸ್ಟಾರ್ಮರ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತನಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ